ಬೆಂಗಳೂರು: ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಬಿದ್ದು ಮಗು ಮೃತ್ಯು
ಬೆಂಗಳೂರು, ಡಿ.18: ಎರಡು ವರ್ಷದ ಮಗುವೊಂದು ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ಇನ್ವೆಸ್ಟ್‍ಮೆಂಟ್ ಲೇಔಟ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರವೀಂದ್ರ ರೆಡ್ಡಿ ಎಂಬವರ ಪುತ್ರ ದಿವ್ಯಾಂಶ್ ರೆಡ್ಡಿ(2) ಮೃತಪಟ್ಟ ಮಗು.
ಬಾಲಕನ ಅಜ್ಜಿ ಕೆಲ ದಿನಗಳಿಂದ ನಗರದಲ್ಲಿ ಖಾಲಿ ಇರುವ ಬಾಡಿಗೆ ಮನೆ ಹುಡುಕುತ್ತಿದ್ದರು. ಅದರಂತೆ ನೀಲಾದ್ರಿ ಇನ್ವೆಸ್ಟ್‍ಮೆಂಟ್ ಲೇಔಟ್‍ನ ಅಪಾರ್ಟ್‍ಮೆಂಟ್‍ವೊಂದರಲ್ಲಿ ಮನೆ ಬಾಡಿಗೆಗೆ ಇರುವ ವಿಚಾರ ಇವರ ಗಮನಕ್ಕೆ ಬಂದಿತ್ತು. ಅದನ್ನು ನೋಡಲೆಂದು ಶುಕ್ರವಾರ ಸಂಜೆ ಮೊಮ್ಮಗ ದಿವ್ಯಾಂಶ ರೆಡ್ಡಿಯನ್ನು ಕರೆದುಕೊಂಡು ಹೋಗಿದ್ದರು. ಅಪಾರ್ಟ್‍ಮೆಂಟ್‍ನ 5ನೇ ಮಹಡಿಯಲ್ಲಿ ಅಜ್ಜಿ ಮನೆ ನೋಡುತ್ತಿದ್ದರೆ, ದಿವ್ಯಾಂಶ್ ಬಾಲ್ಕನಿಯಲ್ಲಿ ಆಟವಾಡುತ್ತಿದ್ದನೆನ್ನಲಾಗಿದೆ. ಆ ವೇಳೆ ಬಾಲ್ಕನಿಯ ಸಮೀಪದ ಪ್ಲಾಸ್ಟಿಕ್ ಶೀಟ್ ಮೇಲೇರಿದ ಮಗು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ದಿವ್ಯಾಂಶ್ ಅಜ್ಜಿಯ ಹೇಳಿಕೆ ಪಡೆದಿದ್ದಾರೆ. ಬಾಲಕ ಆಯ ತಪ್ಪಿ ಬಿದ್ದು ಮೃತಪಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ