ಸಾಂಸ್ಕೃತಿಕ ರಾಜಕಾರಣ ಮತ್ತು ಬಹುಸಾಂಸ್ಕೃತಿಕ ನೆಲೆಗಳು

Update: 2021-12-30 19:30 GMT

ಬುದ್ಧನಿಂದ ಬಸವಣ್ಣನವರೆಗೆ, ಗಾಂಧಿ-ಅಂಬೇಡ್ಕರ್‌ವರೆಗೆ ನಡೆದುಬಂದ ಬಹುಸಾಂಸ್ಕೃತಿಕ ನೆಲೆಗಳನ್ನು ಪ್ರತಿನಿಧಿಸುವವರಿಗೆ ಶೋಷಣೆಯ ಮೂಲಗಳನ್ನು ಗುರುತಿಸಲು ಸಾಧ್ಯವಾಗಿದ್ದಿದ್ದರೆ, ಶೋಷಣೆಯ ಆಯಾಮಗಳನ್ನೂ ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತಿತ್ತು. ಹಿಂದೂ ಮತ್ತು ಮುಸ್ಲಿಂ ಮತಗಳ ಚೌಕಟ್ಟಿನಲ್ಲೇ ತೀವ್ರ ಶೋಷಣೆಗೊಳಗಾದ ಸಮುದಾಯಗಳು ಮತೀಯ ಅಸ್ಮಿತೆಗಳಿಗೆ ಜೋತು ಬೀಳದೆ, ಬಹುಸಾಂಸ್ಕೃತಿಕ ಅಸ್ಮಿತೆಗಳನ್ನು ಗುರುತಿಸಿದ್ದಲ್ಲಿ ಭಾರತ ವಿಭಿನ್ನ ದಿಕ್ಕಿನಲ್ಲಿ ಸಾಗಬಹುದಿತ್ತು.


ಒಂದು ಸಮಾಜದ ಸ್ವಾಸ್ಥ್ಯ ನಿರ್ಧಾರವಾಗುವುದು ಕೇವಲ ಅರ್ಥವ್ಯವಸ್ಥೆಯ ತಳಹದಿಯ ಮೇಲಲ್ಲ. ಎಷ್ಟೇ ಸಂಪನ್ಮೂಲಗಳನ್ನು ಹೊಂದಿದ್ದರೂ, ಎಂತಹುದೇ ಸಂಪದ್ಭರಿತ ಆರ್ಥಿಕ ಬುನಾದಿಯನ್ನು ಹೊಂದಿದ್ದರೂ, ಸಂವೇದನಾಶೀಲ ಮನುಜ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗದ ಒಂದು ಸಮಾಜ ಒಳಗಿಂದೊಳಗೇ ಕೊಳೆತುಹೋಗುತ್ತದೆ. ಭಾರತದಲ್ಲಿ ಜಾತಿ, ಮತ, ಸಂಸ್ಕೃತಿ, ಪಂಥ ಮತ್ತು ಭಾಷಿಕ ಅಸ್ಮಿತೆಗಳ ನಡುವೆಯೇ ಮಾನವೀಯ ಸಮಾಜವನ್ನು ನಿರ್ಮಿಸಲು ಶತಮಾನಗಳಿಂದ ನಡೆಯುತ್ತಿರುವ ಪ್ರಯತ್ನಗಳು ಇಂದೇಕೋ ವಿಫಲ ಪ್ರಯತ್ನಗಳಂತೆ ಕಾಣತೊಡಗಿವೆ. ಬುದ್ಧನಿಂದ ಬಸವ, ಅಂಬೇಡ್ಕರ್‌ವರೆಗೆ, ಸೂಫಿ ಪರಂಪರೆಯಿಂದ ದಾಸ ಪರಂಪರೆಯವರೆಗೆ ಭಾರತದ ಬಹುತ್ವ ಸಂಸ್ಕೃತಿ ತನ್ನ ತೋಳುಗಳನ್ನು ಚಾಚಿಕೊಂಡಿದೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ಸೃಷ್ಟಿಯಾಗಿದ್ದ ತಾರತಮ್ಯದ ನೆಲೆಗಳನ್ನು ಕೊನೆಗೊಳಿಸಿ, ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದವನ್ನು ಸಾಧಿಸುವ ಪ್ರಯತ್ನಗಳು 12ನೇ ಶತಮಾನದ ಬಸವಣ್ಣನಿಂದ ಇಂದಿನವರೆಗೂ ನಡೆಯುತ್ತಲೇ ಬಂದಿದೆ. ಈ ಕ್ರಾಂತಿಕಾರಕ ಪರಿವರ್ತನೆಯ ಹಾದಿಗಳಲ್ಲಿ ಮುಳ್ಳು ಕಂಟಕಗಳಾಗಿ, ಶತಮಾನಗಳಿಂದ ಸಮಾಜದ ಗರ್ಭದಲ್ಲೇ ಅಂತರ್ಗತವಾಗಿರುವ ಪುರುಷ ಪ್ರಾಧಾನ್ಯತೆ, ಊಳಿಗಮಾನ್ಯ ಧೋರಣೆ, ವೈದಿಕಶಾಹಿಯ ಜಾತಿ ಶ್ರೇಷ್ಠತೆ, ಅಸ್ಪಶ್ಯತೆಯಂತಹ ಅಮಾನುಷ ಆಚರಣೆ, ಜಾತಿ ತಾರತಮ್ಯ ದೌರ್ಜನ್ಯಗಳು ಇಲ್ಲಿಯವರೆಗೂ ಉಳಿದುಕೊಂಡೇ ಬಂದಿವೆ.

ಸಮಾಜಮುಖಿ ಚಿಂತನೆಯ ವಿಭಿನ್ನ ಆಯಾಮಗಳು ಕಾಲದಿಂದ ಕಾಲಕ್ಕೆ ಮನ್ವಂತರ ಹೊಂದುತ್ತಿದ್ದರೂ, ಜನಸಮುದಾಯಗಳ ಮೇಲೆ ಸಾಂಪ್ರದಾಯಿಕ ಸಾಂಸ್ಕೃತಿಕ ಶಕ್ತಿಗಳ ಹಿಡಿತವನ್ನು ಸಡಿಲಗೊಳಿಸುವುದು ಸಾಧ್ಯವಾಗಿಲ್ಲ. ವೈದಿಕಶಾಹಿಯ ಜಾತಿ ತಾರತಮ್ಯದ ನೆಲೆಗಳು ಒಂದೆಡೆ ಗಟ್ಟಿಯಾಗುತ್ತಿದ್ದರೆ, ಜಾತಿ ಪದ್ಧತಿಯ ಶೋಷಣೆಯ ಆಯಾಮಗಳು ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಿವೆ. ಜಾತಿ ಮತ್ತು ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿಯನ್ನು ಮರಳಿ ಪಡೆಯಲೆತ್ನಿಸುತ್ತಿವೆ. ಈ ನಡುವೆಯೇ ಹೆಚ್ಚಿನ ಮತಗಳು ಜನಸಂಸ್ಕೃತಿಯ ನೆಲೆಗಳಿಂದ ವಿಮುಖವಾಗಿ ತಮ್ಮದೇ ಆದ ಮತಾಧಾರಿತ ಧಾರ್ಮಿಕ-ಸಾಂಸ್ಕೃತಿಕ ನೆಲೆಗಳನ್ನು ಸ್ಥಾಪಿಸಲು ಯತ್ನಿಸುತ್ತಿವೆ. 20ನೆಯ ಶತಮಾನದ ಆರಂಭದಿಂದಲೇ, ಸ್ವಾತಂತ್ರ್ಯ ಸಂಗ್ರಾಮದ ನಡುವೆಯೇ, ಬಹುಸಂಖ್ಯಾತ ಹಿಂದೂ ಮತೀಯವಾದ ರಾಜಕೀಯ ಸ್ವರೂಪ ಪಡೆದುಕೊಂಡಿದ್ದರಿಂದ, ಕ್ರೈಸ್ತ, ಸಿಖ್ ಮತ್ತು ಇಸ್ಲಾಂ ಧರ್ಮಗಳು ಸಾಂಸ್ಥಿಕ ನೆಲೆಯಲ್ಲಿ ತಮ್ಮ ಅಸ್ಮಿತೆಗಳನ್ನು ಸಂರಕ್ಷಿಸಿಕೊಳ್ಳಲು ಹೆಣಗಾಡಬೇಕಾಯಿತು. ತಮ್ಮ ಮತೀಯ ನಂಬಿಕೆಗಳು ಮತ್ತು ಆಚರಣೆಗಳನ್ನು ಕಾಪಾಡಿಕೊಳ್ಳುವ ಮಾರ್ಗದಲ್ಲಿ ಎದುರಾಗಬಹುದಾದ, ಇಂದು ಬಹುತ್ವದ ಪರಿಕಲ್ಪನೆಯಲ್ಲಿ ಈ ಸಂಕಥನ ಜಾರಿಯಲ್ಲಿರುವ, ಭಾರತದ ಬಹುಸಾಂಸ್ಕೃತಿಕ ಆಯಾಮಗಳನ್ನು, ಈ ಮತಗಳ ಪ್ರಚಾರಕರು, ಸಾಂಸ್ಥಿಕ ವಾರಸುದಾರರು ನಿಷ್ಕರ್ಷೆ ಮಾಡಲು ಮುಂದಾಗಲೇ ಇಲ್ಲ ಎನ್ನುವುದು ವಾಸ್ತವ. ವರ್ಗ ಸಂಘರ್ಷದ ನೆಲೆಯಲ್ಲಿ ಸಾಮಾಜಿಕಾರ್ಥಿಕ ಸಮಾನತೆಗಾಗಿ ಹೋರಾಡಿದ ಎಡಪಕ್ಷಗಳಲ್ಲೂ ಸಹ ಭಾರತದ ಬಹುಸಂಸ್ಕೃತಿಯ ನೆಲೆಗಳನ್ನು ಶೋಧಿಸುವ ಪ್ರಯತ್ನಗಳು ನಡೆಯಲಿಲ್ಲ. ಶ್ರಮಜೀವಿಗಳ ಬದುಕಿನಲ್ಲಿ ಇರಬಹುದಾದ ನೆಲಮೂಲ ಸಂಸ್ಕೃತಿಯ ಬೇರುಗಳನ್ನು ಛೇದಿಸುವ ನಿಟ್ಟಿನಲ್ಲಿ ಎಡಪಕ್ಷಗಳು ಆಸ್ಥೆ ವಹಿಸಲಿಲ್ಲ.

ಹಾಗಾಗಿಯೇ ಭಾರತದಲ್ಲಿ ಸಂಸ್ಕೃತಿ ಎಂದ ಕೂಡಲೇ ವೈದಿಕಶಾಹಿಯನ್ನೇ ಮರುಸ್ಥಾಪಿಸುವ ‘ಸನಾತನ ಭಾರತೀಯ ಸಂಸ್ಕೃತಿ’ಯ ಪ್ರತಿಪಾದನೆಯೇ ಮುಂದಾಗತೊಡಗಿತ್ತು. ಈ ನಿರ್ದಿಷ್ಟ ವ್ಯಾಖ್ಯೆಯಲ್ಲಿ ಪಾರಂಪರಿಕ ಭಾರತದ ಬಹುತ್ವ ಸ್ವರೂಪದ ನೆಲಸಂಸ್ಕೃತಿ ಮತ್ತು ವೈದಿಕಶಾಹಿಯ ಸಂಸ್ಕೃತಿ ಅನುಸಂಧಾನವಾಗುವುದು ಸಾಧ್ಯವೇ ಆಗದಂತೆ ವೈದಿಕಶಾಹಿಯು ತನ್ನ ಮೂಲ ಬೇರುಗಳನ್ನು ಗಟ್ಟಿಗೊಳಿಸುತ್ತಲೇ ಬಂದಿದೆ. ಇಂದು ಬಹು ಚರ್ಚಿತವಾಗಿರುವ ಬ್ರಾಹ್ಮಣಶಾಹಿ ಮತ್ತು ಬ್ರಾಹ್ಮಣ್ಯದ ಬೇರುಗಳನ್ನು ಈ ಪ್ರಕ್ರಿಯೆಯಲ್ಲಿಟ್ಟು ಗಮನಿಸಿದಾಗ, ಜಾತಿ ವಿನಾಶದ ಹೋರಾಟಗಳು, ಅಸ್ಪಶ್ಯತಾ ವಿರೋಧಿ ಆಂದೋಲನಗಳು ಮತ್ತು ಸಾಮಾಜಿಕ ಸಮಾನತೆಯ ಕನಸುಗಳು ಏಕೆ ವಿಫಲವಾಗಿವೆ, ವಿಫಲವಾಗುತ್ತಿವೆ ಎಂದು ಅರ್ಥವಾಗುತ್ತದೆ. ಈ ಸಂದರ್ಭದಲ್ಲಿ ಅನ್ಯ ಮತಗಳ ಸಾಂಸ್ಥಿಕ ನೆಲೆಗಳು ಭಾರತದ ಬಹುತ್ವರೂಪಿ ನೆಲಸಂಸ್ಕೃತಿಯೊಡನೆ ಅನುಸಂಧಾನದ ಪ್ರಯತ್ನವನ್ನು ಮಾಡಿದ್ದಲ್ಲಿ ಬಹುಶಃ ಇಂದು ಚರ್ಚೆಯಲ್ಲಿರುವ ಬಹುತ್ವದ ವ್ಯಾಪ್ತಿ ಇನ್ನೂ ವಿಸ್ತರಿಸಬಹುದಿತ್ತು, ಇನ್ನೂ ಆಳವಾಗಬಹುದಿತ್ತು. ಸ್ವಾತಂತ್ರ್ಯದ ನಂತರವೂ ತನ್ನ ಪಾರಮ್ಯವನ್ನು ಕಾಪಾಡಿಕೊಂಡೇ ಬಂದಿರುವ ಹಿಂದೂ ಎನ್ನಲಾಗುವ ಮತೀಯ ಸಾಂಸ್ಥಿಕ ನೆಲೆಗಳಿಗೆ ‘ಹಿಂದುತ್ವ’ ಎನ್ನಲಾಗುವ ರಾಜಕೀಯ ಸಿದ್ಧಾಂತವನ್ನು ಬೆಸುಗೆ ಮಾಡುವ ಮೂಲಕ ಸಾಂಪ್ರದಾಯಿಕ ವೈದಿಕ ಶಾಹಿಯು ಜಾತಿ ಶೋಷಣೆ ಮತ್ತು ಅಸ್ಪಶ್ಯತೆಯಂತಹ ಅಮಾನುಷ ಪರಂಪರೆಯನ್ನು, ಜಾತಿ ಅಸಮಾನತೆ ಮತ್ತು ತರತಮಗಳನ್ನು ಉಳಿಸಿಕೊಂಡೇ ಬಂದಿದ್ದು, ಈ ಪರಂಪರೆಯಲ್ಲಿ ತಮ್ಮ ಅಸ್ತಿತ್ವವನ್ನೇ ಕಾಣಲಾಗದ ಇಲ್ಲದ ಜನಸಮುದಾಯಗಳನ್ನೂ ತನ್ನೊಳಗೆ ಸೆಳೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.

ಸಾವರ್ಕರ್ ಪ್ರತಿಪಾದಿಸಿದ ಹಿಂದುತ್ವ ಮತ್ತು ಗೋಳ್ವಾಲ್ಕರ್ ಮುಂದಿಟ್ಟ ಹಿಂದೂ ರಾಷ್ಟ್ರದ ಪರಿಕಲ್ಪನೆಗಳು ಶೋಷಿತ ಸಮುದಾಯಗಳನ್ನೂ ಭೌಗೋಳಿಕ ಹಿಂದೂ ರಾಷ್ಟ್ರದ ಕಾಲಾಳುಗಳನ್ನಾಗಿ ಮಾಡಲು ಈ ಪರಂಪರೆ ನೆರವಾಗಿದೆ. ತಮ್ಮ ಅಸ್ಮಿತೆಗಳನ್ನು ಜಾತಿ ನೆಲೆಯಲ್ಲಿ ಗುರುತಿಸಿಕೊಳ್ಳುತ್ತಲೇ ಇದ್ದರೂ ಶೋಷಿತ ಸಮುದಾಯಗಳು ತಮ್ಮ ಮೂಲ ಬಹುಸಾಂಸ್ಕೃತಿಕ ನೆಲೆಗಳನ್ನೂ ಮರೆತು, ಹಿಂದೂ ಮತೀಯ ಚೌಕಟ್ಟಿನಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳುವಂತೆ ಮಾಡಿರುವುದು ಹಿಂದುತ್ವವಾದದ ಸಾಧನೆ ಎಂದೇ ಹೇಳಬಹುದು. ಈ ಹಿಂದುತ್ವ ರಾಜಕಾರಣ 1980-90ರ ದಶಕದಲ್ಲಿ ಪೋಷಿಸಿ ಬೆಳೆಸಿದ ಒಂದು ಪೀಳಿಗೆ, ಬಿತ್ತಿದ ವಿಘಟನೆಯ ಬೀಜಗಳು ಮತ್ತು ಪ್ರಚೋದಿಸಿದ ಮತಾಂಧತೆಯ ಚಿಂತನೆಗಳು ಇಂದು ನಮ್ಮೆದುರು ಬೃಹದಾಕಾರದಲ್ಲಿ ನಿಂತಿದೆ. ಭಾರತೀಯತೆಯನ್ನು ನಿಷ್ಕರ್ಷೆ ಮಾಡಲು ಮತೀಯ ಅಸ್ಮಿತೆಗಳನ್ನೇ ಮಾನದಂಡವನ್ನಾಗಿ ಮಾಡುವ ಒಂದು ಪ್ರಕ್ರಿಯೆಯನ್ನು ಮಂದಿರ ಮಸೀದಿ ವಿವಾದದಲ್ಲಿ, ಅಯೋಧ್ಯೆ ರಾಮಮಂದಿರ ಘರ್ಷಣೆಯಲ್ಲಿ, ಇದಕ್ಕೆ ಪ್ರತಿಯಾಗಿ ರೂಪುಗೊಂಡ ಮುಸ್ಲಿಂ ಮೂಲಭೂತವಾದದಲ್ಲಿ, ಖಾಲಿಸ್ತಾನ ಮತ್ತು ಸಿಖ್ಖರ ಸಂಘರ್ಷದಲ್ಲಿ, ಕಾಶ್ಮೀರದ ಪ್ರಕ್ಷುಬ್ಧತೆಯಲ್ಲಿ ಗುರುತಿಸಬಹುದು. ‘‘ನಾನು ಭಾರತೀಯ’’ ಎನ್ನುವ ಘೋಷಣೆಯ ಸಮಾಧಿ ಮಾಡಿ ‘‘ನಾವೆಲ್ಲಾ ಹಿಂದೂ’’ ಎಂಬ ಮತೀಯ ಘೋಷಣೆಯನ್ನು ಪ್ರಚೋದಿಸಿದ ಮತಾಂಧ ಶಕ್ತಿಗಳು ಅನ್ಯಮತೀಯ ಅಸ್ಮಿತೆಗಳನ್ನು ಅಲ್ಲಗಳೆಯುವ ಮೂಲಕ ಭಾರತೀಯತೆ ಯನ್ನು ಹೊಸದಾಗಿ ವ್ಯಾಖ್ಯಾನಿಸಲು ಮುಂದಾದವು. ‘‘ಮೇರಾ ಭಾರತ್ ಮಹಾನ್’’ ಘೋಷಣೆಯಲ್ಲಿರುವ ಭಾರತಕ್ಕೂ, ‘‘ಭಾರತ್ ಮಾತಾ ಕಿ ಜೈ’’ ಘೋಷಣೆಯಲ್ಲಿರುವ ಭಾರತಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸಬಹುದು.

ಈ ಬೆಳವಣಿಗೆಯನ್ನು ಭಾರತದ ಬಹುತ್ವ ಮತ್ತು ಬಹುಸಾಂಸ್ಕೃತಿಕ ನೆಲೆಯಲ್ಲಿ ಎದುರಿಸಬೇಕಾಗಿದ್ದ ಸಂದರ್ಭದಲ್ಲಿ, ಈ ಬಹುಸಂಸ್ಕೃತಿಯನ್ನು ಪ್ರತಿನಿಧಿಸುವ ಶೋಷಿತ ಸಮುದಾಯಗಳು, ತಳಸಮುದಾಯಗಳು ಬಹುಮಟ್ಟಿಗೆ ನಿರ್ಲಿಪ್ತವಾಗಿದ್ದವು. ಅಥವಾ ತಮ್ಮದೇ ಆದ ಸಾಮಾಜಿಕ ಘನತೆಗಾಗಿ, ಸಾಮಾಜಿಕಾರ್ಥಿಕ ಸಮಾನತೆಗಾಗಿ, ರಾಜಕೀಯ ಅವಕಾಶಕ್ಕಾಗಿ ಹೋರಾಡುತ್ತಿದ್ದವು. ಇಸ್ಲಾಂ ಮತದ ಸಾಂಸ್ಥಿಕ ನೆಲೆಗಳು ತಮ್ಮ ಮೂಲ ಧಾರ್ಮಿಕ ಚೌಕಟ್ಟಿನಿಂದಾಚೆಗೆ, ಭಾರತದ ನೆಲಸಂಸ್ಕೃತಿಯನ್ನು ಗುರುತಿಸಲೇ ಇಲ್ಲ. ಭಾರತದಲ್ಲಿ ಇಸ್ಲಾಂ ನೆಲೆಗೊಳ್ಳಲು ಮೂಲ ಕಾರಣವಾದ ಸೂಫಿ ಪರಂಪರೆಯನ್ನೂ ನೇಪಥ್ಯಕ್ಕೆ ಸರಿಸಿ, ಮತೀಯವಾದವನ್ನು ಪೋಷಿಸುವುದರಲ್ಲಿ ಮುಸ್ಲಿಂ ಮತೀಯ ನಾಯಕರು ಮುಂದಾದರು. ಹಿಂದೂ ಮತೀಯವಾದಕ್ಕೆ ಬಹುಸಾಂಸ್ಕೃತಿಕ ನೆಲೆಗಳು ಮುಖಾಮುಖಿಯಾಗುವುದರ ಬದಲು ಇಸ್ಲಾಂ ಮತೀಯವಾದ ಮುಖಾಮುಖಿಯಾಗಿತ್ತು. ಇದರ ಭೀಕರ ಪರಿಣಾಮಗಳನ್ನು ಅಯೋಧ್ಯೆಯಿಂದ ಗುಜರಾತ್‌ವರೆಗೂ ಕಾಣಬಹುದು. ಇದರ ನೇರ ಪರಿಣಾಮವನ್ನು 1980-90ರ ದಶಕದಲ್ಲಿ ಉಲ್ಬಣಿಸಿದ ಕಾಶ್ಮೀರ ಸಮಸ್ಯೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಕಾಶ್ಮೀರದ ಜನತೆಯ ‘ಕಾಶ್ಮೀರಿಯತ್’ ಅಸ್ಮಿತೆಗಿಂತಲೂ ಹೆಚ್ಚಾಗಿ ಅಲ್ಲಿನ ಜನರ ಇಸ್ಲಾಂ ಮತೀಯ ಅಸ್ಮಿತೆಗಳೇ ಪ್ರಧಾನವಾಗಿ ಮುನ್ನೆಲೆಗೆ ಬಂದಿದ್ದರಿಂದ, ಕಾಶ್ಮೀರ ವಿವಾದವೇ ಹಿಂದೂ-ಮುಸ್ಲಿಂ ಸಮಸ್ಯೆಯಾಗಿ ಪರಿಣಮಿಸಿತು.

ಹಿಂದುತ್ವವಾದಿಗಳ ಅಖಂಡ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಕಾಶ್ಮೀರ ಒಂದು ಮುಸ್ಲಿಂ ಪ್ರತಿರೋಧದ ಛಾಯೆಯಾಗಿ ಕಂಡಿತೇ ಹೊರತು, ಕಾಶ್ಮೀರಿಗಳ ನೆಲಮೂಲದ ಸಾಂಸ್ಕೃತಿಕ ಅಸ್ಮಿತೆಗಳು ಕಾಣಲಿಲ್ಲ. ಇದರ ಫಲಾನುಭವಿಗಳಾದವರು ಅತ್ತ ಪಾಕಿಸ್ತಾನದಿಂದ ಪ್ರಚೋದಿತರಾದ ಮೂಲಭೂತವಾದಿಗಳು, ಇತ್ತ ಹಿಂದುತ್ವ ಪ್ರತಿಪಾದಿಸುವ ಮೂಲಭೂತವಾದಿಗಳು. ಕಳೆದ ನಾಲ್ಕು ದಶಕಗಳಲ್ಲಿ ಉಗ್ರವಾದ, ಭಯೋತ್ಪಾದನೆ, ಸೇನಾ ಕಾರ್ಯಾಚರಣೆಯ ಅತಿರೇಕಗಳು, ಆಡಳಿತ ವ್ಯವಸ್ಥೆಯ ದಬ್ಬಾಳಿಕೆ ಮತ್ತು ಕೋಮು ಸಂಘರ್ಷಗಳಲ್ಲಿ ಹೆಚ್ಚಿನ ನಷ್ಟ ಅನುಭವಿಸಿರುವುದು ಮುಸ್ಲಿಂ ಸಮುದಾಯವೇ. ಅದೇ ವೇಳೆ ಶತಮಾನಗಳಿಂದ ಕಾಶ್ಮೀರದಲ್ಲಿ ಬದುಕು ಕಟ್ಟಿಕೊಂಡಿದ್ದ ಪಂಡಿತ ಸಮುದಾಯವೂ ಸಾವು ನೋವುಗಳನ್ನು ಅನುಭವಿಸಬೇಕಾಯಿತು. ಈ ಎರಡೂ ಸಮುದಾಯಗಳ ನಡುವೆ ಭಾರತದ ಬಹುಸಾಂಸ್ಕೃತಿಕ ನೆಲೆಯಲ್ಲಿ ಅನುಸಂಧಾನ ಸಾಧ್ಯವಾಗಿದ್ದಲ್ಲಿ ಬಹುಶಃ ಕಾಶ್ಮೀರ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರಲಿಲ್ಲ.

ಆದರೆ ಮತಾಂಧತೆ ಮತ್ತು ಮತೀಯವಾದವನ್ನೇ ಅವಲಂಬಿಸಿ ತಮ್ಮ ಸಾಮ್ರಾಜ್ಯ ವಿಸ್ತರಣೆಯನ್ನು ಬಯಸುವ ಹಿಂದೂ-ಮುಸ್ಲಿಂ ಮತೀಯ-ಮತಾಂಧ ಶಕ್ತಿಗಳಿಗೆ ಇದು ಬೇಕಿರಲಿಲ್ಲ. ಭಾರತದ ಸಕಲ ಸಮಸ್ಯೆಗಳಿಗೂ ಇಲ್ಲಿನ ಮುಸಲ್ಮಾನರೇ ಕಾರಣ ಎಂಬ ಒಂದು ವಿತಂಡವಾದವೇ ಅಯೋಧ್ಯೆಯ ಮಂದಿರ ವಿವಾದದಲ್ಲಿ ಸಾವಿರಾರು ಸಾವುಗಳಿಗೆ ಕಾರಣವಾಯಿತು. ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು ನವ ಉದಾರವಾದ ಸೃಷ್ಟಿಸಿದ ಸಾಮಾಜಿಕಾರ್ಥಿಕ ಅಭದ್ರತೆ ಮತ್ತು ಅನಿಶ್ಚಿತತೆಗಳು ಹಿಂದೂ ಮತ್ತು ಮುಸ್ಲಿಂ ಸಮುದಾಯದಲ್ಲಿ ಸಮಾನವಾಗಿ ಅವಕಾಶವಂಚಿತರನ್ನು, ಶೋಷಿತರನ್ನು ಕಾಡಿತ್ತು. ಬಡತನ, ಹಸಿವು, ದಾರಿದ್ರ್ಯ ಮತ್ತು ಅಸಮಾನತೆಗಳು ಎರಡೂ ಸಮುದಾಯಗಳನ್ನು ಸಮಾನವಾಗಿ ಕಾಡಿತ್ತು.

ಈ ದುರವಸ್ಥೆಗೆ ಹಿಂದೂ ಮತಾಂಧ ಶಕ್ತಿಗಳು ಇಸ್ಲಾಂ ಧರ್ಮದಲ್ಲಿ ಮತ್ತು ಮತಾಂತರ ಪ್ರಕ್ರಿಯೆಯಲ್ಲಿ ಕಾರಣಗಳನ್ನು ಗುರುತಿಸುವ ಮೂಲಕ ಜನಸಾಮಾನ್ಯರ ನಡುವೆ ಕಂದಕಗಳನ್ನು ನಿರ್ಮಿಸಲು ಧರ್ಮ ಮತ್ತು ಜಾತಿಯ ಅಸ್ಮಿತೆಗಳನ್ನೇ ಬಳಸಿಕೊಳ್ಳಲಾಯಿತು. 1990ರ ಸಂದರ್ಭದಲ್ಲಿ ಭಾರತದಲ್ಲಿ ತಲೆದೋರಿದ ಸಾಮಾಜಿಕಾರ್ಥಿಕ ಸಮಸ್ಯೆಗಳಿಗೆ ಮತೀಯ ಲೇಪನ ನೀಡುವ ಮೂಲಕ ಹಿಂದುತ್ವವಾದಿ ಸಾಂಸ್ಕೃತಿಕ ರಾಜಕಾರಣವು, ಶೋಷಿತ ಸಮುದಾಯಗಳನ್ನು ವಿಭಜಿಸುವಲ್ಲಿ ಯಶಸ್ವಿಯಾಯಿತು. ಶೋಷಿತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಸಲ್ಮಾನರ ಓಲೈಕೆಯೇ ಕಾರಣ ಎಂಬ ಸಂಘಪರಿವಾರದ ವಾದವನ್ನು ಪುಷ್ಟೀಕರಿಸುವ ಸಲುವಾಗಿಯೇ ಇತಿಹಾಸದ ಉತ್ಖನನವನ್ನೂ ಮಾಡಲಾಯಿತು. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅಸ್ತಿತ್ವವನ್ನೇ ನಿರಾಕರಿಸಲ್ಪಡುವ ತಳಸಮುದಾಯಗಳೂ ಅಖಂಡ ಭಾರತ ಅಥವಾ ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ಕಾಲಾಳುಗಳನ್ನು ಒದಗಿಸಲಾರಂಭಿಸಿದವು. ಅನ್ಯಮತ ದ್ವೇಷ ರಾಜಕಾರಣಕ್ಕೆ ಸಾಂಸ್ಕೃತಿಕ ರಾಷ್ಟ್ರೀಯತೆಯ ಲೇಪನ ನೀಡಲಾಯಿತು. ಬಂಡವಾಳಶಾಹಿ ಅರ್ಥವ್ಯವಸ್ಥೆಯಿಂದ ಹಸಿವು-ದಾರಿದ್ರ್ಯದ ಕೂಪಕ್ಕೆ ತಳ್ಳಲ್ಪಟ್ಟ ಸಮುದಾಯಗಳು ತಮ್ಮ ಸಮಾನ ಶತ್ರುವನ್ನು, ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗುರುತಿಸಲು ವಿಫಲವಾಗಿದ್ದೇ ಅಲ್ಲದೆ, ಮತೀಯ, ಧಾರ್ಮಿಕ ನೆಲೆಯಲ್ಲಿ ಶತ್ರುಗಳನ್ನು ಗುರುತಿಸಲಾರಂಭಿಸಿದವು.

ಈ ಸಂದರ್ಭದಲ್ಲಿ ಸೃಷ್ಟಿಯಾದ ಒಂದು ವಿಕೃತ, ವಿಧ್ವಂಸಕ ಪೀಳಿಗೆಯೇ ಇಂದು ಸಮಾಜಘಾತುಕ ಶಕ್ತಿಗಳಾಗಿ ರೂಪುಗೊಂಡಿವೆ. ಇತ್ತೀಚೆಗೆ ಧರ್ಮ ಸಂಸತ್ತಿನಲ್ಲಿ ಮಾಡಿರುವಂತಹ ಘೋಷಣೆಗಳು, ಸಮಸ್ತ ಮುಸಲ್ಮಾನರನ್ನೂ ಹಿಂದೂಗಳಾಗಿ ಮರು ಮತಾಂತರಗೊಳಿಸುವ ಸಂಸದರ ಹೇಳಿಕೆಗಳು, ಕರ್ನಾಟಕದ ಕರಾವಳಿಯಲ್ಲಿ ಮುಕ್ತವಾಗಿ ತ್ರಿಶೂಲಗಳನ್ನು ವಿತರಿಸುತ್ತಿರುವುದು, ಕೇರಳದಲ್ಲಿ ನಡೆಯುತ್ತಿರುವ ಸಂಘರ್ಷ, ಕಾಶ್ಮೀರದಲ್ಲಿ ಅಮಾಯಕರನ್ನು ಗುರಿಮಾಡುತ್ತಿರುವ ಭಯೋತ್ಪಾದಕ ಗುಂಪುಗಳು, ಜಾತಿ ಶ್ರೇಷ್ಠತೆಯನ್ನು ಕಾಪಾಡಲು ಇಂದಿಗೂ ಅಸ್ಪಶ್ಯತೆಯನ್ನು ಪೋಷಿಸುತ್ತಿರುವ ಮೇಲ್ಜಾತಿಯ, ಸವರ್ಣೀಯ ಶಕ್ತಿಗಳು ಇವೆಲ್ಲವೂ 1980-90ರ ದಶಕದ ಸಾಂಸ್ಕೃತಿಕ ರಾಜಕಾರಣ ಮತ್ತು ಮತೀಯವಾದದ ನೆರಳಲ್ಲೇ ಬೆಳೆದುಬಂದಿರುವಂತಹುದು. ಈ ಸಮಾಜಘಾತುಕತೆಯ ಬೀಜಗಳನ್ನು ಬಿತ್ತಿದವರು ಇಂದು ನೇಪಥ್ಯಕ್ಕೆ ಸರಿದಿದ್ದಾರೆ. ಬಾಬರಿ ಮಸೀದಿ ಧ್ವಂಸ ಮಾಡಿದ ಸಂದರ್ಭದಲ್ಲಿ ಕೇಳಿಬಂದ ‘‘ಏಕ್ ಧಕ್ಕಾ ಔರ್ ದೋ ಬಾಬರಿ ಮಸ್ಜಿದ್ ತೋಡ್ ದೋ’’ ಎಂಬ ಘೋಷಣೆಯ ಮೂಲಕ ಬೀಜಾಂಕುರವಾದ ಮತಾಂಧತೆ ಇಂದು ‘‘ಹಿಂದೂ ಧರ್ಮಕ್ಕೆ ಸಂಕಟ ಬಂದಾಗ ಹಿಂದೂ ಕಾರ್ಯಕರ್ತರೇ ತಲವಾರ್ ಹಿಡಿಯಬೇಕು’’ ಎಂಬ ಆಂಧ್ರ ಪ್ರದೇಶದ ಬಿಜೆಪಿ ಶಾಸಕ ರಾಜಾಸಿಂಗ್ ಹೇಳಿಕೆಯಲ್ಲಿ, ಹರಿದ್ವಾರದ ಧರ್ಮಸಂಸತ್ತಿನಲ್ಲಿ ಮೊಳಗಿದ ಘೋಷಣೆಗಳಲ್ಲಿ ಹೆಮ್ಮರವಾಗಿ ಕಾಣುತ್ತದೆ. ಹಿಂದೂ ಮತ್ತು ಇಸ್ಲಾಂ ಮತಕ್ಕೆ ಸೇರಿದ ಶೋಷಿತ ಜನತೆಯ ಬದುಕನ್ನು ಹಸನಾಗಿಸುವ ಪ್ರಯತ್ನಗಳು ಧರ್ಮ ರಕ್ಷಣೆ ಮತ್ತು ಧರ್ಮ ವಿನಾಶದ ನೆಲೆಯಲ್ಲಿ ರೂಪುಗೊಳ್ಳುವುದಕ್ಕೆ ಸಾಂಸ್ಕೃತಿಕ ರಾಜಕಾರಣ ಬುನಾದಿಯಾಗಿ ಪರಿಣಮಿಸಿತ್ತು.

ಹಿಂದೂ ಮತ್ತು ಮುಸ್ಲಿಂ ಸಮುದಾಯದಲ್ಲಿ ಶೋಷಿತ ಸಮುದಾಯಗಳು ಎದುರಿಸುತ್ತಿದ್ದ ಸಾಮಾಜಿಕಾರ್ಥಿಕ ಅಸಮಾನತೆಗಳಿಗೆ ಸಾಂಸ್ಕೃತಿಕ ರಾಜಕಾರಣದ ಮೂಲಕ ಉತ್ತರಗಳನ್ನು ಶೋಧಿಸಲಾರಂಭಿಸಿದ್ದೇ, ಪರಸ್ಪರ ವೈಷಮ್ಯ ಸೃಷ್ಟಿಸುವ ಕೋಮುವಾದಿ ರಾಜಕಾರಣಕ್ಕೂ ಸುಭದ್ರ ಬುನಾದಿಯನ್ನು ನಿರ್ಮಿಸಿತ್ತು. ಈ ಸಂದರ್ಭದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಅವರ ಚಿಂತನಾ ವಾಹಿನಿಗಳನ್ನೂ ಬದಿಗೊತ್ತಿ, ಶೋಷಿತ ಸಮುದಾಯಗಳು ಹಿಂದುತ್ವ ಮತ್ತು ಇಸ್ಲಾಂ ದ್ವೇಷದ ಸಾಂಸ್ಕೃತಿಕ ರಾಜಕಾರಣಕ್ಕೆ ಬಲಿಯಾಗಿದ್ದವು. ಈ ಪ್ರಕ್ರಿಯೆ ಇಂದಿಗೂ ಚಾಲ್ತಿಯಲ್ಲಿರುವುದು ದುರಂತ. ಈ ಸಂಧರ್ಭದಲ್ಲಿ ಭಾರತದ ಶೋಷಿತ ಸಮುದಾಯಗಳು ತಮ್ಮ ಅಸ್ಮಿತೆಯ ಚೌಕಟ್ಟುಗಳಿಂದ ಹೊರಬಂದು, ತನ್ನ ಸಮಾನ ಶತ್ರುವನ್ನು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಕಾಣಬೇಕಿತ್ತು. ಕೋಮು ಗಲಭೆಗಳಲ್ಲಿ ಉದುರಿದ ಹೆಣಗಳಲ್ಲಿ ಮತೀಯ ಅಸ್ಮಿತೆಗಳನ್ನು ಹೆಕ್ಕಿ ತೆಗೆಯುವ ವಿಧ್ವಂಸಕ ಮತಾಂಧ ಮನಸ್ಸುಗಳಿಗೆ, ಹಸಿವಿನಿಂದ ಸಾಯುತ್ತಿರುವವರಲ್ಲಿ ಹೀಗೆ ಹೆಕ್ಕಿ ತೆಗೆಯಲು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಶೋಷಣೆಯ ಆಯಾಮಗಳು ಬದಲಾಗುತ್ತಲೇ ಹೋದರೂ, ಶೋಷಣೆಯ ಮೂಲಗಳು ಅವೇ ಆಗಿದ್ದವು. ಬುದ್ಧನಿಂದ ಬಸವಣ್ಣನವರೆಗೆ, ಗಾಂಧಿ-ಅಂಬೇಡ್ಕರ್‌ವರೆಗೆ ನಡೆದುಬಂದ ಬಹುಸಾಂಸ್ಕೃತಿಕ ನೆಲೆಗಳನ್ನು ಪ್ರತಿನಿಧಿಸು ವವರಿಗೆ ಈ ಶೋಷಣೆಯ ಮೂಲಗಳನ್ನು ಗುರುತಿಸಲು ಸಾಧ್ಯವಾಗಿದ್ದಿದ್ದರೆ, ಶೋಷಣೆಯ ಆಯಾಮಗಳನ್ನೂ ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತಿತ್ತು. ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಚೌಕಟ್ಟಿನಲ್ಲೇ ತೀವ್ರ ಶೋಷಣೆಗೊಳಗಾದ ಸಮುದಾಯಗಳು ಮತೀಯ ಅಸ್ಮಿತೆಗಳಿಗೆ ಜೋತು ಬೀಳದೆ, ಬಹುಸಾಂಸ್ಕೃತಿಕ ಅಸ್ಮಿತೆಗಳನ್ನು ಗುರುತಿಸಿದ್ದಲ್ಲಿ ಭಾರತ ವಿಭಿನ್ನ ದಿಕ್ಕಿನಲ್ಲಿ ಸಾಗಬಹುದಿತ್ತು. ಇದು ಸಾಧ್ಯವಾಗಿದ್ದಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್‌ನ ಅನುಸಂಧಾನ ಸಾಧ್ಯವಾಗಬಹುದಿತ್ತು. ಅಲ್ಪಸಂಖ್ಯಾತ ಸಮುದಾಯದೊಳಗಿನ ಶೋಷಿತ ವರ್ಗಗಳೊಡನೆ ಈ ದೇಶದ ಅಸ್ಪಶ್ಯರು, ಅವಕಾಶವಂಚಿತ-ದಮನಿತ ಜನಸಮುದಾಯಗಳು ಅನುಸಂಧಾನ ಮಾಡಬಹುದಿತ್ತು. ಹಾಗಾಗಿದ್ದರೆ ಅಸ್ಪಶ್ಯತೆ ಮತ್ತು ಜಾತಿ ದೌರ್ಜನ್ಯದ ಅಪಮಾನಗಳಿಂದ ಮುಕ್ತಿ ಪಡೆಯಲು ದಲಿತರಿಗೆ ಇದ್ದ ಮತಾಂತರದ ಹಕ್ಕನ್ನು ಪ್ರಭುತ್ವ ಕಸಿದುಕೊಳ್ಳಲಾಗುತ್ತಿರಲಿಲ್ಲ ಅಥವಾ ಲವ್ ಜಿಹಾದ್, ಮತಾಂತರದ ಸುತ್ತ ಬೆಸೆಯಲಾಗುತ್ತಿರುವ ವಿಘಟನೆಯ ವಿಷಬೇಲಿಗಳನ್ನು ಸೃಷ್ಟಿಸಲಾಗುತ್ತಿರಲಿಲ್ಲ. ಭಾರತದ ನೆಲಮೂಲ ಸಂಸ್ಕೃತಿಗೂ ವೈದಿಕಶಾಹಿಯ ಸಾಂಸ್ಕೃತಿಕ ನೆಲೆಗಳಿಗೂ ಇರುವ ಅಂತರವನ್ನು ಅಂಬೇಡ್ಕರ್ ಮೂಲಕವೇ ಅರ್ಥಮಾಡಿಕೊಳ್ಳುವುದರ ಮುಖೇನ ಮಾರ್ಕ್ಸ್‌ನ ವರ್ಗ ಪ್ರಜ್ಞೆಯ ಪರಿಕಲ್ಪನೆಗೆ ಮುಖಾಮುಖಿಯಾಗಲು ಸಾಧ್ಯ.

ಶೋಷಕ ವ್ಯವಸ್ಥೆಯು, ಮೇಲ್ಜಾತಿಯ ದೌರ್ಜನ್ಯಗಳ ಮೂಲಕ, ಮತಾಂಧತೆಯ ಮೂಲಕ, ಅಸ್ಪಶ್ಯತೆಯ ಮೂಲಕ, ಕೋಮು ವಿಘಟನೆಯ ಮೂಲಕ ಬಂಡವಾಳಶಾಹಿ ಅರ್ಥವ್ಯವಸ್ಥೆಯೊಡನೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಶೋಷಣೆಯ ಆಯಾಮಗಳು ಸಾಮಾಜಿಕಾರ್ಥಿಕ ಮತ್ತು ಸಾಂಸ್ಕೃತಿಕ ರೂಪಗಳಲ್ಲಿ ವ್ಯಕ್ತವಾಗುತ್ತಾ ಶೋಷಿತರ ಒಂದು ವರ್ಗವನ್ನೂ ತನ್ನೊಳಗೆ ಸೆಳೆದುಕೊಳ್ಳಲು ನೆರವಾಗುತ್ತದೆ. ಇದಕ್ಕೆ ಪ್ರತಿಯಾಗಿ ರೂಪುಗೊಳ್ಳುವ ಯಾವುದೇ ಪ್ರತಿರೋಧದ ದನಿಗಳು, ತುಳಿತಕ್ಕೊಳಗಾದ, ಅಪಮಾನಿತ ತಳ ಸಮುದಾಯಗಳು ಮತ್ತು ಅವಕಾಶವಂಚಿತ ಬಡ ಜನತೆ ಜಾತಿ-ಮತ-ಧರ್ಮಗಳ ಅಸ್ಮಿತೆಗಳ ಚೌಕಟ್ಟಿನಿಂದ ಹೊರಬಂದು, ಭಾರತದ ಬಹುಸಾಂಸ್ಕೃತಿಕ ನೆಲೆಗಳಲ್ಲಿ ಐಕಮತ್ಯವನ್ನು ಸಾಧಿಸಬೇಕಿದೆ. ಹಾಗಾದಲ್ಲಿ ಮಾತ್ರವೇ ಜಾತಿ-ಮತಗಳ ಅಸ್ಮಿತೆ ಯಿಂದಾಚೆಗೂ ವಿಮೋಚನೆಯ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News