ಕೋವಿಡ್‌ ಸಾವಿನ ಪ್ರಮಾಣ ಕರ್ನಾಟಕಕ್ಕಿಂತ ಕೇರಳದಲ್ಲೇ ಹೆಚ್ಚು: ಕಾರಣವೇನು ಗೊತ್ತೇ?

Update: 2021-12-07 06:39 GMT

ಬೆಂಗಳೂರು: ಕೋವಿಡ್-19 ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆಯಲ್ಲಿ ಕರ್ನಾಟಕ ಇದೀಗ ದೇಶದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಕೇರಳದಲ್ಲಿ ಸೋಂಕಿನಿಂದ ಮೃತಪಟ್ಟವರ ಕುಟುಂಬದವರ ಮನವಿಯನ್ನು ಅಲ್ಲಿನ ಸರ್ಕಾರ ಪುರಸ್ಕರಿಸಿರುವುದು ಇದಕ್ಕೆ ಕಾರಣ. ಹೊಸ ನಿಯಮಾವಳಿ ಕೇರಳದಲ್ಲಿ ಜಾರಿಯಾದ ಬಳಿಕ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 41600ಕ್ಕೇರಿದೆ!

ಹಳೆಯ ಸಾವಿನ ಪ್ರಕರಣಗಳ ಬಗ್ಗೆ ಕೇರಳ ಲೆಕ್ಕಾಚಾರ ಆರಂಭಿಸಿದ ನವೆಂಬರ್ ಕೊನೆಯ ವಾರದ ವರೆಗೂ ಕರ್ನಾಟಕ, ತನ್ನ ನೆರೆಯ ರಾಜ್ಯಕ್ಕಿಂತ ಮುಂದಿತ್ತು. ಕರ್ನಾಟಕದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ 38,230. ಮಹಾರಾಷ್ಟ್ರ ಹೊರತುಪಡಿಸಿದರೆ ಈ ಸಂಖ್ಯೆ ದೇಶದಲ್ಲೇ ಎರಡನೇ ಗರಿಷ್ಠ ಎನಿಸಿತ್ತು. ನವೆಂಬರ್ 24ರಂದು ಕೇರಳದ ಸಾವಿನ ಸಂಖ್ಯೆ 38353ಕ್ಕೇರಿತು. ಆ ವೇಳೆಗೆ ಕರ್ನಾಟಕದಲ್ಲಿ 38185 ಮಂದಿ ಸೋಂಕಿನಿಂದ ಮೃತಪಟ್ಟಿದ್ದರು.

ಆದರೆ ಕರ್ನಾಟಕ ಮಾತ್ರ ಸಂತ್ರಸ್ತ ಕುಟುಂಬಗಳ ಮನವಿಗೆ ಓಗೊಟ್ಟು ಸಮನ್ವಯ ಪ್ರಕ್ರಿಯೆ ಆರಂಭಿಸಿದರೂ ಪ್ರಕರಣಗಳ ಸಂಖ್ಯೆಯನ್ನು ಮಾತ್ರ ಹೆಚ್ಚಿಸಿಲ್ಲ. ಕುಟುಂಬಗಳಲ್ಲಿ ಸಂಭವಿಸಿದ ಸಾವಿನ ಬಗ್ಗೆ ಸಾರ್ವಜನಿಕರಿಂದ ಬರುವ ಅಹವಾಲುಗಳನ್ನು ಸ್ವೀಕರಿಸಲು ಜಿಲ್ಲಾಡಳಿತ ವಿಶೇಷ ಸಮಿತಿಗಳನ್ನು ರಚಿಸುವಂತೆ ಆದೇಶಿಸಲಗಿದೆ. ಆದರೆ ಈ ಪ್ರಕ್ರಿಯೆ ಆರಂಭವಾದ ಬಳಿಕವೂ, ಎಷ್ಟು ಸಂಖ್ಯೆಯನ್ನು ಸೇರಿಸಬೇಕು ಎಂಬ ಬಗ್ಗೆ ಇದುವರೆಗೆ ಸ್ಪಷ್ಟತೆ ಇಲ್ಲ.

ಪ್ರತಿ ಕೋವಿಡ್ ಸಾವಿಗೆ ಸರ್ಕಾರ ನೀಡುವ 50 ಸಾವಿರ ರೂಪಾಯಿ ಪರಿಹಾರ ಪಡೆಯಲು, ಮೃತರ ಕುಟುಂಬದ ಸದಸ್ಯರು, ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸಿದೆ ಎಂಬ ಪ್ರತಿಪಾದನೆಗೆ ಸೂಕ್ತ ಪುರಾವೆ ಒದಗಿಸಬೇಕು. ಈ ಮೊದಲು ಬೆಳಕಿಗೆ ಬಾರದ ಕೆಲ ಪ್ರಕರಣಗಳನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದರೂ, ರಾಜ್ಯ ಸರ್ಕಾರದ ಕೋವಿಡ್ ಬುಲೆಟಿನ್ನಲ್ಲಿ ಇದನ್ನು ಸೇರಿಸದೇ ಇರುವುದರಿಂದ ಅವು ಇನ್ನೂ ಬೆಳಕಿಗೆ ಬಂದಿಲ್ಲ. ಆದ್ದರಿಂದ ಸದ್ಯಕ್ಕೆ ಸಾವಿನ ಸಂಖ್ಯೆಯಲ್ಲಿ ಕೇರಳ ಎರಡನೇ ಸ್ಥಾನದಲ್ಲಿದ್ದು, ಕರ್ನಾಟಕ ಮೂರನೇ ಸ್ಥಾನಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News