ಆಂಡ್ರಾಯ್ಡ್, iOS ಗೆ ಪರ್ಯಾಯ ದೇಶೀಯ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಗೆ ಸರಕಾರದ ಒಲವು

Update: 2023-06-30 05:06 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಗೂಗಲ್‌ನ ಆಂಡ್ರಾಯ್ಡ್ ಮತ್ತು ಆ್ಯಪಲ್‌ನ iOS ಗೆ ಪರ್ಯಾಯವಾಗಿ ದೇಶೀಯವಾಗಿ ಒಂದು ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುವ ನೀತಿಯೊಂದನ್ನು ಜಾರಿಗೆ ತರಲು ಕೇಂದ್ರ ಸರಕಾರ ಚಿಂತಿಸುತ್ತಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಆಂಡ್ರಾಯ್ಡ್ ಮತ್ತು ಐಒಎಸ್ ಸಿಸ್ಟಂಗೆ ಪರ್ಯಾಯವಾಗಿ ಮೂರನೇ ಆಪರೇಟಿಂಗ್ ಸಿಸ್ಟಂ ಈಗ ಇಲ್ಲ. ಈ ಹಿನ್ನೆಲೆಯಲ್ಲಿ ಹೊಸ ಹ್ಯಾಂಡ್‌ಸೆಟ್ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿ ಕುರಿತು ಆಸಕ್ತಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ಟ್-ಅಪ್ ಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ದೇಶೀಯ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಸರಕಾರ ಪರಿಶೀಲಿಸುತ್ತಿದೆ. ಇದು ವಾಸ್ತವವಾದರೆ ಭಾರತೀಯ ಅಪರೇಟಿಂಗ್ ಸಿಸ್ಟಂ ಬ್ರ್ಯಾಂಡ್ ಒಂದು ಅಭಿವೃದ್ಧಿಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಐಸಿಇಎ ಸಿದ್ಧಪಡಿಸಿದ ಇಲೆಕ್ಟ್ರಾನಿಕ್ಸ್ ಉತ್ಪಾದನಾ ರಂಗದ ವಿಷನ್ ಡಾಕ್ಯುಮೆಂಟ್‌ನ ಎರಡನೇ ಸಂಚಿಕೆಯನ್ನು ರಾಜೀವ್ ಚಂದ್ರಶೇಖರ್ ಮತ್ತು ಐಟಿ ಸಚಿವ ಅಶ್ವನಿ ವೈಷ್ಣವ್ ಅವರ ಜತೆಗೂಡಿ ಬಿಡುಗಡೆಗೊಳಿಸಿದರು. ದೇಶದಲ್ಲಿ 2026 ವೇಳೆಗೆ ಇಲೆಕ್ಟ್ರಾನಿಕ್ಸ್ ಉತ್ಪನ್ನ ಕ್ಷೇತ್ರದ ಮೌಲ್ಯವನ್ನು ರೂ. 22,55,265 ಕೋಟಿ (500 ಬಿಲಿಯನ್ ಡಾಲರ್)ಗೆ  ಪ್ರಸಕ್ತ ರೂ. 5,63,820 ಕೋಟಿ (75 ಬಿಲಿಯನ್ ಡಾಲರ್) ಯಿಂದ ಏರಿಕೆ ಮಾಡುವ ಗುರಿಯನ್ನು ಸಾಧಿಸುವ ಕುರಿತಂತೆ ಈ ವಿಷನ್ ಡಾಕ್ಯುಮೆಂಟ್ ವಿವರಿಸಿದೆ.

ಪ್ರಸ್ತುತ ಭಾರತ ಸುಮಾರು ರೂ. 1,12,775 ಕೋಟಿ ಮೌಲ್ಯದ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ರಫ್ತುಗೊಳಿಸುತ್ತಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News