ನಿರ್ವಹಣಾ ಕೆಲಸಕ್ಕೆ ತೂತುಕುಡಿ ಘಟಕ ತೆರೆಯಲು ಅನುಮತಿ ಕೋರಿ ಸುಪ್ರೀಂಗೆ ವೇದಾಂತ ಮನವಿ

Update: 2021-11-29 18:36 GMT

ಚೆನ್ನೈ, ನ. 29: ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ ತಾಮ್ರ ಘಟಕವನ್ನು ನಿರ್ವಹಣಾ ಕೆಲಸಕ್ಕೆ ಮರು ತೆರೆಯಲು ಅನುಮತಿ ಕೋರಿ ಗಣಿಗಾರಿಕೆ ಕಂಪೆನಿ ವೇದಾಂತ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. 2018 ಮೇ 22ರಂದು ಪೊಲೀಸ್ ಗೋಲಿಬಾರ್‌ನಲ್ಲಿ ವೇದಾಂತ ತಾಮ್ರ ಘಟಕದ ವಿಸ್ತರಣೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ 13 ಮಂದಿ ಮೃತಪಟ್ಟ ಬಳಿಕ ತಮಿಳುನಾಡು ಸರಕಾರ ಘಟಕವನ್ನು ಮುಚ್ಚಿತ್ತು. ಘಟಕ ಪರಿಸರದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಸರಕಾರ ಹೇಳಿತ್ತು. ಮನವಿಯಲ್ಲಿ ವೇದಾಂತ, ಮುಚ್ಚಿದ ಬಳಿಕ ಘಟಕ ತೀವ್ರವಾಗಿ ಶಿಥಿಲವಾಗುತ್ತಿದೆ ಎಂದು ಹೇಳಿದೆ. ಸಂಪೂರ್ಣ ಘಟಕಕ್ಕೆ ತುಕ್ಕು ಹಿಡಿಯುತ್ತಿದೆ. ಇದರಿಂದ ಘಟಕ ಕುಸಿಯುವ ಸಾಧ್ಯತೆ ಇದೆ. ನಿರಂತರ ನಿರ್ವಹಣೆಯ ಕೊರತೆ ಹಾಗೂ ಮಳೆ ನೀರು ಸಂಗ್ರಹವಾಗುತ್ತಿರುವುದರಿಂದ ಘಟಕ ಅಪಾಯದಲ್ಲಿದೆ ಎಂದು ಅದು ಹೇಳಿದೆ. ಘಟಕದಲ್ಲಿ ಜನವರಿ ಹಾಗೂ ಮಾರ್ಚ್‌ನಲ್ಲಿ ಆ್ಯಸಿಡ್ ಸೋರಿಕೆ ಉಂಟಾಗಿದೆ. ಇಂತಹ ಘಟನೆಗಳು ಘಟಕಕ್ಕೆ ಇನ್ನಷ್ಟು ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಈ ಸೋರಿಕೆ ಬಗ್ಗೆ ಕಂಪೆನಿ ತಮಿಳುನಾಡು ಸರಕಾರಕ್ಕೆ ವರದಿ ಮಾಡಿತ್ತು. ಆದರೆ, ಸರಕಾರ ಈ ವಿಷಯದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಂಪೆನಿ ಹೇಳಿದೆ. ಸ್ಥಳೀಯ ಮಟ್ಟದ ಪರಿವೀಕ್ಷಣಾ ಸಮಿತಿ ಘಟಕಕ್ಕೆ ಭೇಟಿ ನೀಡಿದೆ. ಸುರಕ್ಷಾ ಮೌಲ್ಯಮಾಪನ ಹಾಗೂ ಸೊತ್ತು, ಘಟಕದ ಸುರಕ್ಷೆಗೆ ನಿರ್ವಹಣೆಯ ಅಗತ್ಯತೆ ಇದೆ ಎಂದು ವೇದಾಂತ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News