ಕಲಾಕೃತಿಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆ ಅತ್ಯಗತ್ಯ: ನಟಿ ಪ್ರಿಯಾಂಕಾ
ಬೆಂಗಳೂರು, ಡಿ. 27: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಲಿಮಿಟೆಡ್ ಎಚ್‌ಎಸ್‌ಆರ್ ಲೇಔಟ್ ಆರನೇ ವಲಯದ ವೈಟ್‌ಹೌಸ್ ಕನ್ವೆನ್ಷನ್ ಹಾಲ್‌ನಲ್ಲಿ (ಬಿಡಿಎ ಕಾಂಪ್ಲೆಕ್ಸ್ ಪಕ್ಕದಲ್ಲಿ) ನಡೆಯುತ್ತಿರುವ ಗಾಂಧಿ ಶಿಲ್ಪ ಬಜಾರ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ನಟಿ ಪ್ರಿಯಾಂಕಾ ಉಪೇಂದ್ರ, ಐಪಿಎಸ್ ರೂಪಾ ಮೌದ್ಗಿಲ್ ಮತ್ತಿತರರು ಭೇಟಿ ನೀಡಿದರು.
ಕಲಾಕಾರರನ್ನು ಭೇಟಿ ಮಾಡಿ ಸಂವಾದ ನಡೆಸಿದ ನಂತರ ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ಇಲ್ಲಿನ ಸಂಗ್ರಹ ತುಂಬಾ ಚೆನ್ನಾಗಿದೆ. ಕರಕುಶಲ ಮತ್ತು ಕೈಮಗ್ಗದ ವಸ್ತುಗಳೆಂದರೆ ನಮಗೆ ತುಂಬಾ ಇಷ್ಟ. ಎಲ್ಲ ಕಲಾಕಾರರಿಗೆ ಇಂತಹ ವೇದಿಕೆಗಳ ಅಗತ್ಯವಿದೆ. ಅವರ ಕಲೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಸಿಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.
ಮತ್ತೋರ್ವ ನಟಿ ಮೇಗನಾ ಗಾಂವ್ಕರ್ ಮಾತನಾಡಿ, ನಮ್ಮಂತಹ ಕಲಾವಿದರಿಗೆ ಎಲ್ಲ ಬಗೆಯ ಕಲೆಗಳು ಇಷ್ಟವಾಗುತ್ತದೆ. ಇಂತಹ ಕ್ರಿಯಾತ್ಮಕ ವ್ಯಕ್ತಿಗಳನ್ನು ಭೇಟಿ ಮಾಡಲು ಅವಕಾಶ ದೊರೆತದ್ದು ಸಂತಸ ತಂದಿದೆ. ಎಲ್ಲ ಮಳಿಗೆಗಳಲ್ಲಿ ಆಸಕ್ತಿಕರ ಹಾಗೂ ಮನಸೆಳೆಯುವ ಕಲಾಕೃತಿಗಳನ್ನು ಕಾಣಬಹುದು. ಎಲ್ಲ ಕಲಾಕಾರರಿಗೆ ಒಳಿತಾಗಲಿ ಎಂದು ಹಾರೈಸಿದರು.
ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮಾತನಾಡಿ, ಕರಕುಶಲ ವಸ್ತುಗಳ ಪ್ರದರ್ಶನ ವೀಕ್ಷಿಸಲು ಸಮಾಜದ ಗಣ್ಯವ್ಯಕ್ತಿಗಳನ್ನು ಕರೆತರುವ ಪ್ರಯತ್ನ ಮಾಡಿದ್ದೇವೆ. ಆದುದರಿಂದ ನಿಮ್ಮ ಕಲೆಗೆ ಸ್ಫೂರ್ತಿ ಸಿಗಲಿ ಎಂಬುದು ನಮ್ಮ ಅಭಿಲಾಷೆ ಎಂದರು.
ಉದ್ಯಮಿ ದಿವ್ಯಾ ರಂಗೇನಹಳ್ಳಿ ಮಾತನಾಡಿ, ಹತ್ತು ದಿನಗಳಿಂದಲೂ ಈ ಮೇಳದಲ್ಲಿ ಭಾಗವಹಿಸುತ್ತಿದ್ದೇವೆ. ಕರಕುಶಲ ಮೇಳವನ್ನು ಇಷ್ಟೊಂದು ಸಮಕಾಲೀನ ಅಭಿರುಚಿಯೊಂದಿಗೆ ಆಯೋಜಿಸಬಹುದು ಎಂಬುದನ್ನು ಐಪಿಎಸ್ ಅಧಿಕಾರಿ ರೂಪಾ ಅವರು ತೋರಿಸಿಕೊಟ್ಟಿದ್ದಾರೆ. ಇದು ಕಲಾಕಾರರಿಗೆ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.