ಪುನೀತ್ ಪ್ರೇರಣೆ, ಸಾವಿರಾರು ಜನರಿಂದ ನೇತ್ರದಾನ: ನಟ ಶಿವರಾಜ್‍ಕುಮಾರ್
ಬೆಂಗಳೂರು, ಡಿ.29: ಪುನೀತ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ ಮೇಲೆ ಸಾವಿರಾರು ಜನರು ನೇತ್ರದಾನಕ್ಕೆ ಮುಂದಾಗಿರುವುದು ದೊಡ್ಡ ಬೆಳವಣಿಗೆ ಎಂದು ಕನ್ನಡ ಚಲನಚಿತ್ರ ನಟ ಶಿವರಾಜ್‍ಕುಮಾರ್ ಹೇಳಿದ್ದಾರೆ.
ನಟ ಪುನೀತ್ ರಾಜಕುಮಾರ್ ನಿಧನರಾಗಿ ಎರಡು ತಿಂಗಳು ಕಳೆದ ಹಿನ್ನೆಲೆಯಲ್ಲಿ ಅವರ ಸಮಾಧಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‍ಕುಮಾರ್ ಅವರು, ಪುನೀತ್ ಮರೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಮಾಧಿ ಹತ್ತಿರ ಬಂದರೆ ಒಂದು ರೀತಿಯಲ್ಲಿ ಸಮಾಧಾನ ಆಗುತ್ತದೆ. ಪುನೀತ್ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ ಎಂದರು.
ಬಳಿಕ ನಿರ್ಮಾಪಕ, ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ, ನಮ್ಮ ಕಣ್ಣುಗಳು ಬೆಂಕಿಯಲ್ಲಿ ಅಥವಾ ಮಣ್ಣಲ್ಲಿ ಅಂತ್ಯವಾಗಿ ಹೋಗುವ ಬದಲು, ನಮ್ಮಿಂದ ನಾಲ್ಕು ಜನಕ್ಕೆ ಸಹಾಯ ಆಗುತ್ತೆ ಎನ್ನುವುದಾದರೆ ನಾವೇಕೆ ಕಣ್ಣುಗಳನ್ನು ದಾನ ಮಾಡಬಾರದು? ನಮ್ಮ ತಂದೆಯವರ ಪ್ರೇರಣೆಯಿಂದ ನಾವು ಇದನ್ನು ಮಾಡಿದ್ದೇವೆ ಎಂದು ಹೇಳಿದರು.
ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ, ಪುನೀತ್ ಅಕ್ಕಂದಿರಾದ ಲಕ್ಷ್ಮೀ ಹಾಗೂ ಪೂರ್ಣಿಮಾ ಅವರು ಪುನೀತ್ ರಾಜ್‍ಕುಮಾರ್ ಸಮಾಧಿಗೆ ಇದೇ ಸಂದರ್ಭದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ, ಅಪ್ಪು ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ ನೋವಿನಿಂದ ಕಣ್ಣೀರು ಸುರಿಸಿದರು.
ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ರಿಂದ ದೇಹದಾನ
‘ಅಪ್ಪಾಜಿ ಹುಟ್ಟುಹಬ್ಬದ ದಿನ ನಾನು ಮತ್ತು ಶಿವಣ್ಣ ದೇಹದಾನ ಮಾಡಿದ್ದೇವೆ. ನಮ್ಮ ದೇಹ ಬೆಂಕಿಯಲ್ಲಿ ಅಥವಾ ಮಣ್ಣಲ್ಲಿ ಅಂತ್ಯವಾಗಿ ಹೋಗುವ ಬದಲು, ನಮ್ಮಿಂದ ನಾಲ್ಕು ಜನಕ್ಕೆ ಸಹಾಯ ಆಗುತ್ತೆ ಎನ್ನುವುದಾದರೆ ನಾವೇಕೆ ದೇಹದಾನ ಮಾಡಬಾರದು? ನಮ್ಮ ತಂದೆಯವರ ಪ್ರೇರಣೆಯಿಂದ ನಾವು ಇದನ್ನು ಮಾಡಿದ್ದೇವೆ. ಈ ಬಗ್ಗೆ ನೀವು ವಿಚಾರ ಮಾಡಿ. ನಿಮ್ಮ ಮನಸ್ಸಿಗೆ ಸರಿ ಎನಿಸಿ, ನೀವೇ ದೇಹದಾನ ಮಾಡುತ್ತೀರಿ. ಆ ಬಗ್ಗೆ ಯಾರಿಗೂ ನಾವು ಬಲವಂತ ಮಾಡುವುದಿಲ್ಲ.’
ರಾಘವೇಂದ್ರ ರಾಜಕುಮಾರ್, ನಿರ್ಮಾಪಕ, ನಟ