ದಲಿತರ ಹಕ್ಕೊತ್ತಾಯಕ್ಕಾಗಿ ಡಿ.28ರಂದು ವಿಧಾನಸೌಧ ಚಲೋ
ಬೆಂಗಳೂರು, ಡಿ.24: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವು ದಲಿತ ವಿರೋಧಿ ಧೋರಣೆಯನ್ನು ಹೊಂದಿದೆ. ಆದುದರಿಂದ ದಲಿತರ ಹಕ್ಕೊತ್ತಾಯಕ್ಕಾಗಿ ಡಿ.28ರಂದು ವಿಧಾನಸೌಧ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್‍ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರವು ದಲಿತ ವಿರೋಧಿ ಧೋರಣೆಯನ್ನು ಹೊಂದಿದ್ದು, ದಲಿತರಿಗಾಗಿ ಮೀಸಲಿಟ್ಟ ಅನುಧಾನವನ್ನು ಅನ್ಯ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ, ದಲಿತರ ಮೇಲಿನ ಹಲ್ಲೆಗಳು ನಿರಂತರವಾಗಿ ನಡೆಯುತ್ತಿದ್ದರೂ ಸರಕಾರವು ಯಾವುದೇ ಕ್ರಮವನ್ನು ವಹಿಸುತ್ತಿಲ್ಲ. ಹಾಗಾಗಿ ಡಿ.28ರ ಮಧ್ಯಾಹ್ನ 12ಕ್ಕೆ ಚಿಕ್ಕ ಲಾಲ್‍ಬಾಗ್‍ನಿಂದ ವಿಧಾನಸೌಧದವರೆಗೆ ಪ್ರತಿಭಟನಾ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಸರಕಾರವು ಹೊಸ ಶಿಕ್ಷಣ ನೀತಿಯ ಜಾರಿ ನೆಪದಲ್ಲಿ ಕೋಮುವಾದ ಬಿಂಬಿಸುವ ಪಠ್ಯವನ್ನು ರೂಪಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ಮರೆಮಾಚಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುತ್ತಿದೆ. ಇಂತಹ ಕಾನೂನುಗಳನ್ನು ರೂಪಿಸುತ್ತಿರುವ ಸರಕಾರವು ದಲಿತರ ಕಾಳಜಿಯ ಕುರಿತು ಅಧಿವೇಶನದಲ್ಲಿ ಏಕೆ ಚರ್ಚಿಸಲಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಪರಿಶಿಷ್ಟರಿಗಾಗಿ ಮೀಸಲಿಟ್ಟ ಅನುಧಾನವನ್ನು ಪರಿಶಿಷ್ಟರ ಅಭಿವೃದ್ಧಿಗಾಗಿಯೇ ಮೀಸಲಿಡಬೇಕು. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.