×
Ad

​ದಕ್ಷಿಣ ಆಫ್ರಿಕಾ ಪ್ರಜೆ 3 ದಿನದಲ್ಲೇ ಕೋವಿಡ್ ನೆಗೆಟಿವ್ ವರದಿ ಪಡೆದದ್ದು ಹೇಗೆ ?

Update: 2021-12-04 07:15 IST
ಸಾಂದರ್ಭಿಕ ಚಿತ್ರ

ಬೆಂಗಳೂರು : ದೇಶದ ಮೊಟ್ಟಮೊದಲ ಒಮೈಕ್ರಾನ್ ಸೋಂಕಿತ, ದಕ್ಷಿಣ ಆಫ್ರಿಕಾ ಪ್ರಜೆ 66 ವರ್ಷದ ವ್ಯಕ್ತಿ ಮೂರೇ ದಿನದಲ್ಲಿ ಕೋವಿಡ್-19 ನೆಗೆಟಿವ್ ವರದಿ ಪಡೆದದ್ದು ಹೇಗೆ ಎನ್ನುವ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.

ಈತನ ಎಲ್ಲ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ತಪಾಸಣೆ ಮಾಡಿದಾಗ ನೆಗೆಟಿವ್ ವರದಿ ಬಂದಿದೆ. ಆದರೆ ಈ ಸೋಂಕಿತ ವ್ಯಕ್ತಿಯ ಜೆನೋಮ್ ಸೀಕ್ವೆನ್ಸಿಂಗ್ ವರದಿಗಾಗಿ ಕಾಯುತ್ತಿರುವ ಸಂದರ್ಭದಲ್ಲೇ ಈತ ದೇಶದಿಂದ ಹೊರಗೆ ಪ್ರಯಾಣ ಬೆಳೆಸಿದ್ದು ಹೇಗೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಪಾಸಿಟಿವ್ ವರದಿ ಬಂದ ಒಂದು ವಾರದ ಒಳಗಾಗಿ ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿ ತೋರಿಸಿ ಆತ ದುಬೈಗೆ ಪ್ರಯಾಣ ಬೆಳೆಸಿದ್ದ. ಈತನಿಗೆ ನೆಗೆಟಿವ್ ವರದಿ ನೀಡಿದ್ದು ಖಾಸಗಿ ಪ್ರಯೋಗಾಲಯ!

ಈ ವ್ಯಕ್ತಿ ನವೆಂಬರ್ 20ರಂದು ಬೆಂಗಳೂರಿಗೆ ಆಗಮಿಸಿ 27ಕ್ಕೆ ತೆರಳಿದ್ದ. ಈತನ ಪರೀಕ್ಷಾ ವರದಿ ಪಾಸಿಟಿವ್ ಬಂದ ತಕ್ಷಣ ಸರ್ಕಾರಿ ವೈದ್ಯರೊಬ್ಬರು ಈತ ತಂಗಿದ್ದ ಹೋಟೆಲ್‌ಗೆ ಭೇಟಿ ನೀಡಿದ್ದರು. ಈತನಿಗೆ ಯಾವುದೇ ರೋಗಲಕ್ಷಣ ಇಲ್ಲದ ಕಾರಣ ಸ್ವಯಂ ಪ್ರತ್ಯೇಕತೆಗೆ ಸಲಹೆ ಮಡಲಾಗಿತ್ತು. ಈತ ಅಪಾಯ ಸಾಧ್ಯತೆಯ ದೇಶದಿಂದ ಬಂದ ಹಿನ್ನೆಲೆಯಲ್ಲಿ ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು. ಆದರೆ ನವೆಂಬರ್ 23ರಂದು ಖಾಸಗಿ ಪ್ರಯೋಗಾಲಯದಿಂದ ಈತ ಕೋವಿಡ್ ನೆಗೆಟಿವ್ ವರದಿ ಪಡೆದುಕೊಂಡಿದ್ದ.

ಬಿಬಿಎಂಪಿ ಆಯುಕ್ತರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಒಂದು ಪಾಸಿಟಿವ್ ಹಾಗೂ ಇನ್ನೊಂದು ನೆಗೆಟಿವ್ ಹೀಗೆ ಎರಡು ವರದಿಗಳೂ ಸಂಶಯಾಸ್ಪದ. ಈ ಹಿನ್ನೆಲೆಯಲ್ಲಿ ಪ್ರಯೋಗಾಲಯದ ಬಗ್ಗೆ ತನಿಖೆ ನಡೆಸಬೇಕಿದೆ. ತಕ್ಷಣ ಆರೋಗ್ಯ ಇಲಾಖೆ ಜತೆ ಸಮನ್ವಯದಲ್ಲಿ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನವೆಂಬರ್ 12ರಿಂದ 22ರ ಅವಧಿಯಲ್ಲಿ ಆಫ್ರಿಕನ್ ದೇಶಗಳಿಂದ ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ 57 ಮಂದಿ ಅಂತರ್ ರಾಷ್ಟ್ರೀಯ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ. ಈ ಪ್ರಯಾಣಿಕರ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲು ಅವರನ್ನು ಸಂಪರ್ಕಿಸುವ ಪ್ರಯತ್ನ ವಿಫಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News