ಟ್ವಿಟರಿಗರ ಕುಹಕ, ಟ್ರೋಲ್:‌ ಖಾತೆಯನ್ನು ಮುಚ್ಚಿದ ಹೆಲಿಕಾಪ್ಟರ್‌ ದುರಂತ ಹುತಾತ್ಮ ಲಖ್ವಿಂದರ್‌ ಲಿಡ್ಡರ್‌ ಪುತ್ರಿ

Update: 2021-12-12 17:02 GMT

ಹೊಸದಿಲ್ಲಿ,ಡಿ.12: ತಮಿಳುನಾಡಿನ ಕೂನೂರು ಬಳಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡು ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ ಲಿಡ್ಡರ್ ಅವರ ಅಂತ್ಯಸಂಸ್ಕಾರ ನಡೆದು ಒಂದು ದಿನವೂ ಕಳೆದಿರಲಿಲ್ಲ,ಆಗಲೇ ಅವರ ಪುತ್ರಿ ಆಶನಾ ಲಿಡ್ಡರ್(17) ಟ್ವಿಟರ್ನಲ್ಲಿ ಕುಹಕಿಗಳ ಟೀಕೆಗಳಿಗೆ ಗುರಿಯಾಗಿದ್ದರು.

ಹಲವಾರು ಟ್ವಿಟರ್ ಬಳಕೆದಾರರು ಹಳೆಯ ಟ್ವೀಟ್ ಗಾಗಿ ಆಶನಾರನ್ನು ಗುರಿಯಾಗಿಸಿಕೊಂಡು ಟ್ರೋಲ್ ಗಳನ್ನು ಮಾಡಿದ್ದಾರೆ. ಅವರನ್ನು ‘ದುರಾಗ್ರಹಿ’ ಮತ್ತು ‘ವೋಕ್’ಎಂದು ಕರೆದಿದ್ದಾರೆ. ಟ್ರೋಲ್ ಗಳಿಂದ ನೊಂದಿರುವ ಆಶನಾ ತನ್ನ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

‘ವೇಕ್ (ಎಚ್ಚರಗೊಳ್ಳು)’ ಶಬ್ದದಿಂದ ಹುಟ್ಟಿಕೊಂಡಿರುವ ‘ವೋಕ್ (ಎಚ್ಚರಗೊಂಡ)’ಅನ್ನು ರಾಜಕೀಯವಾಗಿ ಅಥವಾ ಸಾಂಸ್ಕೃತಿಕವಾಗಿ ಅರಿವಿರುವ ವ್ಯಕ್ತಿಯನ್ನು ಸೂಚಿಸಲು ಬಳಸಲಾಗುತ್ತದೆ. ಖಂಡಿತವಾಗಿಯೂ ಇದು ಋಣಾತ್ಮಕ ಶಬ್ದವಲ್ಲ,ಆದರೆ ಈ ದಿನಗಳಲ್ಲಿ ಈ ಶಬ್ದ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಬಲಪಂಥೀಯ ವರ್ಗಕ್ಕೆ ಸೇರಿದವರು ಉದಾರವಾದಿಗಳು ಅಥವಾ ಜಾತ್ಯತೀತ ಜನರನ್ನು ಅಣಕಿಸಲು ಅವರನ್ನು ‘ವೋಕ್’ ಎಂದು ಕರೆಯುತ್ತಾರೆ.

ಆಶನಾ ಟ್ವಿಟರಿಗರ ಟ್ರೋಲ್ಗಳಿಗೆ ಗುರಿಯಾಗಲು ಮುಖ್ಯ ಕಾರಣ ಇಲ್ಲಿದೆ.....

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಉದ್ದೇಶಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಹೇಳಿಕೆಯೊಂದರ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದ ಆಶನಾರ ಟ್ವೀಟೊಂದರ ಸ್ಕ್ರೀನ್ ಶಾಟ್ ಅನ್ನು ಕಾಂಗ್ರೆಸ್ ನಾಯಕ ನೀರಜ್ ಭಾಟಿಯಾ ಶೇರ್ ಮಾಡಿಕೊಂಡಿದ್ದಾರೆ.

 ಇತ್ತೀಚಿಗೆ ಹಿಂಸಾಚಾರದಲ್ಲಿ ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದ ಉ.ಪ್ರದೇಶದ ಲಖಿಂಪುರ ಖೇರಿಗೆ ಪ್ರಯಾಣಿಸುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪ್ರಿಯಾಂಕಾ ಆಗ ಪೊರಕೆಯೊಂದನ್ನು ತೆಗೆದುಕೊಂಡು ನೆಲವನ್ನು ಗುಡಿಸಿ ಪೊಲೀಸ್ ಕ್ರಮವನ್ನು ಪ್ರತಿಭಟಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಆಶನಾ,‘ಯೋಗಿ ಆದಿತ್ಯನಾಥ್ ಪ್ರತಿಪಕ್ಷವನ್ನು ಕಡೆಗಣಿಸುತ್ತಿದ್ದನ್ನು ನೋಡುತ್ತ ಎಚ್ಚರಗೊಂಡೆ. ನನಗೆ ಗೊತ್ತು,ಇದು ರಾಜಕೀಯ. ಆದರೆ ಪ್ರಿಯಾಂಕಾ ನೆಲವನ್ನು ಗುಡಿಸಲು ಮಾತ್ರ ಅರ್ಹರು ಎಂಬ ಅವರ ಹೇಳಿಕೆ ತೀರ ಕೀಳುಮಟ್ಟದ್ದಾಗಿದೆ ಮತ್ತು ಹಾಗೆ ಹೇಳುವುದು ಸರಿಯಲ್ಲ. ನನ್ನ ಪ್ರಕಾರ ಹಲ್ಲಿಲ್ಲದ ಹುಲಿ ಘರ್ಜಿಸುವುದನ್ನು ನಿಲ್ಲಿಸುವುದಿಲ್ಲ. ಯೋಗಿ,ನಿಮ್ಮ ರಾಜ್ಯದಲ್ಲಿಯ ಪ್ರಕ್ಷುಬ್ಧತೆಯನ್ನು ಮೊದಲು ನಿವಾರಿಸಿ’ಎಂದು ಟ್ವೀಟಿಸಿದ್ದರು. ಈ ಟ್ವೀಟ್ ಬಿಜೆಪಿಗಳಿಗೆ ಸರಿಯಾಗಿಯೇ ಮರ್ಮಾಘಾತ ನೀಡಿತ್ತು.

ಈಗ ತಂದೆಯನ್ನು ಕಳೆದುಕೊಂಡ ಬಳಿಕ ಆಶನಾ ಟ್ವಿಟರ್ ಟ್ರೋಲ್ಗಳಿಗೆ ಆಹಾರವಾಗಿದ್ದಾರೆ.

‘ಓಹ್,ಮಿಲಿಟರಿ ಮಕ್ಕಳು ಸಹ ಎಚ್ಚರಗೊಳ್ಳುತ್ತಾರೆ’ ಎಂದು ಓರ್ವ ಟ್ವೀಟಿಗ ಅಣಕಿಸಿದ್ದರೆ,ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಆಂಖಿ ಪಟೇಲ್ ಅವರು,‘ದಿಲ್ಲಿಯಂತಹ ನಗರದಲ್ಲಿ ಆಶನಾ ಅತ್ಯಂತ ಸುಲಭಭೇದ್ಯ ಮತ್ತು ಪ್ರಭಾವಕ್ಕೊಳಗಾಗುವ ವಯಸ್ಸಿನಲ್ಲಿದ್ದಾರೆ. ಇಂತಹ ಮಕ್ಕಳು ಕಾಲೇಜಿಗೆ ಹೋದಾಗ ಅವರನ್ನು ಸೂಕ್ಷ್ಮವಾಗಿ ನೋಡಿಕೊಳ್ಳಬೇಕು ಮತ್ತು ಅವರನ್ನು ತಿದ್ದಬೇಕು ’ಎಂದು ಟ್ವೀಟಿಸಿದ್ದಾರೆ.

ಟ್ವಿಟರ್ ಬಳಕೆದಾರ ಬಿಸ್ವರೂಪ ಎಸ್.ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಸಾಗಿ,‘ಅತ್ಯಂತ ಜವಾಬ್ದಾರಿಯಿಂದ ಆಶನಾ ಮುಂದಿನ ಗುರ್ಮೆಹರ್ ಕೌರ್ ಆಗುವ ದಾರಿಯಲ್ಲಿ ಸಾಗುತ್ತಿದ್ದಾರೆ ’ಎಂದು ಟೀಕಿಸಿದ್ದಾನೆ. 1999ರ ಆಪರೇಷನ್ ರಕ್ಷಕ್ನಲ್ಲಿ ಹುತಾತ್ಮರಾಗಿದ್ದ ಕ್ಯಾ.ಮಂದೀಪ ಸಿಂಗ್ ಅವರ ಪುತ್ರಿ ಗುರ್ಮೆಹರ್ ಕೌರ್ ಕೂಡ ಸರಕಾರದ ಮತ್ತು ಸರಕಾರದ ಹಿಂಬಾಲಕರ ಕಟು ಟೀಕಾಕಾರರಾಗಿದ್ದಾರೆ.

 ತನ್ನ ಅಭಿಪ್ರಾಯಗಳಿಗಾಗಿ ಆಶನಾ ಟ್ವಿಟರ್ನಲ್ಲಿ ದ್ವೇಷವನ್ನು ಮಾತ್ರ ಸ್ವೀಕರಿಸಿಲ್ಲ,ಅಷ್ಟೇ ಪ್ರಶಂಸೆಗಳನ್ನೂ ಅವರು ಪಡೆದಿದ್ದಾರೆ. ಕಳೆದ ವರ್ಷದ ‘ಅಪ್ಪಂದಿರ ದಿನ’ದಂದು ಅವರು ಮಾಡಿದ್ದ ಭಾಷಣಕ್ಕಾಗಿ ಹಲವರು ಪ್ರಶಂಸಿಸಿದ್ದರು. ತನಗೆ ತನ್ನ ತಂದೆಯ ಬಗ್ಗೆ ಇರುವ ಹೆಮ್ಮೆ,ದೇಶಭಕ್ತಿ ಮತ್ತು ಭಾರತೀಯ ಸೇನೆಯಲ್ಲಿ ತಾನು ಬೆಳೆದು ಬಂದ ರೀತಿಯ ಕುರಿತು ಆಶನಾ ಮಾತನಾಡಿದ್ದರು. ಅವರ ಸಂಕ್ಷಿಪ್ತ ಭಾಷಣವನ್ನು ಕಾವೇರಿ ಹೆಸರಿನ ಟ್ವಿಟರ್ ಬಳಕೆದಾರರು ಶೇರ್ ಮಾಡಿಕೊಂಡಿದ್ದರು.


ಆಶನಾ ಶುಕ್ರವಾರ ತಂದೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಈ ಸಂದರ್ಭ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,‘ನನಗೀಗ 17 ವರ್ಷ ತುಂಬುತ್ತಿದೆ. ಹೀಗಾಗಿ ಅವರು (ಬ್ರಿ.ಲಿಡ್ಡರ್) ನನ್ನ ಜೊತೆ 17 ವರ್ಷವಿದ್ದರು. ಸಿಹಿ ನೆನಪುಗಳೊಂದಿಗೆ ನಾವು ಮುಂದಕ್ಕೆ ಸಾಗುತ್ತೇವೆ. ನನ್ನ ತಂದೆಯ ನಿಧನ ರಾಷ್ಟ್ರೀಯ ನಷ್ಟ. ಅವರು ನನ್ನ ಹೀರೊ,ನನ್ನ ಅತ್ಯುತ್ತಮ ಗೆಳೆಯ ಆಗಿದ್ದರು. ಅದು ವಿಧಿಲಿಖಿತವಾಗಿರಬಹುದು. ಅವರು ನನ್ನ ತಂದೆಯಾಗಿದ್ದು ನನ್ನ ಅದೃಷ್ಟ. ಅವರು ನನ್ನ ಪಾಲಿನ ದೊಡ್ಡ ಪ್ರೇರಕರಾಗಿದ್ದರು’ಎಂದು ಹೇಳಿದ್ದರು. ಆಶನಾರ ಈ ಮಾತುಗಳನ್ನು ಎಎನ್ಐ ಟ್ವೀಟಿಸಿದ್ದು,55,000ಕ್ಕೂ ಅಧಿಕ ಲೈಕ್ಗಳು ಬಂದಿವೆ. ಅದೆಷ್ಟೋ ಜನರು ಉತ್ತರವಾಗಿ ತಮ್ಮ ಆಶೀರ್ವಾದಗಳನ್ನು ರವಾನಿಸಿದ್ದು,ಆಕೆಯ ಧೈರ್ಯಶಾಲಿ ಮನೋಭಾವದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News