​ವಿವಸ್ತ್ರಗೊಳಿಸಿ ನಾಲ್ವರು ಮಹಿಳೆಯರ ಮೆರವಣಿಗೆ, ಚಿತ್ರಹಿಂಸೆ: ಆರೋಪ

Update: 2021-12-08 03:41 GMT
ಸಾಂದರ್ಭಿಕ ಚಿತ್ರ

ಲಾಹೋರ್: ಅಂಗಡಿ ಕಳ್ಳತನ ಆರೋಪದಲ್ಲಿ ಹದಿಹರೆಯದ ಯುವತಿ ಸೇರಿದಂತೆ ನಾಲ್ವರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ, ಹೊಡೆದು, ಅಮಾನುಷವಾಗಿ ಎಳೆದಾಡಿದ್ದಾರೆ ಎನ್ನಲಾದ ಹೇಯ ಕೃತ್ಯ ಫೈಝಲಾಬಾದ್‌ನಲ್ಲಿ ನಡೆದಿದೆ.

ಬಟ್ಟೆಗಳನ್ನು ಕಳಚಿದಾಗ, ಮಾನ ಮುಚ್ಚಿಕೊಳ್ಳಲು ತುಂಡು ಬಟ್ಟೆಗಳನ್ನಾದರೂ ನೀಡುವಂತೆ ಸುತ್ತ ನೆರೆದಿದ್ದ ಜನರಲ್ಲಿ ಮಹಿಳೆಯರು ಅಂಗಲಾಚುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರೆ ಜನ ಮಹಿಳೆಯರನ್ನು ಬೆತ್ತದಿಂದ ಹೊಡೆಯುತ್ತಿರುವುದು ಕಂಡುಬರುತ್ತಿದೆ.

ಮಹಿಳೆಯರು ತಮ್ಮನ್ನು ಬಿಟ್ಟುಬಿಡುವಂತೆ ಮಾಡಿಕೊಂಡ ಮನವಿ ನಿಷ್ಪ್ರಯೋಜಕವಾಗಿದೆ. ಒಂದು ಗಂಟೆ ಕಾಲ ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಲಾಯಿತು. ಹಲವು ವೀಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪಾಕಿಸ್ತಾನದ ಪಂಜಾಬ್ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈ ದುರದೃಷ್ಟಕರ ಘಟನೆ ಸಂಬಂಧ ಐದು ಮಂದಿಯನ್ನು ಬಂಧಿಸಿದ್ದೇವೆ ಎಂದು ಪಂಜಾಬ್ ಪೊಲೀಸ್ ವಕ್ತಾರರು ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆದಿದ್ದು, ಅರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಫೈಝಲಾಬಾದ್‌ನ ಬಾವಾ ಚಾಕ್ ಮಾರುಕಟ್ಟೆಯಲ್ಲಿ ಚಿಂದಿ ಆಯಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಸಂತ್ರಸ್ತರು ಹೇಳಿದ್ದಾರೆ. "ತೀರಾ ಬಾಯಾರಿಕೆಯಾಗಿದ್ದರಿಂದ ಉಸ್ಮಾನ್ ಎಲೆಕ್ಟ್ರಿಕ್ ಸ್ಟೋರ್‌ಗೆ ಹೋಗಿ ಒಂದು ಬಾಟಲಿ ನೀರು ಕೇಳಿದೆವು. ಆದರೆ ನಾವು ಕದಿಯುವ ಉದ್ದೇಶದಿಂದ ಅಂಗಡಿಗೆ ಬಂದಿದ್ದಾಗಿ ಮಾಲಕ ಸದ್ದಾಂ ಆಪಾದಿಸಿದರು. ಸದ್ದಾಂ ಹಾಗೂ ಇತರರು ನಮ್ಮನ್ನು ಹೊಡೆಯಲು ಆರಂಭಿಸಿದರು. ಬಳಿಕ ನಮ್ಮ ಬಟ್ಟೆ ಕಳಚಿ ಮಾರುಕಟ್ಟೆಯಲ್ಲಿ ಎಳೆದಾಡಿಕೊಂಡು ಹೊಡೆದರು. ಬಳಿಕ ಇದರ ವೀಡಿಯೊ ಚಿತ್ರೀಕರಿಸಿದರು. ಗುಂಪಿನಲ್ಲಿದ್ದ ಯಾರೊಬ್ಬರೂ ಈ ದೌರ್ಜನ್ಯ ತಡೆಯಲಿಲ್ಲ" ಎಂದು ಮಹಿಳೆಯರು ದೂರಿನಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News