ಶ್ರೀಲಂಕಾದಲ್ಲಿ ಆಹಾರದ ಕೊರತೆ, ದಾಖಲೆ ಮಟ್ಟಕ್ಕೇರಿದ ಹಣದುಬ್ಬರ

Update: 2022-01-01 18:06 GMT
ಸಾಂದರ್ಭಿಕ ಚಿತ್ರ

ಕೊಲಂಬೊ, ಜ.1: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಿದೇಶದಿಂದ ಆಮದು ಮಾಡಿಕೊಳ್ಳಲು ತಡೆಯಾಗಿರುವುದರಿಂದ ಅಗತ್ಯ ಆಹಾರ ವಸ್ತುಗಳ ತೀವ್ರ ಕೊರತೆ ಎದುರಾಗಿದೆ. ಡಿಸೆಂಬರ್ ನಲ್ಲಿ ಆಹಾರ ಧಾನ್ಯಗಳ ಬೆಲೆಯಲ್ಲಿ 22.1% ಹೆಚ್ಚಳವಾಗಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಶ್ರೀಲಂಕಾದ ಜನಗಣತಿ ಮತ್ತು ಅಂಕಿಅಂಶ ಇಲಾಖೆ ಹೇಳಿದೆ.

2013ರಲ್ಲಿ ಕೊಲಂಬೊ ಗ್ರಾಹಕ ಬೆಲೆ ಸೂಚ್ಯಂಕ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಆಹಾರ ಧಾನ್ಯಗಳ ಹಣದುಬ್ಬರ ಪ್ರಮಾಣ ಅತ್ಯಧಿಕ ಮಟ್ಟಕ್ಕೆ ತಲುಪಿದೆ. 2021ರ ನವೆಂಬರ್‌ನಲ್ಲಿ  ಆಹಾರ ಧಾನ್ಯಗಳ ಹಣದುಬ್ಬರ ಪ್ರಮಾಣ 17.5% ಇತ್ತು. ಡಿಸೆಂಬರ್ ನಲ್ಲಿ ಇದು 22.1%ಕ್ಕೆ ಏರಿಕೆಯಾಗಿದೆ. ಅಲ್ಲದೆ ಒಟ್ಟು ಹಣದುಬ್ಬರ ಪ್ರಮಾಣ(ಆಹಾರ ಧಾನ್ಯ ಹಾಗೂ ಇತರ ವಸ್ತುಗಳ)ವೂ ಡಿಸೆಂಬರ್ ನಲ್ಲಿ ದಾಖಲೆ ಮಟ್ಟವಾದ 12.01%ಕ್ಕೆ ತಲುಪಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ನವೆಂಬರ್ ನಲ್ಲಿ ತೈಲ ದರದಲ್ಲಿ 12.5% ಹೆಚ್ಚಳ ಮಾಡಿದ್ದ ಸರಕಾರ, ಡಿಸೆಂಬರ್ ನಲ್ಲಿ ಹಾಲಿನ ಪುಡಿಯ ಬೆಲೆಯಲ್ಲಿ 12.5% ಏರಿಕೆ ಮಾಡಿದೆ.

ಈ ಮಧ್ಯೆ, ಹೊಸ ವರ್ಷದ ಸಂದರ್ಭ ದೇಶವನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ  ರಾಜಪಕ್ಸೆ, ನಗದು ಕೊರತೆಯ ಆರ್ಥಿಕತೆಗೆ ಪುನರುಜ್ಜೀವನ ನೀಡುವ ವಿಶ್ವಾಸ ವ್ಯಕ್ತಪಡಿಸಿದರು. ಆದರೆ ದುರ್ಬಲಗೊಂಡ ವಿದೇಶಿ ವಿನಿಮಯ ವ್ಯವಸ್ಥೆಗೆ ಪುನಶ್ಚೇತನ ನೀಡುವ ಕ್ರಮಗಳ ಬಗ್ಗೆ ಪ್ರಸ್ತಾಪಿಸಲಿಲ್ಲ. ಹೊಸ ವರ್ಷವು ಸವಾಲುಗಳನ್ನು ಎದುರಿಸಲು ಮತ್ತು ಜಯಿಸಲು ಮತ್ತು ಜನಕೇಂದ್ರಿತ ಅರ್ಥವ್ಯವಸ್ಥೆಯನ್ನು ಬಲಪಡಿಸಲು ಸರಕಾರ ಕೈಗೊಂಡಿರುವ ಕ್ರಮಗಳನ್ನು ಮುಂದುವರಿಸುವ ಅವಕಾಶ ಒದಗಿಸುವ ವಿಶ್ವಾಸವಿದೆ ಎಂದವರು ಹೇಳಿದ್ದಾರೆ.

ಶ್ರೀಲಂಕಾದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಆರ್ಥಿಕ ಶ್ರೇಯಾಂಕ ಸಂಸ್ಥೆಗಳು ಶ್ರೀಲಂಕಾದ ಶ್ರೇಯಾಂಕವನ್ನು ಕೆಳಗಿಳಿಸಿದೆ. ಅಲ್ಲದೆ ಶ್ರೀಲಂಕಾ ಪಾವತಿಸಬೇಕಿರುವ 26.5 ಬಿಲಿಯನ್ ಸಾಲದ ಮರುಪಾವತಿಯ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿದ್ದ ಶ್ರೀಲಂಕಾದ ಅರ್ಥವ್ಯವಸ್ಥೆಗೆ ಕೊರೋನ ಸೋಂಕು ಮಾರಕ ಆಘಾತ ನೀಡಿದ್ದರಿಂದ ವಿದೇಶ ವಿನಿಮಯ ಸಂಗ್ರಹ ಹೆಚ್ಚಿಸಲು ಆಮದಿನ ಮೇಲೆ ನಿಷೇಧ ವಿಧಿಸುವ ಅನಿವಾರ್ಯತೆ ಸರಕಾರಕ್ಕೆ ಎದುರಾಗಿದೆ. ಆಮದಿಗೆ ನಿಷೇಧ ಇರುವುದರಿಂದ ಸೂಪರ್‌ಮಾರ್ಕೆಟ್‌ಗಳಲ್ಲಿ ಹಾಲಿನ ಪುಡಿ, ಸಕ್ಕರೆ, ಬೇಳೆಕಾಳುಗಳ ಸಹಿತ ದಿನಬಳಕೆಯ ವಸ್ತುಗಳ ಖರೀದಿಗೆ ಮಿತಿ ಹೇರಲಾಗಿದೆ.

ಶ್ರೀಲಂಕಾದ ವಿದೇಶಿ ವಿನಿಮಯ ಸಂಗ್ರಹ ನವೆಂಬರ್ ಅಂತ್ಯಕ್ಕೆ ಕೇವಲ 1.58 ಬಿಲಿಯನ್ ಡಾಲರ್‌ನಷ್ಟಿತ್ತು. 2019ರಲ್ಲಿ ರಾಜಪಕ್ಸ ಅಧಿಕಾರಕ್ಕೆ ಬಂದಾಗ ಇದ್ದ ಸಂಗ್ರಕ್ಕಿಂತ ಇದು 7.5 ಬಿಲಿಯನ್ ಡಾಲರ್ ಕಡಿಮೆಯಾಗಿದೆ. ಈ ವಾರ ಚೀನಾದಿಂದ 1.5 ಬಿಲಿಯನ್ ಡಾಲರ್ ಸಾಲ ಪಡೆದಿರುವ ಶ್ರೀಲಂಕಾ, ಇದರಿಂದ ವಿದೇಶಿ ವಿನಿಮಯ ಸಂಗ್ರಹ 3.1 ಬಿಲಿಯನ್ ಡಾಲರ್ಗೆ ಹೆಚ್ಚಿರುವುದಾಗಿ ಹೇಳಿದೆ.

ಸಲಹೆ ನೀಡಿದ ಅಧಿಕಾರಿಯ ವಜಾ

ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶದಲ್ಲಿ ಬರಗಾಲದ ಸ್ಥಿತಿ ಎದುರಾಗಬಹುದು. ಆದ್ದರಿಂದ ಈಗಲೇ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಳೆದ ತಿಂಗಳು ಕೃಷಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಸರಕಾರಕ್ಕೆ ಸಲಹೆ ನೀಡಿದ್ದರು. ಕೆಲವೇ ಕ್ಷಣಗಳಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಿ ಸರಕಾರ ಆದೇಶ ಜಾರಿಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೃಷಿ ರಾಸಾಯನಿಕಕ್ಕೆ ಸರಕಾರ ನಿಷೇಧ ವಿಧಿಸಿರುವುದನ್ನು ವಿರೋಧಿಸಿ ದೇಶದಾದ್ಯಂತ ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಳೆದ ನವೆಂಬರ್ನಲ್ಲಿ ನಿಷೇಧವನ್ನು ತೆರವುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News