×
Ad

ವಿದ್ಯಾರ್ಥಿ ಆತ್ಮಹತ್ಯೆ ತಡೆಯಲು ಸೀಲಿಂಗ್ ಫ್ಯಾನ್ ತೆರವುಗೊಳಿಸುತ್ತಿರುವ ಐ.ಐ.ಎಸ್‌.ಸಿ. !

Update: 2021-12-19 08:20 IST

ಬೆಂಗಳೂರು: ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನಲ್ಲಿ ಹಾಸ್ಟೆಲ್ ಕೊಠಡಿಗಳಿಂದ ಸೀಲಿಂಗ್ ಫ್ಯಾನ್‌ಗಳನ್ನು ತೆರವುಗೊಳಿಸುತ್ತಿರುವ ವಿಚಿತ್ರ ಆದರೆ ನೈಜ ಘಟನೆ ಬೆಳಕಿಗೆ ಬಂದಿದೆ.

ಸೀಲಿಂಗ್ ಫ್ಯಾನ್ ಬದಲಾಗಿ ಗೋಡೆಗೆ ಅಳವಡಿಸುವ ಫ್ಯಾನ್‌ಗಳನ್ನು ವ್ಯವಸ್ಥೆ ಮಾಡುವ ಮೂಲಕ ಫ್ಯಾನ್‌ಗೆ ನೇಣು ಹಾಕಿಕೊಳ್ಳುವುದನ್ನು ತಡೆಯುವುದು ಉದ್ದೇಶ.

ಈ ವರ್ಷದ ಮಾರ್ಚ್‌ನಿಂದೀಚೆಗೆ ದೇಶದ ಈ ಅತ್ಯುನ್ನತ ಶಿಕ್ಷಣ ಸಂಸ್ಥೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಐಐಎಸ್‌ಸಿ ಮುಂದಾಗಿದೆ.

"ಹಾಸ್ಟೆಲ್ ಕೊಠಡಿಗಳಿಂದ ಸೀಲಿಂಗ್ ಫ್ಯಾನ್ ತೆಗೆಯುವುದು ಸೇರಿದಂತೆ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆಯ ಯಾವುದೇ ವಿಧಾನಗಳನ್ನು ನಿರ್ಬಂಧಿಸುವ ದೃಷ್ಟಿಯಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ಐ.ಐ.ಎಸ್‌.ಸಿ. ಇ-ಮೇಲ್ ಮೂಲಕ ’ದಿ ಪ್ರಿಂಟ್’ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಿದೆ. ಐ.ಐ.ಎಸ್‌.ಸಿ. ಸಮುದಾಯದಲ್ಲಿ ವಿದ್ಯಾರ್ಥಿಗಳ ಮಾನಸಿಕ ಸುಕ್ಷೇಮವನ್ನು ಉತ್ತೇಜಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ.

"ಮಾನಸಿಕ ರೋಗ ತಜ್ಞರು ನೀಡಿದ ಸಲಹೆಯ ಆಧಾರದಲ್ಲಿ ಸೀಲಿಂಗ್‌ ಫ್ಯಾನ್‌ಗಳನ್ನು ತೆರವುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ" ಎಂದು ಒಂದು ಇ-ಮೇಲ್‌ನಲ್ಲಿ ವಿವರಿಸಲಾಗಿದೆ. ವಿದ್ಯಾರ್ಥಿಗಳ ಮಾನಸಿಕ ಕ್ಷೇಮ ವಿಚಾರಿಸುವ ಸಲುವಾಗಿ ಮಾನಸಿಕ ಸಲಹಾ ತಜ್ಞರ ಸೇವೆಯನ್ನೂ ಕ್ಯಾಂಪಸ್‌ನಲ್ಲಿ ಆರಂಭಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಮಾನಸಿಕ ಸುಕ್ಷೇಮಕ್ಕೆ ನೆರವು ನೀಡುವುದು ಮತ್ತು ಮಾನಸಿಕ ಆರೋಗ್ಯ ಸೇವೆಯ ಲಭ್ಯತೆಯೂ ಅಗತ್ಯ ಎಂದು ಮಾನಸಿಕ ತಜ್ಞರು ಸಲಹೆ ನೀಡಿದ್ದಾರೆ ಎಂದು ವಿವರಿಸಲಾಗಿದೆ.

ಏತನ್ಮಧ್ಯೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಕ್ಯಾಂಪಸ್‌ನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ 305 ವಿದ್ಯಾರ್ಥಿಗಳ ಪೈಕಿ ಶೇಕಡ 90ರಷ್ಟು ಮಂದಿ ಸೀಲಿಂಗ್ ಫ್ಯಾನ್ ತೆರವುಗೊಳಿಸುವುದನ್ನು ಇಷ್ಟಪಟ್ಟಿಲ್ಲ. ಶೇಕಡ 6ರಷ್ಟು ಮಂದಿ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. "ಐಐಎಸ್‌ಸಿ ಹಾಸ್ಟೆಲ್‌ನಲ್ಲಿ ಸೀಲಿಂಗ್ ಫ್ಯಾನ್‌ಗಳನ್ನು ತೆರೆವುಗೊಳಿಸುವುದು ವಿದ್ಯಾರ್ಥಿ ಆತ್ಮಹತ್ಯೆ ತಡೆಗೆ ನೆರವಾಗುತ್ತದೆ ಎನಿಸುವುದಿಲ್ಲ" ಎಂದು ಶೇಕಡ 88ರಷ್ಟು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News