ಆರ್ಥಿಕ ಹಿಂಜರಿತದ ನೆರಳಿನಲ್ಲಿ ಜಗತ್ತು

Update: 2023-06-30 05:06 GMT

ಅವರ ದೃಷ್ಟಿಯಲ್ಲಿ ಜಗತ್ತಿನ ಆರ್ಥಿಕ ಹಿಂಜರಿಕೆಗೆ ಮೂರು ಪ್ರಮುಖ ದೇಶಗಳ ಆರ್ಥಿಕ ಪ್ರಗತಿ ಕುಂಠಿತವಾಗಿರುವುದು ಕಾರಣ. ಇದನ್ನು ಒಪ್ಪಿಕೊಂಡರೆ ಅಮೆರಿಕದ ಸ್ಥಿತಿ ಸುಧಾರಿಸದೆ ಹೋದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಬಹುದು. ಯಾಕೆಂದರೆ ಅವರೇ ಹೇಳುವಂತೆ ಅಮೆರಿಕ ತನ್ನ ಹಣದುಬ್ಬರದ ನಿಯಂತ್ರಣ ಕ್ರಮವನ್ನು ಅಂದರೆ ಬಡ್ಡಿದರದ ಏರಿಕೆಯನ್ನು ಇನ್ನಷ್ಟು ಕಾಲ ಮುಂದುವರಿಸಬೇಕು. ಅದರಿಂದ ಅದರ ಆರ್ಥಿಕ ಬೆಳವಣಿಗೆ ಕುಂಠಿತವಾಗುವುದು ನಿಶ್ಚಿತ. ಹಾಗೆಯೇ ಚೀನಾದಲ್ಲಿ ಪರಿಸ್ಥಿತಿ ಸುಧಾರಿಸದೆ ಹೋದರೆ ಅದೂ ಜಗತ್ತಿನ ಆರ್ಥಿಕತೆಯನ್ನು ತೀವ್ರವಾಗಿ ಬಾಧಿಸುತ್ತದೆ.

ಐಎಂಎಫ್‌ನ ನಿರ್ವಾಹಕ ನಿರ್ದೇಶಕರಾದ ಕ್ರಿಸ್ಟಲಿನ ಜಾರ್ಜಿವ ‘‘೨೦೨೩ರಲ್ಲಿ ಜಾಗತಿಕ ಆರ್ಥಿಕತೆಯ ಪ್ರಗತಿ ಕುಂಠಿತಗೊಳ್ಳಲಿದೆ. ಜಗತ್ತಿನ ಮೂರನೇ ಒಂದು ಭಾಗದಷ್ಟು ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುತ್ತವೆ’’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನು ಹಲವರು ಹೇಳಿದ್ದರೂ ಜಾಗತಿಕ ಆರ್ಥಿಕತೆಯ ವಕ್ತಾರರ ಬಾಯಿಂದ ಬಂದಿರುವುದರಿಂದ ಇದಕ್ಕೆ ಒಂದು ರೀತಿಯ ಅಧಿಕೃತತೆ ದೊರಕಿದೆ.

ಅವರ ದೃಷ್ಟಿಯಲ್ಲಿ ಇದಕ್ಕೆ ಜಗತ್ತಿನ ಮೂರು ಪ್ರಮುಖ ಆರ್ಥಿಕ ಶಕ್ತಿಗಳಾದ ಅಮೆರಿಕ, ಐರೋಪ್ಯ ಒಕ್ಕೂಟ ಹಾಗೂ ಚೀನಾಗಳಲ್ಲಿ ಒಂದೇ ಕಾಲಕ್ಕೆ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳುತ್ತಿರುವುದು ಕಾರಣ. ಚೀನಾದಲ್ಲಿ ಸರಕಾರದ ಶೂನ್ಯ ಕೋವಿಡ್ ನೀತಿಯಿಂದ ಆರ್ಥಿಕತೆಯಲ್ಲಿ ಹಿನ್ನಡೆಯಾಗಿದೆ. ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ. ಕಳೆದ ನಲವತ್ತು ವರ್ಷಗಳಲ್ಲಿ ಮೊತ್ತಮೊದಲ ಬಾರಿಗೆ ಚೀನಾದ ಜಿಡಿಪಿ ದರ ಜಾಗತಿಕ ದರಕ್ಕಿಂತ ಕಡಿಮೆಯಾಗಲಿದೆ. ಈ ಬಿಕ್ಕಟ್ಟು ಇನ್ನೂ ಕೆಲವು ತಿಂಗಳು ಮುಂದುವರಿಯಬಹುದು. ಇಂದು ಜಗತ್ತು ಚೀನಾವನ್ನು ಅತಿಯಾಗಿ ಅವಲಂಬಿಸಿರುವುದರಿಂದ ಇದರ ಪರಿಣಾಮ ಜಗತ್ತಿನ ಆರ್ಥಿಕತೆಯ ಮೇಲೆ ತೀವ್ರವಾಗಿ ಆಗಲಿದೆ. ಐಎಂಎಫ್ ಅಂದಾಜಿನ ಪ್ರಕಾರ ಕೋವಿಡ್‌ಗೆ ಮೊದಲು ಜಗತ್ತಿನ ಆರ್ಥಿಕ ಪ್ರಗತಿಯಲ್ಲಿ ಚೀನಾದ ಕೊಡುಗೆ ಶೇ.೩೪ರಿಂದ ೩೫ರಷ್ಟು ಇತ್ತು. ಇನ್ನು ಐರೋಪ್ಯ ಒಕ್ಕೂಟದ ಆರ್ಥಿಕ ಹಿಂಜರಿತಕ್ಕೆ ಆಕೆಯ ಪ್ರಕಾರ ಉಕ್ರೇನ್ ಯುದ್ಧ ಕಾರಣ. ೨೦೨೩ರಲ್ಲಿ ಐರೋಪ್ಯ ಒಕ್ಕೂಟದ ಅರ್ಧ ಭಾಗ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತದೆ. ಜಾರ್ಜಿವ ದೃಷ್ಟಿಯಲ್ಲಿ ಈ ಎರಡು ದೇಶಗಳಿಗೆ ಹೋಲಿಸಿದರೆ ಅಮೆರಿಕ ಪರವಾಗಿಲ್ಲ. ಅಲ್ಲಿಯ ಕಾರ್ಮಿಕರ ಆದಾಯ ಕಡಿಮೆಯಾಗಿಲ್ಲ. ಹಾಗಾಗಿ ಬೇಡಿಕೆಯಲ್ಲಿ ಅಂತಹ ಕುಸಿತವಾಗುವುದಿಲ್ಲ. ಈ ಪರಿಸ್ಥಿತಿ ಮುಂದುವರಿದರೆ ಅದು ಆರ್ಥಿಕ ಹಿಂಜರಿತದಿಂದ ತಪ್ಪಿಸಿಕೊಳ್ಳಬಹುದು. ಕೆಲವು ದೇಶಗಳು ಹಿಂಜರಿತದಿಂದ ತಪ್ಪಿಸಿಕೊಂಡರೂ ಅಲ್ಲಿಯ ಲಕ್ಷಾಂತರ ಜನ ಹಿಂಜರಿತದ ಸ್ಥಿತಿಯಲ್ಲಿರುತ್ತಾರೆ.

ಐಎಂಎಫ್ ಲೆಕ್ಕದಲ್ಲಿ ೨೦೨೧ರಲ್ಲಿ ಜಾಗತಿಕ ಜಿಡಿಪಿಯ ದರ ಶೇಕಡ ೬ರಷ್ಟು ಇತ್ತು. ೨೦೨೨ರಲ್ಲಿ ಅದು ೩ಕ್ಕೆ ಇಳಿಯಿತು. ೨೦೨೩ರಲ್ಲಿ ಅದು ಶೇಕಡ ೨.೭ಕ್ಕೆ ಇಳಿಯುವ ಸಾಧ್ಯತೆ ಇದೆ. ಜಾಗತಿಕ ಆರ್ಥಿಕತೆಯ ಕುಸಿತದ ಪರಿಣಾಮ ಹಿಂದುಳಿದ ರಾಷ್ಟ್ರಗಳ ಮೇಲೆ ತೀವ್ರವಾಗಿರುತ್ತದೆ. ಬಡ್ಡಿಯ ದರದ ಹೆಚ್ಚಳ ಹಾಗೂ ಡಾಲರ್ ಮೌಲ್ಯದ ಹೆಚ್ಚಳ ಎರಡೂ ಸೇರಿಕೊಂಡು ಅವುಗಳ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಹೆಚ್ಚು ಸಾಲ ಮಾಡಿಕೊಂಡಿರುವ ದೇಶಗಳ ಸ್ಥಿತಿಯಂತೂ ದಾರುಣವಾಗಿರುತ್ತದೆ. ಬಡ್ಡಿದರದ ಹೆಚ್ಚಳದಿಂದ ಮರುಪಾವತಿಯ ಪ್ರಮಾಣ ಏರುತ್ತದೆ. ಇಥಿಯೋಪಿಯ, ಘಾನ, ಲಿಬಿಯಾ, ಝಾಂಬಿಯ ಇತ್ಯಾದಿ ದೇಶಗಳು ಸಂಕಷ್ಟದಲ್ಲಿವೆ. ಸ್ಥಿತಿ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಗಂಭೀರವಾಗಬಹುದು. ಅದಕ್ಕೆ ಪರಿಹಾರವಾಗಿ ಐಎಂಎಫ್ ಆ ದೇಶಗಳಿಗೆ ಸಮತೋಲನದ ಬಜೆಟನ್ನು ರೂಪಿಸಲು ಅಂದರೆ ಖರ್ಚನ್ನು ಕಡಿಮೆಮಾಡಲು ಸಲಹೆ ನೀಡುತ್ತಿದೆ.

ಆರ್ಥಿಕ ಸಂಕಷ್ಟದ ಸಮಯದಲ್ಲಿ ಆಕೆಯ ಪ್ರಕಾರ ಒಂದು ಸಂತಸದ ಸುದ್ದಿಯೆಂದರೆ ಹಣದುಬ್ಬರದ ದರ ಶೇಕಡ ೬ಕ್ಕೆ ಇಳಿಯಬಹುದು. ಆದರೆ ಕೇಂದ್ರ ಬ್ಯಾಂಕುಗಳು ಜಿಡಿಪಿ ಕಡಿಮೆಯಾಗುತ್ತಿದೆ ಅನ್ನುವ ಆತಂಕದಿಂದ ತನ್ನ ನೀತಿಯನ್ನು ಸಡಿಲಗೊಳಿಸಿಬಿಟ್ಟರೆ ಹಣದುಬ್ಬರ ಹಳೆಯ ಮಟ್ಟದಲ್ಲೇ ಉಳಿಯಬಹುದು. ಹಣದುಬ್ಬರದಲ್ಲಿ ಗಣನೀಯವಾದ ಇಳಿಕೆಯಾದ ಮೇಲಷ್ಟೇ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೈಹಾಕಬೇಕು ಎಂದು ಜಾರ್ಜಿವ ಸೂಚಿಸುತ್ತಾರೆ. ಹಾಗಾಗಿ ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕುಗಳು ತೆಗೆದುಕೊಳ್ಳುತ್ತಿರುವ ಕ್ರಮ ಮುಂದುವರಿಯಬೇಕು ಎಂಬುದು ಅವರ ಸ್ಪಷ್ಟ ನಿಲುವು.

ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದಂತೆ ಮುಂಬರುವ ದಿನಗಳೇನು ಅಷ್ಟೊಂದು ಆಶಾದಾಯಕವಾಗಿಲ್ಲ ಅನ್ನುವುದನ್ನು ಈಗಾಗಲೇ ಹಲವರು ಹೇಳಿದ್ದಾರೆ. ಆದರೆ ಅಮೆರಿಕದ ಆರ್ಥಿಕತೆಯನ್ನು ಕುರಿತಂತೆ ಇವರ ಅಭಿಪ್ರಾಯ ಹಲವರಲ್ಲಿ ಸ್ವಾಭಾವಿಕವಾಗಿಯೇ ಆಶ್ಚರ್ಯ ಮೂಡಿಸಿದೆ. ಅಮೆರಿಕದಲ್ಲಿ ಕಾರ್ಮಿಕರ ವರಮಾನದಲ್ಲಿ ಇಳಿತವಾಗಿಲ್ಲ. ಈ ಪರಿಸ್ಥಿತಿ ಮುಂದುವರಿದರೆ ಅಮೆರಿಕ ಹಿಂಜರಿತದಿಂದ ತಪ್ಪಿಸಿಕೊಳ್ಳಬಹುದು. ಅಂದರೆ ಅವರು ಕಾರ್ಮಿಕರ ವರಮಾನ ಉತ್ತಮಗೊಂಡರೆ ಆರ್ಥಿಕತೆ ಸುಧಾರಿಸಬಹುದು ಎಂಬ ನಿಲುವನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದಾಗುತ್ತದೆ ಅಥವಾ ಅದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕಾರ್ಮಿಕರ ವರಮಾನಕ್ಕೆ ಬೇಡಿಕೆಯ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯ ಇದೆ ಎಂಬುದನ್ನು ಪರೋಕ್ಷವಾಗಿ ಮಾನ್ಯ ಮಾಡುತ್ತಿದ್ದಾರೆ. ಇದು ಆಶ್ಚರ್ಯದ ವಿಷಯ. ಏಕೆಂದರೆ ಐಎಂಎಫ್ ತನ್ನ ನೆರವನ್ನು ಕೇಳಿಕೊಂಡು ಬಂದ ಎಲ್ಲಾ ದೇಶಗಳಿಗೂ ಖರ್ಚನ್ನು ಕಡಿಮೆ ಮಾಡಲು, ಕೂಲಿಯನ್ನು ಕಡಿಮೆ ಮಾಡಲು ಸೂಚಿಸುತ್ತಿತ್ತು. ಈಗ ಅದಕ್ಕೆ ವ್ಯತಿರಿಕ್ತವಾದ ನಿಲುವನ್ನು ಅಮೆರಿಕದ ಸಂದರ್ಭದಲ್ಲಿ ಜಾರ್ಜಿವ ತೆಗೆದುಕೊಂಡಿದ್ದಾರೆ. ಹಾಗಾದರೆ ಇದನ್ನು ಬೇರೆ ದೇಶಗಳಿಗೂ ಏಕೆ ಸೂಚಿಸಬಾರದು? ಅಲ್ಲೂ ಕಾರ್ಮಿಕರ ವರಮಾನವನ್ನು ಹೆಚ್ಚಿಸುವ ಸಲಹೆಯನ್ನು ಯಾಕೆ ಕೊಡಬಾರದು. ಇನ್ನು ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವುದಕ್ಕೆ ಆಮದನ್ನು ಕಡಿಮೆ ಮಾಡಿಕೊಳ್ಳುವುದು, ಬೆಲೆಗಳನ್ನು ನಿಯಂತ್ರಿಸುವುದು ಇತ್ಯಾದಿ ನೇರವಾದ ಕ್ರಮಗಳನ್ನು ತೆಗೆದುಕೊಳ್ಳಬಹುದಲ್ಲವೇ ಎಂದು ಹಲವರು ಕೇಳುತ್ತಿದ್ದಾರೆ.

ಅವರ ವಿವರಣೆಯಲ್ಲೇ ಪರಿಸ್ಥಿತಿ ನಿರೀಕ್ಷೆಗಿಂತ ಹೆಚ್ಚು ಗಂಭೀರವಾಗಬಹುದಾದ ಸೂಚನೆಯೂ ಸಿಗುತ್ತದೆ. ಅವರ ದೃಷ್ಟಿಯಲ್ಲಿ ಜಗತ್ತು ಆರ್ಥಿಕ ಹಿಂಜರಿಕೆಗೆ ಮೂರು ಪ್ರಮುಖ ದೇಶಗಳ ಆರ್ಥಿಕ ಪ್ರಗತಿ ಕುಂಠಿತವಾಗಿರುವುದು ಕಾರಣ. ಇದನ್ನು ಒಪ್ಪಿಕೊಂಡರೆ ಅಮೆರಿಕದ ಸ್ಥಿತಿ ಸುಧಾರಿಸದೆ ಹೋದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಬಹುದು. ಯಾಕೆಂದರೆ ಅವರೇ ಹೇಳುವಂತೆ ಅಮೆರಿಕ ತನ್ನ ಹಣದುಬ್ಬರದ ನಿಯಂತ್ರಣ ಕ್ರಮವನ್ನು ಅಂದರೆ ಬಡ್ಡಿದರದ ಏರಿಕೆಯನ್ನು ಇನ್ನಷ್ಟು ಕಾಲ ಮುಂದುವರಿಸಬೇಕು. ಅದರಿಂದ ಅದರ ಆರ್ಥಿಕ ಬೆಳವಣಿಗೆ ಕುಂಠಿತವಾಗುವುದು ನಿಶ್ಚಿತ. ಹಾಗೆಯೇ ಚೀನಾದಲ್ಲಿ ಪರಿಸ್ಥಿತಿ ಸುಧಾರಿಸದೆ ಹೋದರೆ ಅದೂ ಜಗತ್ತಿನ ಆರ್ಥಿಕತೆಯನ್ನು ತೀವ್ರವಾಗಿ ಬಾಧಿಸುತ್ತದೆ. ಹಾಗೆಯೇ ಉಕ್ರೇನ್ ಯದ್ಧದೊಂದಿಗೆ ತೆಕ್ಕೆ ಹಾಕಿಕೊಂಡಿರುವ ಯುರೋಪಿನ ಪರಿಸ್ಥಿತಿ ಸುಧಾರಿಸುವ ಸೂಚನೆ ಕಾಣುತ್ತಿಲ್ಲ. ಇವೆಲ್ಲಾ ಸೇರಿಕೊಂಡು ೨೦೨೩ರಲ್ಲಿ ಸ್ಥಿತಿ ಹೆಚ್ಚು ಗಂಭೀರವಾಗಬಹುದೇ? ಅವರು ಭಾವಿಸಿರುವುದಕ್ಕಿಂತ ಹೆಚ್ಚಿನ ದೇಶಗಳು ಹಿಂಜರಿಕೆಯನ್ನು ಅನುಭವಿಸಬಹುದು. ಇದನ್ನು ಐಎಂಎಫ್‌ನ ಹಲವು ಸಂಶೋಧನೆಗಳೇ ತಿಳಿಸಿವೆ.

ಅವರು ತಮ್ಮ ವಿಶ್ಲೇಷಣೆಯಲ್ಲಿ ಇಂದಿನ ಆರ್ಥಿಕ ಬಿಕ್ಕಟ್ಟಿಗೆ ಉಕ್ರೇನ್ ಯುದ್ಧ ಹಾಗೂ ಕೊರೋನ ಮುಖ್ಯ ಕಾರಣ ಎನ್ನುತ್ತಿದ್ದಾರೆ. ಅವು ಪರಿಸ್ಥಿತಿಯನ್ನು ಗಂಭೀರಗೊಳಿಸಿರುವುದಂತೂ ನಿಜ. ಆದರೆ ಉಕ್ರೇನ್ ಯುದ್ಧಕ್ಕೆ ಮೊದಲೇ ಹಣದುಬ್ಬರ ಹೆಚ್ಚುವುದಕ್ಕೆ ಪ್ರಾರಂಭವಾಗಿತ್ತು. ಪೂರೈಕೆಯ ಸಮಸ್ಯೆಯಿಂದಲೇ ಬೆಲೆಗಳು ಏರತೊಡಗಿದವು ಅನ್ನುವುದು ಸಂಪೂರ್ಣ ನಿಜವಲ್ಲ. ಹಲವು ಅಂಶಗಳು ಹಣದುಬ್ಬರದ ಹೆಚ್ಚಳದ ಹಿಂದೆ ಇವೆ. ಅದನ್ನು ನಿರ್ಲಕ್ಷಿಸಿದರೆ ಸಮಸ್ಯೆಯ ಸ್ವರೂಪ ಅರ್ಥವಾಗುವುದು ಕಷ್ಟ. ಕೊರತೆಯ ನಿರೀಕ್ಷೆಯಲ್ಲಿ ದೊಡ್ಡ ಕಾರ್ಪೊರೇಟ್‌ಗಳ ಲಾಭವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದು ಕೂಡ ಹಣದುಬ್ಬರಕ್ಕೆ ಒಂದು ಮುಖ್ಯ ಕಾರಣ. ೨೦೨೧ರ ಮೊದಲಲ್ಲಿ ತೈಲದ ಬೆಲೆ ಬ್ಯಾರೆಲ್‌ಗೆ ೫೦.೩೭ ಡಾಲರ್ ಇತ್ತು. ಆ ವರ್ಷದ ಕೊನೆಗೆ ಅದು ೭೭.೨೪ರಷ್ಟಾಯಿತು. ಅಂದರೆ ಶೇ.೫೦ರಷ್ಟು ಹೆಚ್ಚಾಯಿತು. ಯುದ್ಧ ನಡೆದಾಗ ಅದು ಏರಿದ್ದು ಕೇವಲ ಶೇ. ೫.೮ರಷ್ಟು. ನಂತರ ರಶ್ಯದ ಮೇಲೆ ನಿರ್ಬಂಧಗಳನ್ನು ಹೇರಿದಾಗ ಅದು ಬ್ಯಾರೆಲ್‌ಗೆ ೧೩೩.೧೮ ಡಾಲರುಗಳಷ್ಟಾಯಿತು ಮತ್ತೆ ಇಳಿಯಿತು. ಹಾಗಾಗಿ ಬೆಲೆ ಏರಿಕೆಯಲ್ಲಿ ಆರ್ಥಿಕ ನಿರ್ಬಂಧಗಳದ್ದೂ ಪಾತ್ರವಿದೆ.

ಬೆಲೆ ಏರಿಕೆಯಲ್ಲಿ ಕಾರ್ಪೊರೇಟ್ ಲಾಭದ್ದು ಬಹುದೊಡ್ಡ ಪಾಲಿದೆ. ಆಕ್ಸ್‌ಫಾಮ್ ಸಂಸ್ಥೆಯ ಇತ್ತೀಚಿನ ವರದಿ ಹೇಳುವಂತೆ ಹಣದುಬ್ಬರದ ಹೆಚ್ಚಳದಲ್ಲಿ ಕಾರ್ಪೊರೇಟ್ ಲಾಭದ ಪಾತ್ರ ಶೇ.೫೦ರಿಂದ ೬೦ರವರೆಗೆ ಇದೆ. ಉಕ್ರೇನ್ ಯುದ್ಧ ಕಾರ್ಪೊರೇಟ್ ಜಗತ್ತಿಗೆ ಬೆಲೆ ಏರಿಸುವುದಕ್ಕೆ ಒಂದು ಕವಚವಷ್ಟೆ. ಐಎಂಎಫ್ ಹೇಳುವಂತೆ ಉಕ್ರೇನ್ ಯುದ್ಧವೇ ಆರ್ಥಿಕ ಹಿಂಜರಿಕೆಗೆ ಕಾರಣವಾದರೆ ಯುದ್ಧವನ್ನು ಅಂತ್ಯಗೊಳಿಸುವುದು ನಮ್ಮ ಆದ್ಯತೆಯ ವಿಷಯವಾಗಬೇಕು. ಆದರೆ ಸದ್ಯಕ್ಕಂತೂ ಆ ಬಗ್ಗೆ ಯಾವ ಚಿಂತನೆಯೂ ನಡೆದಿಲ್ಲ. ಚಿಂತನೆಯೆಲ್ಲಾ ರಶ್ಯವನ್ನು ಮಣಿಸುವುದು ಹೇಗೆ ಅನ್ನುವತ್ತ ಇದೆ. ಇದರಿಂದ ಸಮಸ್ಯೆ ಉಲ್ಬಣಗೊಳ್ಳಬಹುದೇ ಹೊರತು ಪರಿಹಾರವಾಗುವುದಿಲ್ಲ.

ಹಾಗೆಯೇ ಪೂರೈಕೆಯಲ್ಲಿನ ಸಮಸ್ಯೆ ಹಣದುಬ್ಬರಕ್ಕೆ ಕಾರಣ ಎನ್ನುವುದಾದರೆ ಬಡ್ಡಿದರದ ಏರಿಕೆಯಿಂದ ಯಾವುದೇ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಬದಲಿಗೆ ಅದರಿಂದ ಬೇಡಿಕೆ ತಗ್ಗಿ ಆರ್ಥಿಕ ಪ್ರಗತಿಗೆ ತೊಂದರೆಯಾಗುತ್ತದೆ. ಇಲ್ಲದೆ ಹೋದರೆ ಈ ಬಿಕ್ಕಟ್ಟಿನಲ್ಲಿ ಆರ್ಥಿಕ ಕುಸಿತ ಅನಿವಾರ್ಯವಾಗಬಹುದು. ಜೊತೆಗೆ ಒಂದು ದೇಶದಲ್ಲಿ ಬಡ್ಡಿದರ ಏರಿಕೆಯಾದರೆ ಉಳಿದ ದೇಶಗಳು ಅದನ್ನೇ ಅನುಸರಿಸಬೇಕು. ಇಲ್ಲದೆ ಹೋದರೆ ಇಲ್ಲಿಂದ ವಿದೇಶಿ ವಿನಿಮಯ ಬೇರೆಡೆಗೆ ಹರಿದುಕೊಂಡು ಹೋಗಬಹುದು. ಇದೇ ಗಾಬರಿಯಿಂದ ಅಮೆರಿಕ ಬಡ್ಡಿದರ ಏರಿಸಿದ ಕೂಡಲೇ ಭಾರತ ಕೂಡ ರೆಪೊ ದರ ಏರಿಸುತ್ತಿರುವುದು.

ಈಗ ಎಲ್ಲಾ ದೇಶಗಳು ಉಕ್ರೇನಿಗೆ ನೆರವು ನೀಡಲು ಯೋಚಿಸುತ್ತಿದೆ. ಐಎಂಎಫ್ ಕೂಡ ಈ ನಿಟ್ಟಿನಲ್ಲಿ ಯೋಚಿಸುತ್ತಿದೆ. ಆದರೆ ಯುದ್ಧಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲದ, ಎಲ್ಲೋ ದೂರದಲ್ಲಿರುವ ದೇಶಗಳೂ ಈ ಯುದ್ಧದಿಂದ ಸಂಕಷ್ಟಕ್ಕೆ ಒಳಗಾಗಿವೆ. ಅವುಗಳ ಸ್ಥಿತಿಯನ್ನು ಕುರಿತ ಚಿಂತೆ ನಡೆಯುತ್ತಲೇ ಇಲ್ಲ. ಆಹಾರದ ಬಿಕ್ಕಟ್ಟು ಅಂತಹ ದೇಶಗಳಲ್ಲಿ ತೀವ್ರವಾಗಿದೆ. ಅವುಗಳಲ್ಲಿ ಎಷ್ಟೋ ದೇಶಗಳು ಸಾಲದ ಹೊರೆಯಲ್ಲಿ ಈಗಾಗಲೇ ಕುಸಿಯುತ್ತಿವೆ. ಅವುಗಳ ಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಆ ದೇಶಗಳಿಗೆ ಐಎಂಎಫ್ ನೀಡುತ್ತಿರುವ ಮಿತವ್ಯಯದ ಹಾಗೂ ಸಮತೋಲನದ ಬಜೆಟ್‌ನ ಸಲಹೆಯಿಂದ ತೊಂದರೆಯೇ ಹೆಚ್ಚಬಹುದು. ಬೆಳವಣಿಗೆ ಮತ್ತಷ್ಟು ಕುಂಠಿತಗೊಳ್ಳಬಹುದು. ಹೆಚ್ಚಿನ ದೇಶಗಳಿಗೆ ಸಾಲದ ಮರುಪಾವತಿ ಸಾಧ್ಯವಾಗುತ್ತಿಲ್ಲ. ಶ್ರೀಲಂಕಾ ಇತ್ಯಾದಿ ಹಲವು ದೇಶಗಳು ಸಂಕಷ್ಟದಲ್ಲಿವೆ. ಬಡ್ಡಿಯ ದರದ ಹೆಚ್ಚಳ, ಜಾಗತಿಕ ಆರ್ಥಿಕ ಕುಸಿತ, ಡಾಲರ್ ಮೌಲ್ಯದ ಹೆಚ್ಚಳ ಇವುಗಳಿಂದ ಸಾಲದ ಹೊರೆ ಹೆಚ್ಚಿದೆ. ಹಲವು ಅರ್ಥಶಾಸ್ತ್ರಜ್ಞರು ಆ ದೇಶಗಳ ಸಾಲ ರದ್ದು ಮಾಡಬೇಕೆಂದು ಮನವಿ ಮಾಡಿದ್ದಾರೆ. ಸಂಬಂಧಪಟ್ಟವರೆಲ್ಲಾ ಒಟ್ಟಾಗಿ ಈ ದೇಶಗಳ ನೆರವಿಗೆ ಬರದೇ ಹೋದರೆ ಆ ದೇಶಗಳು ಬರ್ಬಾದಾಗುವ ಸಾಧ್ಯತೆ ಹೆಚ್ಚು. ಜೊತೆಗೆ ಅಸಮಾನತೆ, ಅಸ್ಥಿರತೆ ಹಾಗೂ ದೇಶದೊಳಗೆ ಹಾಗೂ ದೇಶಗಳ ನಡುವೆ ಸಂಘರ್ಷಗಳು ಹೆಚ್ಚುವ ಸಾಧ್ಯತೆ ಹೆಚ್ಚು. ಈ ಬಡದೇಶಗಳಿಗೆ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳಲು ಹೇಳುವುದು ಪರಿಹಾರವಲ್ಲ. ಅದು ಆ ದೇಶಗಳಿಗೆ ಸಾಧ್ಯವೂ ಇಲ್ಲ. ಅವರ ಈಗಿನ ಸಂಕಷ್ಟಕ್ಕೆ ಐತಿಹಾಸಿಕ ಕಾರಣಗಳಿವೆ. ಇಂದಿನ ಶ್ರೀಮಂತ ದೇಶಗಳೂ ಅದಕ್ಕೆ ಕಾರಣ. ಹಾಗಾಗಿ ಜಾಗತಿಕ ಮಟ್ಟದಲ್ಲಿ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು.

Similar News