ಸಮ ಸಮಾಜದ ಕಲ್ಪನೆಗೆ ತೊಡಕಾಗಿರುವ ಜಾತಿ ವ್ಯಾಮೋಹ

Update: 2021-12-02 19:30 GMT

ಇಂದು ಮುಖ್ಯವಾಗಿ ರಾಜಕಾರಣವು ಜಾತೀಯತೆಯನ್ನು ಪೋಷಿಸಿಕೊಂಡು ಹೋಗುವಲ್ಲಿ ಪ್ರಮುಖ ಸ್ಥಾನವನ್ನು ಸಾಧಿಸುತ್ತಿದೆ. ಭಾರತದ ರಾಜಕಾರಣದಲ್ಲಿ ಜಾತಿಯೇ ಪ್ರಮುಖ ಅಂಶವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ದುರಂತವಾಗಿದೆ. ಭಾರತೀಯ ಸಮಾಜದ ಸಂದರ್ಭದಲ್ಲಿ ಜಾತಿ ರಾಜಕೀಯ ಸಮೀಕರಣ ಒಂದು ಪ್ರಭಲ ಆಧಾರವಾಗಿ ಹೊರ ಹೊಮ್ಮಿದ್ದು ಏಕಕಾಲದಲ್ಲಿ ಒಗ್ಗೂಡಿಸುವಿಕೆ ಮತ್ತು ಬೇರ್ಪಡಿಸುವಿಕೆಗಳೆರಡರ ಪ್ರಕ್ರಿಯೆಗಳನ್ನು ಪ್ರಭಾವಿಸುತ್ತಿದೆ. ಅಧಿಕಾರದ ಲಾಲಸೆ ಪರಾಕಾಷ್ಠೆಯನ್ನು ತಲುಪಿದ್ದು ಸಮಾಜದ ಹಿತಾಸಕ್ತಿಗಳು ನೇಪಥ್ಯಕ್ಕೆ ಸರಿಯುತ್ತಿವೆ. ಜಾತಿಯ ನಿಸ್ಸಂಕೋಚ ಬಳಕೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ ತತ್ವಗಳಿಗೆ ಸವಾಲಾಗಿ ಪರಿಣಮಿಸಿವೆ.



ಭಾರತದಲ್ಲಿ ಜಾತಿ ಪದ್ಧತಿ ಇನ್ನೂ ಜೀವಂತವಾಗಿದೆ. ಜಾತಿ ಪದ್ಧತಿಯೊಂದಿಗೆ ತಳಕು ಹಾಕಿಕೊಂಡಿರುವ ಅಸ್ಪಶ್ಯತೆಯ ಆಚರಣೆ ಕೂಡ ದೂರವಾಗಿಲ್ಲ. ದಲಿತರನ್ನು ಉದ್ದೇಶ ಪೂರ್ವಕವಾಗಿ ದೇಗುಲ ಪ್ರವೇಶ ಮಾಡದಂತೆ, ದಲಿತರಿಗೆ ಕ್ಷೌರ ಮಾಡದಂತೆ ತಡೆಯಲಾಗುತ್ತಿದೆ ಮತ್ತು ಇಂದಿಗೂ ಗ್ರಾಮೀಣ ಪ್ರದೇಶಗಳ ಅನೇಕ ಕಡೆ ಹೋಟೆಲ್‌ಗಳಲ್ಲಿ ದಲಿತರಿಗಾಗಿ ಪ್ರತ್ಯೇಕ ಲೋಟ ಮತ್ತು ತಟ್ಟೆಗಳನ್ನು ಕೊಡುವುದು ಸೇರಿದಂತೆ ಹಲವಾರು ವಿಧಗಳಲ್ಲಿ ಅಸ್ಪಶ್ಯತೆಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಜಾತಿ ಮತ್ತು ಅಸ್ಪಶ್ಯತೆ ಇಂದಿಗೂ ಸಂಪೂರ್ಣವಾಗಿ ನಾಶವಾಗಿಲ್ಲದಿರುವುದು ನಾಗರಿಕ ಸಮಾಜದ ಹೇಯ ಮತ್ತು ಹೀನ ಬೆಳವಣಿಗೆಯಾಗಿದೆ.

ಇತ್ತೀಚೆಗೆ ದೇವರ ಪಲ್ಲಕ್ಕಿಯನ್ನು ಅನ್ಯ ಜಾತಿಯ ಶಾಸಕರೊಬ್ಬರು ಹೊತ್ತ ವಿಚಾರ ಮತ್ತು ಅದಕ್ಕೆ ಸಂಬಂಧಿಸಿದಂತೆ ತಪ್ಪು ಕಾಣಿಕೆ ಮತ್ತು ಕ್ಷಮೆ ಯಾಚಿಸಿದ ಪ್ರಸಂಗ, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮೈಲಾಂಡಹಳ್ಳಿ ಗ್ರಾಮದ ಮಾರಿಕಾಂಬ ದೇವಸ್ಥಾನಕ್ಕೆ ದಲಿತರಿಗೆ ದೇಗುಲ ಪ್ರವೇಶ ನಿಷೇಧ ಮತ್ತು ಗ್ರಾಮದಲ್ಲಿನ ಏಕೈಕ ಕ್ಷೌರದ ಅಂಗಡಿಯಲ್ಲಿ ದಲಿತರಿಗೆ ಕಟಿಂಗ್ ಮತ್ತು ಶೇವಿಂಗ್ ಮಾಡದಂತೆ ಒತ್ತಡ ಹೇರುತ್ತಿರುವುದು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ಮಗುವೊಂದು ಆಂಜನೇಯಸ್ವಾಮಿ ದೇವಾಲಯ ಪ್ರವೇಶಿಸಿದ್ದಕ್ಕೆ ದೇವಾಲಯವನ್ನು ಶುದ್ಧೀಕರಿಸಿದ್ದಲ್ಲದೆ ಮಗುವಿನ ಪೋಷಕರಿಗೆ ದಂಡ ವಿಧಿಸಿದ್ದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಏಳುದಂಡಿನ ಮಾರಮ್ಮನ ದೇವಸ್ಥಾನಕ್ಕೆ ಮತ್ತು ಹೋಟೆಲ್‌ಗಳ ಒಳಗೆ ದಲಿತರಿಗೆ ಪ್ರವೇಶ ನಿರಾಕರಣೆ ಮತ್ತು ಕ್ಷೌರ ಮಾಡದಿರುವುದು ಹಾಗೂ ಉತ್ತರ ಕರ್ನಾಟಕದ ಕೆಲವು ಗ್ರಾಮಗಳಲ್ಲಿ ದಲಿತರ ಮದುವೆ ಅಥವಾ ಸಾವುಗಳು ಸಂಭವಿಸಿದಾಗ ಇಡೀ ಊರಿನ ಅಂಗಡಿಗಳನ್ನು ಬಂದ್ ಮಾಡುವುದು, ಮರ್ಯಾದಾ ಹತ್ಯೆಗಳು ಸೇರಿದಂತೆ ಪ್ರತಿನಿತ್ಯ ಹಲವು ಘಟನೆಗಳು ನಡೆಯುತ್ತಿದ್ದು ಜಾತಿ ಪದ್ಧತಿ ಮತ್ತು ಅಸ್ಪಶ್ಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಗಳಾಗಿವೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜಾತೀಯತೆ ನಿರ್ಮೂಲನೆಯಾಗಿಲ್ಲ. ಜಾತಿ ಪ್ರೇರಿತ ಹಿಂಸಾಕೃತ್ಯಗಳು ಇನ್ನೂ ನಡೆಯುತ್ತಲೇ ಇವೆ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ. 1991ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ಮಹಿಳೆ ಸೇರಿ ಮೂವರನ್ನು ಮರ್ಯಾದೆಗೇಡು ಹತ್ಯೆ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅರ್ಜಿಗಳು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ನಂತರ ಪ್ರಕಟಿಸಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಇದನ್ನು ಉಲ್ಲೇಖಿಸಿದ್ದು ಜಾತಿ ಹೆಸರಿನಲ್ಲಿ ನಡೆಯುವ ಇಂತಹ ಘೋರ ಪ್ರಕರಣಗಳನ್ನು ನಾಗರಿಕ ಸಮಾಜ ತಿರಸ್ಕರಿಸಬೇಕು ಎಂದು ಹೇಳಿದೆ. ಜಾತಿ ಆಧಾರಿತ ಆಚರಣೆಗಳು ಮತಾಂಧತೆಯನ್ನು ಪೋಷಿಸುತ್ತವೆ. ಇಂತಹ ಆಚರಣೆಗಳು ಈಗಲೂ ಜೀವಂತವಾಗಿವೆ. ಎಲ್ಲರೂ ಸಮಾನ ಎಂಬ ಸಂವಿಧಾನದ ಆಶಯಕ್ಕೆ ಇವು ದೊಡ್ಡ ಅಡ್ಡಿಯಾಗಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೆಳ ಜಾತಿಗೆ ಸೇರಿದ ಮಹಿಳೆಯೊಬ್ಬರು ಅಂಗಡಿಯಲ್ಲಿ ಟೊಮ್ಯಾಟೊ ಖರೀದಿಸುವಾಗ ಹಣವನ್ನು ಅಂಗಡಿ ಮಾಲಕ ಕೈಯಿಂದ ತೆಗೆದುಕೊಳ್ಳದೆ ಮಹಿಳೆ ಮಾಲಕನ ಕೈ ತಾಕದಂತೆ ಮೇಲಿನಿಂದ ಮಾಲಕನ ಕೈಗೆ ಹಾಕುವುದು ಹಾಗೂ ಮಾಲಕ ಟೊಮ್ಯಾಟೊಗಳನ್ನು ಮಹಿಳೆಯ ಸೆರಗಿಗೆ ಮೇಲಿನಿಂದ ಸುರಿಯುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದನ್ನು ಸಾಮಾನ್ಯವಾಗಿ ಎಲ್ಲರೂ ವೀಕ್ಷಿಸಿದ್ದೇವೆ. ಇದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ದಲಿತರಿಗೆ ಕುಡಿಯುವ ನೀರನ್ನು ಲೋಟದಲ್ಲಿ ಕೊಡುವ ಬದಲು ಬೊಗಸೆಯಲ್ಲಿ ಮೇಲಿನಿಂದ ಸುರಿಯುವ ಪದ್ಧತಿ ಇಂದಿಗೂ ಮುಂದುವರಿದೇ ಇದೆ. ಇಂತಹ ಪ್ರಕರಣಗಳು ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿದ್ದು ಕೆಲವರು ಮನುಷ್ಯರ ರೀತಿ ವರ್ತಿಸುವ ಬದಲು ಮೃಗಗಳಂತೆ ವರ್ತಿಸುವುದು ಇಡೀ ದೇಶವೇ ತಲೆ ತಗ್ಗಿಸುವ ಸಂಗತಿಯಾಗಿದೆ.

ಜಾತಿಯ ಹೆಸರಿನಲ್ಲಿ ನಡೆಯುವ ಹಿಂಸಾಚಾರ, ತಾರತಮ್ಯ, ವೈಷಮ್ಯ, ಮರ್ಯಾದಾ ಹತ್ಯೆಗಳು ಅಕ್ಷಮ್ಯ ಅಪರಾಧಗಳಾಗಿವೆ. ಅಸ್ಪಶ್ಯತೆ ಆಚರಣೆ ಸಾಮಾಜಿಕ ಪಿಡುಗಾಗಿದ್ದು ಇದನ್ನು ಹೋಗಲಾಡಿಸುವುದಕ್ಕೆ ಸರಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ ಅವುಗಳ ಅನುಷ್ಠಾನದಲ್ಲಿ ಮಾತ್ರ ಮೀನಾ-ಮೇಷ ಏಣಿಸಲಾಗುತ್ತಿದೆ. ಅಸ್ಪಶ್ಯತೆ ಆಚರಣೆ ನಡೆಯುವುದು ಸಂಬಧಿಸಿದ ಇಲಾಖೆಗಳ ಗಮನಕ್ಕೆ ಬಂದ ತಕ್ಷಣ ಯಾರೂ ದೂರು ನೀಡದಿದ್ದರೂ ಸರಕಾರದ ವತಿಯಿಂದಲೇ ಎಫ್‌ಐಆರ್ ಹಾಕಿ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಲು ಮುಂದಾಗಬೇಕಿದೆ. ಇಂತಹ ಘಟನೆಗಳು ನಡೆದಾಗ ನೊಂದ ವ್ಯಕ್ತಿ ಅವನ ಕುಟುಂಬ ಹಾಗೂ ಸಾಕ್ಷಿದಾರರಿಗೆ ಪೊಲೀಸರಿಂದ ಸೂಕ್ತ ರಕ್ಷಣೆ ನೀಡಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಅಪರಾಧ ಎಸಗುವ ಹೆಚ್ಚಿನವರು ಹಣಬಲ ಮತ್ತು ರಾಜಕೀಯ ಬಲವುಳ್ಳವರಾಗಿರುತ್ತಾರೆ. ಸಾಕ್ಷಗಳನ್ನು ನಾಶ ಪಡಿಸುವ ಪ್ರಯತ್ನಗಳೂ ನಡೆಯುತ್ತವೆ. ಆದ್ದರಿಂದ ಇಂತಹ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕಾಗಿದೆ.

ದೇವಾಲಯ ಪ್ರವೇಶ, ಕ್ಷೌರ, ಶವ ಸಂಸ್ಕಾರ, ಸ್ಮಶಾನ ಇವುಗಳು ಮೇಲು ಕೀಳೆನ್ನದೆ ಎಲ್ಲಾ ಜನವರ್ಗಗಳಿಗೂ ಮೂಲಭೂತವಾಗಿ ಸಿಗಬೇಕಾದ ಸೌಲಭ್ಯಗಳು. ಆದರೆ ಸಮಾಜದ ಅಂಚಿನಲ್ಲಿರುವ ಜನವರ್ಗಗಳು ಇಂದಿಗೂ ಇಂತಹ ಕನಿಷ್ಠ ಮೂಲಭೂತ ಸೌಲಭ್ಯಗಳ ಸಮಾನ ಅವಕಾಶಗಳಿಗಾಗಿ ಹೋರಾಟ ನಡೆಸುತ್ತಲೇ ಇರುವುದು ಈ ದೇಶದ ದುರಂತವಾಗಿದೆ. ಆಧುನಿಕ ಸಮಾಜ ಮತ್ತು ಕಾಲದಲ್ಲಿಯೂ ಜಾತಿಯ ಹೆಸರಿನಲ್ಲಿ ಅಮಾನವೀಯವಾದ ಅಸ್ಪಶ್ಯತೆ ಆಚರಣೆ ಮುಂದುವರಿದಿರುವುದು ಅಕ್ಷಮ್ಯ ಅಪರಾಧ ಮತ್ತು ಇಡೀ ದೇಶಕ್ಕೆ ನಾಚಿಕೆಗೇಡಿನ ವಿಷಯವಾಗಿದೆ. ಮನುಷ್ಯ ಮನುಷ್ಯನನ್ನು ಗೌರವಿಸದ ಅಸ್ಪಶ್ಯತೆ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಎಷ್ಟೋ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸದೆ ರಾಜಿ ಪಂಚಾಯಿತಿ ಹೆಸರಿನಲ್ಲಿ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುವುದು ಸರ್ವೇಸಾಮಾನ್ಯ ವಿಷಯವಾಗಿದೆ.

ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ದೇಶದಲ್ಲಿ ಸಮಾಜದ ಅಂಚಿನಲ್ಲಿರುವ ಜನರ ಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಕೇವಲ ಆರ್ಥಿಕ ಪ್ರಗತಿ ಸಾಧಿಸಿದರಷ್ಟೇ ಅದನ್ನು ಅಭಿವೃದ್ಧಿ ಎನ್ನಲಾಗದು. ಬದಲಾಗಿ ಸಾಮಾಜಿಕ ಪ್ರಗತಿ ಮತ್ತು ಸಮಾನತೆ ಕೂಡ ಅಷ್ಟೇ ಮುಖ್ಯ ಎಂಬುದನ್ನು ಮರೆಯಬಾರದು. ಡಾ.ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಯನ್ನೇ ಸಾಧಿಸಲು ಹೊರಟು ಆ ನಿಟ್ಟಿನಲ್ಲಿ ಸಾಕಷ್ಟು ಹೋರಾಟಗಳನ್ನು ನಡೆಸಿದ್ದಲ್ಲದೆ ಹಲವಾರು ಕಾನೂನುಗಳನ್ನು ಜಾರಿ ಮಾಡಲು ಶ್ರಮಿಸಿದರು. ಆದರೂ ಇವತ್ತಿನ ನಮ್ಮ ಸಾಮಾಜಿಕ ಸನ್ನಿವೇಶವು ಸಂಪೂರ್ಣವಾಗಿ ಅವತ್ತಿನಂತೆ ಇಲ್ಲದಿದ್ದರೂ ಜಾತಿ ಎನ್ನುವುದು ಸಂಪೂರ್ಣವಾಗಿ ಹೋಗಿಲ್ಲ. ಹೋಗುವ ಲಕ್ಷಣಗಳು ಕಾಣಿಸುತ್ತಿಲ್ಲ. ನಮ್ಮ ದೇಶದಲ್ಲಿ ಜಾತಿ ತಾರತಮ್ಯ ಅಷ್ಟು ಸುಲಭವಾಗಿ ಹೋಗುವಷ್ಟು ದುರ್ಬಲವಾಗಿಲ್ಲ. ಜಾತಿ ಶೋಷಣೆ ವಿರುದ್ಧ ದನಿಯಾಗುವುದು ಆದ್ಯತೆಯಾಗಬೇಕಿದೆ. ಅಸ್ಪಶ್ಯತೆ ಆಚರಣೆಯೇ ಮೊದಲ ಮಹಾದ್ರೋಹ ಎಂದು ಪರಿಗಣಿಸಬೇಕು. ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಯನ್ನು ತುಂಬಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ.

1950ರಲ್ಲಿಯೇ ಸಂವಿಧಾನವು ಅಸ್ಪಶ್ಯತೆ ಆಚರಣೆಯು ಅಪರಾಧವೆಂದು ಘೋಷಿಸಿದ್ದರೂ ಈ ಪಿಡುಗು ಇಂದಿಗೂ ತನ್ನ ಬೇರುಗಳನ್ನು ಬಲಪಡಿಸಿಕೊಳ್ಳುತ್ತಲೇ ಹೋಗುತ್ತಿದೆ. ಶಿಕ್ಷಣದ ಮಟ್ಟ ಹೆಚ್ಚಾದಂತೆ ಕೆಲವು ಸಮುದಾಯಗಳಲ್ಲಿ ಅಸ್ಪಶ್ಯತೆಯ ಆಚರಣೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ನಿಜವಾದರೂ ನಗರ ಪ್ರದೇಶಗಳಲ್ಲಿರುವ ವಿದ್ಯಾವಂತರು ಕೂಡ ಮನೆಯನ್ನು ಬಾಡಿಗೆಗೆ ಕೊಡುವ ಸಂದರ್ಭಗಳಲ್ಲಿ ಜಾತಿ ಮತ್ತು ಆಹಾರ ಕ್ರಮವನ್ನು ಕೇಳುವುದು ಸಾಮಾನ್ಯ ವಿಷಯವಾಗಿದೆ. ದಲಿತರಿಗೆ ಇಂದಿಗೂ ಕೆಲವರು ಮನೆಯನ್ನು ಬಾಡಿಗೆಗೆ ಕೊಡಲು ಕೂಡ ನಿರಾಕರಿಸುವ ಹಲವು ಪ್ರಕರಣಗಳು ನಮ್ಮ ಮುಂದೆಯೇ ನಡೆಯುತ್ತಿವೆ. ನೇರವಾಗಿ ಜಾತಿ ಯಾವುದು? ಎಂದು ಕೇಳುವುದರ ಬದಲು ಕೆಲವರು ಸಸ್ಯಾಹಾರಿಗಳಿಗೆ ಮಾತ್ರ ಬಾಡಿಗೆ ಕೊಡುತ್ತೇವೆಂದು ಹೇಳುವ ಮೂಲಕ ಪರೋಕ್ಷವಾಗಿ ಅಸ್ಪಶ್ಯತೆ ಮತ್ತು ಜಾತಿ ತಾರತಮ್ಯವನ್ನು ಮಾಡುತ್ತಿರುವುದು ನಡೆದೇ ಇದೆ. ಜಾತಿ ಪದ್ಧತಿಯು ಭಾರತದಲ್ಲಿ ವಿವಿಧ ಸ್ತರಗಳಲ್ಲಿ ಮುಂದುವರಿದಿದೆ. ಅಂತರ್‌ಜಾತಿಯ ವಿವಾಹಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದ್ದರೂ ಅವುಗಳು ಹೆಚ್ಚಾಗಿ ವ್ಯಕ್ತಿಗತವಾಗುತ್ತಿವೆಯೇ ಹೊರತು ಜಾತಿ ಪದ್ಧತಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿ ಫಲಿತಾಂಶಗಳನ್ನು ನಿರೀಕ್ಷಿಸಲಾಗದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೂ ಅಂತರ್‌ಜಾತಿಯ ವಿವಾಹಗಳು ಸ್ವಲ್ಪ ಮಟ್ಟಿಗಾದರೂ ಜಾತೀಯತೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಭಾರತದಲ್ಲಿ ದಲಿತರನ್ನು ಕೀಳಾಗಿ ಕಾಣುವುದನ್ನು ಹಲವಾರು ಪ್ರಗತಿಶೀಲ ಚಿಂತಕರು ಭಾರತದ ತೆರೆಯ ಹಿಂದಿನ ಪ್ರತ್ಯೇಕತಾ ನೀತಿ ಎಂದು ಕರೆದಿದ್ದಾರೆ. ಎಲ್ಲರೂ ಹೇಳುವಂತೆ, ಸದ್ಯದ ಪರಿಸ್ಥಿತಿಯಲ್ಲಿ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಸಮಾಜದ ಅಂಚಿನಲ್ಲಿರುವವರು ಹಲವು ಸರಕಾರಿ ಯೋಜನೆಗಳಡಿ ಸಾಕಷ್ಟು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ನಿಜ. ಆದರೆ ಸಾಮಾಜಿಕವಾಗಿ ಅವರ ಸ್ಥಾನಮಾನಗಳಲ್ಲಿ ಯಾವುದೇ ಪರಿಣಾಮಕಾರಿ ಬದಲಾವಣೆಗಳನ್ನು ಇದುವರೆಗೂ ಸಾಧಿಸಲು ಸಾಧ್ಯವಾಗಿಲ್ಲ.

ನಾನಕ್, ಕಬೀರ್, ಚೈತನ್ಯ, ರಾಮಾನುಜಾಚಾರ್ಯ, ಸಂತ ತುಕರಾಮ್, ಬಸವಣ್ಣ ಮುಂತಾದ ಧಾರ್ಮಿಕ ಮುಖಂಡರೂ ಜಾತಿ ಆಧಾರಿತ ತಾರತಮ್ಯಗಳನ್ನು ಸಾರಾಸಗಟಾಗಿ ನಿರಾಕರಿಸಿ ಎಲ್ಲಾ ಜಾತಿಯ ಜನರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು. 19ನೇ ಶತಮಾನದಲ್ಲಿ ರಾಜಾರಾಮ್ ಮೋಹನ್‌ರಾಯ್‌ರವರ ನೇತೃತ್ವದಲ್ಲಿ ಅಸ್ಪಶ್ಯತೆ ಮತ್ತು ಜಾತೀಯುತೆ ವಿರುದ್ಧ ದೊಡ್ಡ ಆಂದೋಲನವೇ ನಡೆಯಿತು. ದಯಾನಂದ ಸರಸ್ವತಿಯವರ ಆರ್ಯ ಸಮಾಜ ಕೂಡ ದಲಿತರೊಂದಿಗಿನ ತಾರತಮ್ಯವನ್ನು ತೀವ್ರವಾಗಿ ವಿರೋಧಿಸಿತು. ಸ್ವಾಮಿ ವಿವೇಕಾನಂದರು ದಲಿತರ ವಿಮೋಚನೆಗಾಗಿ ಹೋರಾಟ ಮಾಡಿದರು. ವೇದಗಳಲ್ಲಿ ಪಾರಂಗತೆ ಪಡೆದಿದ್ದ ನಾರಾಯಣ ಗುರುಗಳೂ ಸಹ ಜಾತಿ ಪದ್ಧತಿಯನ್ನು ಕಟು ಶಬ್ದಗಳಿಂದ ಟೀಕಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತೀಯತೆ ಮತ್ತು ಅಸ್ಪಶ್ಯತೆಯನ್ನು ಅತ್ಯಂತ ಕಟುವಾಗಿ ಟೀಕಿಸಿದ ಜೊತೆಗೆ ಸಂವಿಧಾನದಲ್ಲಿ ಅಸ್ಪಶ್ಯತೆಯನ್ನು ಹೋಗಲಾಡಿಸಲು ಮತ್ತು ಸಮಾನತೆಗಾಗಿ ಹಲವಾರು ಕಾಯ್ದೆಗಳನ್ನು ರೂಪಿಸಿದರು. ಆದರೂ ಜಾತಿ ವಿನಾಶದ ದಾರಿಯಲ್ಲಿ ಅಂತಹ ದೊಡ್ಡ ಸಾಧನೆಯ್ನನೇನು ಭಾರತದಲ್ಲಿ ಇದುವರೆಗೂ ಮಾಡಲಾಗಿಲ್ಲ. ಶತಮಾನಗಳಿಂದ ಮಾಡಿದ ಗಾಯಗಳನ್ನು ಅಷ್ಟು ಸುಲಭವಾಗಿ ಅಳಿಸಿಹಾಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ಇಂದು ಮುಖ್ಯವಾಗಿ ರಾಜಕಾರಣವು ಜಾತೀಯತೆಯನ್ನು ಪೋಷಿಸಿಕೊಂಡು ಹೋಗುವಲ್ಲಿ ಪ್ರಮುಖ ಸ್ಥಾನವನ್ನು ಸಾಧಿಸುತ್ತಿದೆ. ಭಾರತದ ರಾಜಕಾರಣದಲ್ಲಿ ಜಾತಿಯೇ ಪ್ರಮುಖ ಅಂಶವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ದುರಂತವಾಗಿದೆ. ಭಾರತೀಯ ಸಮಾಜದ ಸಂದರ್ಭದಲ್ಲಿ ಜಾತಿ ರಾಜಕೀಯ ಸಮೀಕರಣ ಒಂದು ಪ್ರಭಲ ಆಧಾರವಾಗಿ ಹೊರ ಹೊಮ್ಮಿದ್ದು ಏಕಕಾಲದಲ್ಲಿ ಒಗ್ಗೂಡಿಸುವಿಕೆ ಮತ್ತು ಬೇರ್ಪಡಿಸುವಿಕೆಗಳೆರಡರ ಪ್ರಕ್ರಿಯೆಗಳನ್ನು ಪ್ರಭಾವಿಸುತ್ತಿದೆ. ಅಧಿಕಾರದ ಲಾಲಸೆ ಪರಾಕಾಷ್ಠೆಯನ್ನು ತಲುಪಿದ್ದು ಸಮಾಜದ ಹಿತಾಸಕ್ತಿಗಳು ನೇಪಥ್ಯಕ್ಕೆ ಸರಿಯುತ್ತಿವೆ. ಜಾತಿಯ ನಿಸ್ಸಂಕೋಚ ಬಳಕೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ ತತ್ವಗಳಿಗೆ ಸವಾಲಾಗಿ ಪರಿಣಮಿಸಿವೆ. ಕ್ರಮೇಣವಾಗಿ ಜಾತಿಯ ಹೆಸರಿನಲ್ಲಿ ಅಧಿಕಾರವನ್ನು ಅರಸುವವರು ಹಾಗೂ ಜಾತಿಯನ್ನು ಮುಂದಿಟ್ಟುಕೊಂಡು ಸ್ವಜಾತಿ ನಾಯಕರಿಗೆ ಬೆಂಬಲವನ್ನು ನೀಡುವವರ ಗುಂಪುಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಒಂದೆಡೆ ಪಾಶ್ಚಿಮಾತ್ಯೀಕರಣವು ವ್ಯಕ್ತಿಗಳನ್ನು ಜಾತಿ ಅನನ್ಯತೆಯಿಂದ ದೂರ ತೆಗೆದುಕೊಂಡು ಹೋಗುತ್ತಿದ್ದರೆ, ಮತ್ತೊಂದೆಡೆ ರಾಜಕೀಯದಲ್ಲಿ ಜಾತಿ ಅತಿಯಾದ ಪ್ರವೇಶ ಜನರನ್ನು ಜಾತಿಯತ್ತ ಸೆಳೆದು ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಭದ್ರಪಡಿಸುತ್ತಿದೆ.

ಒಂದು ಶ್ರೇಣೀಕೃತ ವ್ಯವಸ್ಥೆಯಾಗಿ ಜಾತಿಯ ಹಿಡಿತ ಸಡಿಲವಾಗುತ್ತಿದೆ ಎನಿಸಿದರೂ ಅದು ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳನ್ನು, ಎಲ್ಲಾ ಮಜಲುಗಳಲ್ಲಿ ಪ್ರವೇಶಿಸಿರುವುದು, ವಿಶೇಷವಾಗಿ ಚುನಾವಣಾ ರಾಜಕಾರಣ ಜಾತಿಯ ಚೌಕಟ್ಟಿನಲ್ಲಿ ನಡೆಯುತ್ತಿರುವುದನ್ನು ಈಗಲಾದರೂ ತಡೆಯೊಡ್ಡದಿದ್ದರೆ ಒಂದು ದಿನ ನಮ್ಮ ಸಮಾಜ ಮತ್ತಷ್ಟು ಒಡೆದು ಹಲವು ಹೋಳುಗಳಾಗಿ ಅರ್ಥಪೂರ್ಣ ಮತ್ತು ಸಮಾನತೆಯ ಬದುಕನ್ನು ನಡೆಸಲು ಅಸಾಧ್ಯವಾಗುವಂತಹ ಸ್ಥಿತಿ ಸೃಷ್ಟಿಯಾಗುತ್ತದೆ.

ಜಾತೀಯತೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಜಗತ್ತನ್ನು ಆಳುವುದು ವಿಚಾರಗಳೇ ಹೊರತು ಜಾತಿ ಅಥವಾ ಬಣ್ಣವಲ್ಲ. ಒಂದೆಡೆ ವಿಜ್ಞಾನ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿದ್ದರೆ ಮತ್ತೊಂದೆಡೆ ಜಾತೀಯತೆಯಂತಹ ಅನಿಷ್ಟ ಪದ್ಧತಿಯನ್ನು ಪೋಷಣೆ ಮಾಡಿಕೊಂಡು ಹೋಗಲಾಗುತ್ತಿದೆ. ಇಂತಹ ವೈರುಧ್ಯಗಳಿಂದ ದೇಶದ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಮೂಲಭೂತ ಅಗತ್ಯಗಳ ಜೊತೆಗೆ ವೈಚಾರಿಕ ಪ್ರಜ್ಞೆ ಕೂಡ ಇಂದಿನ ಅಗತ್ಯ. ನಾವೂ ಬದುಕಿ ಇತರರನ್ನು ಬದುಕಲು ಅವಕಾಶ ಮಾಡಿಕೊಡಬೇಕಾಗಿದೆ. ಜಾತೀಯತೆಯನ್ನು ಬಿಟ್ಟು ಸಾಮರಸ್ಯ ಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ. ಕುವೆಂಪು ಆಶಿಸಿದ್ದ ವಿಶ್ವಮಾನವ ಕಲ್ಪನೆ ಸಾಕಾರವಾಗದಿದ್ದರೆ ಆರ್ಥಿಕವಾಗಿ ಎಷ್ಟೇ ಅಭಿವೃದ್ಧಿ ಸಾಧಿಸಿದರೂ ಅಂತಹ ದೇಶವನ್ನು ಅಭಿವೃದ್ಧಿ ರಾಷ್ಟ್ರ ಎಂದು ಕರೆಯಲಾಗದು. ಕುವೆಂಪುರವರ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರಗಳು ಬದುಕಿನ ದೃಷ್ಟಿಕೋನವಾಗಬೇಕು.

Writer - ಡಾ. ಅಮ್ಮಸಂದ್ರ ಸುರೇಶ್

contributor

Editor - ಡಾ. ಅಮ್ಮಸಂದ್ರ ಸುರೇಶ್

contributor

Similar News