ಸೇನಾ ಹೆಲಿಕಾಪ್ಟರ್ ಪತನದಲ್ಲಿ ಬದುಕುಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿಗೆ ಸ್ಥಳಾಂತರ

Update: 2021-12-09 14:53 GMT

ಹೊಸದಿಲ್ಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ  ಇತರ 12 ಮಂದಿ ಸಾವನ್ನಪ್ಪಿದ ಸೇನಾ ಹೆಲಿಕಾಪ್ಟರ್ ಅಪಘಾತದ ಘಟನೆಯಲ್ಲಿ ಬದುಕುಳಿದಿದ್ದ  ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಗಂಭೀರವಾಗಿದ್ದು, ಅವರನ್ನು ವಿಮಾನದಲ್ಲಿ ಬೆಂಗಳೂರಿಗೆ ರವಾನಿಸಲಾಗಿದೆ.

ಗ್ರೂಪ್ ಕ್ಯಾಪ್ಟನ್ ಸಿಂಗ್ ಅವರನ್ನು ಏರ್  ಆಂಬ್ಯುಲೆನ್ಸ್ ನಲ್ಲಿ  ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಿಂದ ಸೂಲೂರ್ ಏರ್ ಬೇಸ್‌ಗೆ ಕರೆದೊಯ್ದು, ಅಲ್ಲಿಂದ ಬೆಂಗಳೂರಿಗೆ ವಿಮಾನದ ಮೂಲಕ ಕರೆದೊಯ್ಯಲಾಯಿತು. ಅವರಿಗೆ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬೆಳಗ್ಗೆ ಸಂಸತ್ತಿಗೆ ಗ್ರೂಪ್ ಕ್ಯಾಪ್ಟನ್ ಸಿಂಗ್ ಜೀವರಕ್ಷಕ ವ್ಯವಸ್ಥೆಯಲ್ಲಿದ್ದಾರೆ ಹಾಗೂ ಅವರನ್ನು ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ತೀವ್ರ ಸುಟ್ಟ ಗಾಯಗಳೊಂದಿಗೆ ಗ್ರೂಪ್ ಕ್ಯಾಪ್ಟನ್ ಸಿಂಗ್ ಅವರನ್ನು ಅಪಘಾತದ ಸ್ಥಳದಿಂದ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವುದಾಗಿ ತಂದೆ ಕರ್ನಲ್ ಕೆ.ಪಿ. ಸಿಂಗ್ (ನಿವೃತ್ತ) ಹೇಳಿದ್ದರು.

ಆಸ್ಪತ್ರೆಗೆ ಸಿಎಂ ಬೊಮ್ಮಾಯಿ, ರಾಜ್ಯಪಾಲರ ಭೇಟಿ

ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ವಿಚಾರಣೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಪಾಲರ ಜತೆ ತುರ್ತಾಗಿ ಕಮಾಂಡೋ ಆಸ್ಪತ್ರೆಗೆ ತೆರಳಿ, ವರುಣ್ ಸಿಂಗ್ ಅವರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News