ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ : ರಶ್ಯಾಗೆ ಬೈಡನ್ ಎಚ್ಚರಿಕೆ

Update: 2021-12-12 17:46 GMT

ವಾಷಿಂಗ್ಟನ್, ಡಿ.12: ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ರಶ್ಯಾವು ಭಾರೀ ಬೆಲೆ ತೆರಬೇಕಾಗುತ್ತದೆ ಮತ್ತು ರಶ್ಯಾದ ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮ ಬೀರಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್ ಗಡಿಭಾಗದ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಕರೆ ಮಾಡಿ ಮಾತುಕತೆ ನಡೆಸಿದ್ದರು. ರಶ್ಯಾವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ರಶ್ಯಾದ ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮ ಬೀರಲಿದೆ. ಅಲ್ಲದೆ ರಶ್ಯಾದ ಕುರಿತು ಜಗತ್ತಿನ ನಿಲುವಿನಲ್ಲೂ ಗಮನಾರ್ಹ ಬದಲಾವಣೆಯಾಗಲಿದೆ ಎಂದು ಪುಟಿನ್‌ಗೆ ಸ್ಪಷ್ಟಪಡಿಸಿರುವುದಾಗಿ ಬೈಡನ್ ಹೇಳಿದ್ದಾರೆ.

ಶನಿವಾರ ಮಾಧ್ಯಮದವರ ಜತೆ ಮಾತನಾಡಿದ ಬೈಡನ್, ಒಂದು ವೇಳೆ ರಶ್ಯಾ ಆಕ್ರಮಣ ಮಾಡಿದರೆ ಉಕ್ರೇನ್ ಬೆಂಬಲಕ್ಕೆ ಅಮೆರಿಕದ ಪಡೆಗಳನ್ನು ರವಾನಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೂ, ಪೂರ್ವಪಾರ್ಶ್ವದ ನೇಟೊ ದೇಶಗಳು ತಮ್ಮ ಭದ್ರತೆಯನ್ನು ಬಿಗಿಗೊಳಿಸಲು ಅಮೆರಿಕ ಮತ್ತು ನೇಟೋ ಸಂಘಟನೆಯ ಪಡೆಗಳನ್ನು ರವಾನಿಸುವ ಅಗತ್ಯ ಬರಬಹುದು ಎಂದರು.

ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿದರೆ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು 7 ಶ್ರೀಮಂತ ಪ್ರಜಾಪ್ರಭುತ್ವ ದೇಶಗಳ ಒಕ್ಕೂಟ ಜಿ7 ಕೂಡಾ ರಶ್ಯಾಗೆ ಎಚ್ಚರಿಕೆ ನೀಡಿದೆ ಎಂದು ಜಿ7 ಶೃಂಗಸಭೆಯ ಕರಡು ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.

ಉಕ್ರೇನ್ ಮೇಲಿನ ಮತ್ತಷ್ಟು ಸೇನಾ ಆಕ್ರಮಣವು ಭಾರೀ ಪರಿಣಾಮದ ಜತೆ ರಶ್ಯಾ ಭಾರಿ ಬೆಲೆ ತೆರಲು ಕಾರಣವಾಗುತ್ತದೆ ಎಂಬುದಕ್ಕೆ ಸಂದೇಹವೇ ಇಲ್ಲ ಎಂದು ಜಿ7 ಒಕ್ಕೂಟದ ಪ್ರತಿನಿಧಿಗಳಾದ 7 ದೇಶಗಳ ವಿದೇಶಿ ಸಚಿವರೂ ಹೇಳಿಕೆ ನೀಡಿದ್ದು ಯಾವುದೇ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸುವಂತೆ ರಶ್ಯಾಕ್ಕೆ ಕರೆ ನೀಡಿದ್ದಾರೆ.

ಉಕ್ರೇನ್ ಗಡಿಭಾಗದ ಬಳಿ ರಶ್ಯಾ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಸೇನಾಪಡೆಯನ್ನು ಜಮಾವಣೆಗೊಳಿಸಿರುವುದು ಉಕ್ರೇನ್ ಮೇಲೆ ಆಕ್ರಮಣದ ಆತಂಕಕ್ಕೆ ಕಾರಣವಾಗಿದೆ. 2022ರ ಜನವರಿಯಲ್ಲೇ ಉಕ್ರೇನ್ ಮೇಲೆ ಆಕ್ರಮಣ ನಡೆಸಲು ರಶ್ಯಾ ಯೋಜಿಸಿದೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ಗಂಭೀರತೆಯನ್ನು ಮನಗಂಡು ಜಿ7 ರಶ್ಯಾದ ಸೇನಾ ಜಮಾವಣೆಯನ್ನು ಖಂಡಿಸಿದ್ದು, ಉಕ್ರೇನ್ ಗಡಿಭಾಗದಲ್ಲಿ ನೆಲೆಸಿರುವ ಉದ್ವಿಗ್ನತೆ ಕಡಿಮೆಗೊಳಿಸುವ ಕ್ರಮ ಕೈಗೊಳ್ಳುವಂತೆ ರಶ್ಯಾವನ್ನು ಆಗ್ರಹಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಹಣದುಬ್ಬರ ಸೇರಿದಂತೆ ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ವರ್ಚುವಲ್ ವೇದಿಕೆಯಲ್ಲಿ ಸಭೆ ನಡೆಸಿದ್ದ ಜಿ7 ಪ್ರತಿನಿಧಿಗಳು, ಒಂದು ವೇಳೆ ರಶ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ಅದರ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸುವ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಡಿಭಾಗದಲ್ಲಿ ರಶ್ಯಾ ಭಾರೀ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆಗೊಳಿಸಿದ್ದು ಬೃಹತ್ ಪ್ರಮಾಣದ ಸೇನಾ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ ಎಂದು ಉಕ್ರೇನ್ ಆರೋಪಿಸಿದೆ. ಆದರೆ ಇದನ್ನು ನಿರಾಕರಿಸಿರುವ ರಶ್ಯಾ, ಅಮೆರಿಕ ಈ ಪ್ರದೇಶದಲ್ಲಿ ಅಸ್ಥಿರತೆ ಉಂಟುಮಾಡಲು ಪ್ರಯತ್ನಿಸುತ್ತಿದೆ. ರಶ್ಯಾಕ್ಕೆ ಸ್ವಯಂ ರಕ್ಷಣೆಯ ಹಕ್ಕು ಇದೆ ಎಂದು ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News