ಗುಜರಾತ್ ಹಿಂಸಾಚಾರ ಕುರಿತು ಸಿಬಿಎಸ್‌ಇ ಪರೀಕ್ಷೆಯಲ್ಲಿ ಪ್ರಶ್ನೆ: ಅನುಚಿತ ಪ್ರಶ್ನೆ ಎಂದು ಕ್ಷಮೆಯಾಚಿಸಿದ ಮಂಡಳಿ

Update: 2021-12-02 08:34 GMT
Photo: Twitter

ಹೊಸದಿಲ್ಲಿ: "ಯಾವ ಸರಕಾರದ ಅಡಿಯಲ್ಲಿ ಗುಜರಾತ್‌ನಲ್ಲಿ 2002ರಲ್ಲಿ ವ್ಯಾಪಕ ಮುಸ್ಲಿಂ ವಿರೋಧಿ ಹಿಂಸಾಚಾರ ನಡೆಯಿತು?'' - ಪ್ರಶ್ನೆಯನ್ನು ಸಿಬಿಎಸ್‌ಇ ಸೋಶಿಯಾಲಜಿ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಬುಧವಾರ ಕೇಳಲಾದ ಕೆಲವೇ ಗಂಟೆಗಳಲ್ಲಿ ಸಿಬಿಎಸ್‌ಇ ಕ್ಷಮೆಯಾಚಿಸಿದೆ. ಇದೊಂದು ಅನುಚಿತ ಪ್ರಶ್ನೆ ಹಾಗೂ ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿಯೂ ಮಂಡಳಿ ಹೇಳಿದೆ.

ಈ ಪ್ರಶ್ನೆಯ ಜತೆಗಿದ್ದ ಬಹು ಆಯ್ಕೆಗಳಲ್ಲಿ- ಕಾಂಗ್ರೆಸ್, ಬಿಜೆಪಿ, ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕನ್ ಇದ್ದವು.

ಈ ಕುರಿತು ಟ್ವೀಟ್ ಮಾಡಿದ ಸಿಬಿಎಸ್‌ಇ, "ಮಂಡಳಿಯ ಮಾರ್ಗಸೂಚಿಗೆ ವಿರುದ್ಧವಾಗಿ ಈ ಪ್ರಶ್ನೆ ಕೇಳಲಾಗಿದೆ, ಈ ತಪ್ಪನ್ನು ಒಪ್ಪಿಕೊಳ್ಳುತ್ತೇವೆ ಹಾಗೂ ಸಂಬಂಧಿತರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ,'' ಎಂದು ಹೇಳಿದೆ.

ಈ ಪ್ರಶ್ನೆಯನ್ನು 12ನೇ ತರಗತಿಯ ಎನ್‌ಸಿಇಆರ್‌ಟಿ ಸೋಶಿಯಾಲಜಿ ಪಠ್ಯಪುಸ್ತಕದ `ದಿ ಚ್ಯಾಲೆಂಜಸ್ ಆಫ್ ಕಲ್ಚರಲ್ ಡೈವರ್ಸಿಟಿ' ಎಂಬ ಅಧ್ಯಾಯದಿಂದ ಆರಿಸಲಾಗಿತ್ತು. ಬಿಜೆಪಿ ಸರಕಾರವಿದ್ದಾಗ 2002ರಲ್ಲಿ ಹಿಂಸಾಚಾರ ನಡೆದಿತ್ತು ಎಂದು ಈ ಪಾಠದಲ್ಲಿ ವಿವರಿಸಲಾಗಿದೆ.

ಸಿಬಿಎಸ್‌ಇ ಪರೀಕ್ಷಾ ಪ್ರಕ್ರಿಯೆಯಲ್ಲಿ ವಿಷಯ ತಜ್ಞರಿದ್ದು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವವರು ಮತ್ತು ಅದನ್ನು ಪರಿಶೀಲಿಸುವವರಿರುತ್ತಾರೆ. ಈ ತಜ್ಞರ ಗುರುತುಗಳನ್ನು ಗೌಪ್ಯವಾಗಿಡಲಾಗುತ್ತದೆ ಹಾಗೂ ಅವರು ಸೂಚಿಸುವ ಪ್ರಶ್ನೆಗಳನ್ನು ಬಳಸಲಾಗುವುದೇ ಎಂಬ ಬಗ್ಗೆ ಅವರಿಗೆ ಕೂಡ ತಿಳಿದಿರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News