ರಾಜ್ಯದ ಸರ್ಕಾರಿ ಶಾಲೆ, ಕಾಲೇಜು ಬಾಲಕಿಯರಿಗೆ ಆತ್ಮರಕ್ಷಣೆ ತರಬೇತಿ: ಸಮಗ್ರ ಶಿಕ್ಷಣ ಕರ್ನಾಟಕ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ನಾಲ್ಕು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ವಾರದಿಂದ ಸ್ವಯಂರಕ್ಷಣೆ ತಂತ್ರಗಳ ಬಗ್ಗೆ ವಿಶೇಷ ತರಬೇತಿ ಪಡೆಯಲಿದ್ದಾರೆ.
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಈ ವಿಶೇಷ ತರಬೇತಿಗಾಗಿ ಸರ್ಕಾರ ಎರಡು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಸಮಗ್ರ ಶಿಕ್ಷಣ ಕರ್ನಾಟಕ (ಎಸ್‌ಎಸ್‌ಕೆ) ಈ ಸಂಬಂಧ ಎಲ್ಲ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಸುತ್ತೋಲೆ ನೀಡಿ, ಈ ವಾರದಿಂದಲೇ ಸ್ವಯಂ ರಕ್ಷಣೆ ತರಗತಿಗಳನ್ನು ಆರಂಭಿಸುವಂತೆ ಸೂಚಿಸಿದೆ.
ಸ್ಥಳೀಯ ಮಟ್ಟದಲ್ಲಿ ತಮ್ಮ ಸಂಸ್ಥೆಗಳಲ್ಲಿ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸುವಂತೆ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳಿಗೆ ಸೂಚಿಸಲಾಗಿದೆ. ತರಬೇತುದಾರರಿಗೆ ಪ್ರತಿ ತರಗತಿಗೆ 200 ರೂಪಾಯಿ ಗೌರವಧನ ನೀಡಲಾಗುವುದು. 4245 ಸರ್ಕಾರಿ ಪ್ರೌಢಶಾಲೆಗಳು ಮತ್ತು 441 ಪದವಿಪೂರ್ವ ಕಾಲೇಜುಗಳ ಬಾಲಕಿಯರು ಇದರ ಪ್ರಯೋಜನ ಪಡೆಯಲಿದ್ದಾರೆ.
"ಹೆಣ್ಣುಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಸದೃಢರಾಗಲು ನೆರವು ನೀಡುವ ಸಲುವಾಗಿ ಆತ್ಮರಕ್ಷಣೆ ತರಬೇತಿಯನ್ನು ಅರಂಭಿಸಲಾಗುತ್ತಿದೆ" ಎಂದು ಎಸ್‌ಎಸ್‌ಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೆಣ್ಣುಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವುದು ಮತ್ತು ಉನ್ನತ ಶಿಕ್ಷಣ ಪಡೆಯಲು ಅವರಿಗೆ ಉತ್ತೇಜನ ನೀಡುವುದು ಕೂಡಾ ಇದರಲ್ಲಿ ಸೇರಿದೆ ಎಂದು ಅವರು ವಿವರಿಸಿದ್ದಾರೆ. ಶಾಲಾ ಕಾಲೇಜುಗಳು ಪ್ರತಿ ವಾರ 45 ನಿಮಿಷ ಅವಧಿಯ ಎರಡು ತರಗತಿಗಳನ್ನು ಆಯೋಜಿಸಬೇಕು ಹಾಗೂ ಮೂರು ತಿಂಗಳಲ್ಲಿ ಒಟ್ಟು 20 ತರಬೇತಿ ಕ್ಲಾಸ್‌ಗಳು ಪೂರ್ಣಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಹೆಣ್ಣುಮಕ್ಕಳಿಗೆ ತರಬೇತಿ ನೀಡುವ ವೇಳೆ ಬಾಲಕರಿಗೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವಂತೆ ಸಲಹೆ ಮಾಡಲಾಗಿದೆ. ರಾಣಿ ಲಕ್ಷ್ಮೀಬಾಯಿ ಸ್ವಯಂರಕ್ಷಣೆ ತರಬೇತಿ ಯೋಜನೆಯಡಿ ಈ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ನೀಡಿದ ಫೋಟೊಗಳನ್ನು ಶಗುಣ್ ಪೋರ್ಟೆಲ್‌ನಲ್ಲಿ ಶಾಲಾ ಕಾಲೇಜುಗಳು ಅಪ್‌ಲೋಡ್ ಮಾಡಬೇಕಾಗುತ್ತದೆ.