ಲ್ಯಾಟಿನ್ ಅಮೆರಿಕದಲ್ಲಿ ಹಸಿವಿನ ಸಮಸ್ಯೆ 30% ಹೆಚ್ಚಳ: ವಿಶ್ವಸಂಸ್ಥೆ

Update: 2021-12-01 17:45 GMT

ನ್ಯೂಯಾರ್ಕ್, ಡಿ.1: ಲ್ಯಾಟಿನ್ ಅಮೆರಿಕ ಹಾಗೂ ಕೆರಿಬಿಯನ್ ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯಲ್ಲಿ 2019ರಿಂದ 30% ಹೆಚ್ಚಳವಾಗಿ ಕಳೆದ 15 ವರ್ಷಗಳಲ್ಲೇ ಗರಿಷ್ಟ ಹಂತ ತಲುಪಿದೆ . ಇದು ಗಂಭೀರ ಪರಿಸ್ಥಿತಿಯಾಗಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಗಳ ಒಕ್ಕೂಟ ಹೇಳಿದೆ.

ಪ್ರಸ್ತುತ, ಈ ವಲಯದ 59 ಮಿಲಿಯನ್‌ಗೂ ಅಧಿಕ ಜನತೆಗೆ ಸಾಕಷ್ಟು ಆಹಾರದ ಕೊರತೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಹಾರದ ಕೊರತೆ ಎದುರಿಸುವವರ ಸಂಖ್ಯೆ 13.8 ಮಿಲಿಯನ್ ಹೆಚ್ಚಿದೆ . ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ದೇಶಗಳ 9%ಕ್ಕೂ ಅಧಿಕ ಜನತೆ ಹಸಿವಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮಂಗಳವಾರ ಪ್ರಕಟಗೊಂಡ‘ ಆಹಾರ ಭದ್ರತೆ ಮತ್ತು ಪೌಷ್ಟಿಕತೆ 2021’  ವರದಿಯಲ್ಲಿ ವಿಶ್ವಸಂಸ್ಥೆಯ 5 ಏಜೆನ್ಸಿಗಳ ಒಕ್ಕೂಟ ತಿಳಿಸಿದೆ.

ಆಹಾರ ಭದ್ರತೆಗೆ ಸಂಬಂಧಿಸಿ ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ದೇಶಗಳು ಗಂಭೀರ ಪರಿಸ್ಥಿತಿ ಎದುರಿಸುತ್ತಿವೆ ಎಂದು ಗಟ್ಟಿಧ್ವನಿಯಲ್ಲಿ ಮತ್ತು ಸ್ಪಷ್ಟವಾಗಿ ಹೇಳಬೇಕಾಗಿದೆ . ಹಸಿವಿನಿಂದ ಬಳಲುವವರ ಪ್ರಮಾಣ 2014ರಿಂದ 20ರ ಅವಧಿಯಲ್ಲಿ 79%ದಷ್ಟು ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ(ಎಫ್‌ಒಕ್ಯು)ನ ಪ್ರಾದೇಶಿಕ ಪ್ರತಿನಿಧಿ ಜೂಲಿಯೊ ಬೆರ್ಡೆಗ್ ಹೇಳಿದ್ದಾರೆ. ಕೊರೋನ ಸಾಂಕ್ರಾಮಿಕ ಈ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿತು ಎಂದು ವರದಿ ಹೇಳಿದೆ.

ಈ ವಲಯದ ಅತ್ಯಂತ ದೊಡ್ಡ ಮತ್ತು ಅತ್ಯಧಿಕ ಜನಸಂಖ್ಯೆಯ ದೇಶವಾದ ಬ್ರೆಝಿಲ್‌ನಲ್ಲಿ ಸುಮಾರು 19 ಮಿಲಿಯ ಜನತೆ ಕೊರೋನ ಸೋಂಕಿನ ಸಂದರ್ಭ ಆಹಾರದ ಕೊರತೆ ಎದುರಿಸಿದ್ದರು. ದೇಶದ ಜನಸಂಖ್ಯೆಯ ಸುಮಾರು 50%ದಷ್ಟು ಅಂದರೆ 117 ಮಿಲಿಯನ್ ಜನತೆಗೆ ಆಹಾರದ ಭದ್ರತೆ ಸಮಸ್ಯೆ ಎದುರಾಗಿದೆ. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳ ಪ್ರತೀ 10 ಜನರಲ್ಲಿ 4 ಮಂದಿ, ಅಥವಾ 267 ಮಿಲಿಯನ್ ಜನತೆ 2020ರಲ್ಲಿ ಸಾಧಾರಣ ಅಥವಾ ಗಂಭೀರ ಪ್ರಮಾಣದ ಆಹಾರ ಅಭದ್ರತೆ ಸಮಸ್ಯೆ ಎದುರಿಸುತ್ತಿದ್ದಾರೆ .

2019ಕ್ಕೆ ಹೋಲಿಸಿದರೆ ಇದು 9% ಹೆಚ್ಚಳವಾಗಿದೆ. ವಿಶ್ವದ ಇತರ ವಲಯಗಳನ್ನು ಗಮನಿಸಿದರೆ ಇದು ಅತ್ಯಂತ ಸ್ಪಷ್ಟ ಹೆಚ್ಚಳವಾಗಿದೆ. ಆದರೆ ಈ ಎರಡೂ ವಲಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಕುಂಠಿತ ಬೆಳವಣಿಗೆ ಸಮಸ್ಯೆ ಸ್ವಲ್ಪ ಕಡಿಮೆಯಾಗಿದೆ. ಅಲ್ಲದೆ ಮಕ್ಕಳು ಕೃಶಕಾಯವಾಗುವ ಸಮಸ್ಯೆಯೂ ಈ ವಲಯದಲ್ಲಿ 1.3% ಆಗಿದ್ದು ವಿಶ್ವದ ಇತರೆಡೆ ಇದು 6.7% ಆಗಿದೆ ಎಂದು ವರದಿ ಹೇಳಿದೆ. ಜಾಗತಿಕವಾಗಿ, ಪ್ರತೀ ನಿಮಿಷಕ್ಕೆ 11 ವ್ಯಕ್ತಿ ಹಸಿವಿನಿಂದ ಸಾಯುತ್ತಿದ್ದಾನೆ. ಕಳೆದ ವರ್ಷ ಬರಗಾಲದಂತಹ ವಿಪತ್ತು 6 ಪಟ್ಟು ಹೆಚ್ಚಿರುವುದು ಇದಕ್ಕೆ ಮೂಲ ಕಾರಣ ಎಂದು ‘ಓಕ್ಸ್‌ಫಾಮ್’ ಸಂಸ್ಥೆ ವರದಿ ಮಾಡಿದೆ.

ಮಹಿಳೆಯರ ಪ್ರಮಾಣ ಅಧಿಕ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ರಾಷ್ಟ್ರಗಳಲ್ಲಿ ಹಸಿವಿನ ಸಮಸ್ಯೆ ಹೆಚ್ಚಳದಿಂದ ಹೆಚ್ಚು ಪರಿಣಾಮಕ್ಕೆ ಒಳಗಾದವರು ಮಹಿಳೆಯರು. 2020ರಲ್ಲಿ ಈ ವಲಯದ 41.8% ಮಹಿಳೆಯರಲ್ಲಿ ಸಾಧಾರಣ ಅಥವಾ ತೀವ್ರ ಪ್ರಮಾಣದ ಆಹಾರ ಅಭದ್ರತೆಯ ಭಾವ ಕಾಡಿತ್ತು.(ಪುರುಷರ ಪ್ರಮಾಣ 32%). ಈ ಅಸಮಾನತೆ ಕಳೆದ 6 ವರ್ಷದಿಂದ ಹೆಚ್ಚುತ್ತಿದೆ. 2019ರಲ್ಲಿ ಅಸಮಾನತೆಯ ಪ್ರಮಾಣ 6.4% ಆಗಿದ್ದರೆ 2020ರಲ್ಲಿ 9.6%ಕ್ಕೆ ಹೆಚ್ಚಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News