ಸರಕಾರ ದೇವಸ್ಥಾನಗಳ ಮೇಲಿನ ಹಿಡಿತ ತಪ್ಪಿಸುವುದೆಂದರೆ ಜನರಿಗೆ ಇರುವ ಅಧಿಕಾರವನ್ನು ತಪ್ಪಿಸುವುದೆಂರ್ಥ: ಸಿದ್ದರಾಮಯ್ಯ

Update: 2022-01-02 15:36 GMT

ಬೆಂಗಳೂರು, ಜ.2: ಸರ್ಕಾರವು ರಾಜ್ಯದ ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವುದಾಗಿ, ಸ್ವಾಯತ್ತಗೊಳಿಸುವುದಾಗಿ ಹೇಳುತ್ತಿದೆ. ದೇವಸ್ಥಾನಗಳು ಈಗಲೂ ಸ್ವತಂತ್ರವಾಗಿಯೆ ಇವೆ. ಸರ್ಕಾರ ಅನೇಕ ದೇವಸ್ಥಾನಗಳಿಗೆ ನೆರವು ನೀಡುವುದರ ಮೂಲಕ ಅವುಗಳನ್ನು ಪೊರೆಯುತ್ತಿದೆ. ಮುಜರಾಯಿ ಇಲಾಖೆಯ ವಾರ್ಷಿಕ ಬಜೆಟ್ ಸುಮಾರು 350 ಕೋಟಿಗಳಷ್ಟಿದೆ. ಸರ್ಕಾರವೇ ದೇವಸ್ಥಾನಗಳನ್ನು ನಡೆಸುವುದೆಂದರೆ ಸಮಾಜದ ಕಟ್ಟ ಕಡೆಯ ಮನುಷ್ಯರಿಗೂ ಅವುಗಳ ಮೇಲೆ ಹಕ್ಕುಗಳು ಇವೆಯೆಂದು ಅರ್ಥ. ಸರ್ಕಾರ ದೇವಸ್ಥಾನಗಳ ಮೇಲಿನ ಹಿಡಿತವನ್ನು ತಪ್ಪಿಸುವುದೆಂದರೆ ಜನ ಸಮುದಾಯಗಳಿಗೆ ಇರುವ ಅಧಿಕಾರವನ್ನು ತಪ್ಪಿಸುವುದೆಂದು ಅರ್ಥ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರವಿವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗ ಸರ್ಕಾರ ಮಾಡ ಹೊರಟಿರುವುದೇನೆಂದರೆ ನಾಡಿನ ಐದೂವರೆ ಕೋಟಿ ಕನ್ನಡಿಗ ಹಿಂದೂಗಳ ಅಧಿಕಾರವನ್ನು ತಪ್ಪಿಸಿ ಕೇವಲ ಶೇ.ಎರಡರಷ್ಟು ಜನರ ಕೈಗೆ ಕೊಡಲು ಮುಂದಾಗಿರುವುದು. ಸರ್ಕಾರದ ಈ ನಿರ್ಧಾರದಿಂದ ಶೇ. 80 ರಷ್ಟು ಜನ ಮತ್ತೆ ಊಳಿಗಮಾನ್ಯ ಸಮಾಜದ ಕ್ರೌರ್ಯವನ್ನು ಅನುಭವಿಸಬೇಕೆಂದು ಸರ್ಕಾರ ತೀರ್ಮಾನಿಸಿದಂತೆ ಕಾಣುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬಸವಣ್ಣನವರ ನೇತೃತ್ವದ ಶರಣ ಚಳವಳಿಯನ್ನು ದಮನ ಮಾಡಿದ ಪುರೋಹಿತಶಾಹಿ ಶಕ್ತಿಗಳೆ ಇಂದು ತಮ್ಮ ಬಿಜೆಪಿ ಪಕ್ಷದಲ್ಲಿರುವ ಶೂದ್ರ ರಾಜಕಾರಣಿಗಳನ್ನು ಬಳಸಿಕೊಂಡು ದೇವಸ್ಥಾನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಐದೂವರೆ ಕೋಟಿ ಕನ್ನಡಿಗ ಹಿಂದೂಗಳನ್ನು ಧಾರ್ಮಿಕ ಗುಲಾಮಗಿರಿಯ ಕಡೆಗೆ ತಳ್ಳಲು ಪ್ರಯತ್ನಿಸುತ್ತಿವೆ. ಈ ಪುರೋಹಿತಶಾಹಿ ವರ್ಗ ಸ್ವಾಯತ್ತತೆಯ ಹೆಸರಲ್ಲಿ ಎಲ್ಲ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಲಕ್ಷಾಂತರ, ಕೋಟ್ಯಂತರ ಆದಾಯವಿರುವ  ದೇವಸ್ಥಾನಗಳನ್ನು ತಾವು ತೆಗೆದುಕೊಂಡು ಆದಾಯವಿಲ್ಲದ ಕೆಲವು ದೇವಸ್ಥಾನಗಳನ್ನು ಉಳಿದವರಿಗೆ ಬಿಟ್ಟುಕೊಡಬಹುದು.

ಆದರೆ ಸರ್ಕಾರದ ಹಿಡಿತ ತಪ್ಪಿದ ಕೂಡಲೇ ಮನುವಾದಿ ನಿಯಮಗಳನ್ನು ಸಮಾಜದ ಮೇಲೆ ಹೇರಿಕೆ ಮಾಡಲು ಪ್ರಾರಂಭಿಸುತ್ತಾರೆ. ಈ ವಿಚಾರಗಳನ್ನು ಹೇಳಿದ ಕೂಡಲೆ ಸಂಘ ಪರಿವಾರದವರು  ಇನ್ನಿಲ್ಲದಂತೆ ತೊಳಲಾಡುತ್ತಾರೆ.

ತಾವು ಮಾತನಾಡಲಾರದೆ ತಮ್ಮ ಪಕ್ಷದಲ್ಲಿರುವ ಶೂದ್ರಾದಿ ದಲಿತ ನಾಯಕರನ್ನು ಛೂ ಬಿಟ್ಟು ಬಾಯಿಗೆ ಬಂದಂತೆ ಮಾತನಾಡಲು ಸೂಚಿಸುತ್ತಾರೆ.  ಈ ಧಾರ್ಮಿಕ ಅನ್ಯಾಯಗಳ ವಿರುದ್ಧ, ಶೋಷಣೆಯ ನೀತಿಗಳ ವಿರುದ್ಧ ಮಾತನಾಡಿದರೆ, ಸಾಮಾಜಿಕ ನ್ಯಾಯ, ಸಂವಿಧಾನದ ಆಶಯಗಳ ಬಗ್ಗೆ ಪ್ರಸ್ತಾಪಿಸಿದ ಕೂಡಲೆ ಹಾಗೆ ಪ್ರಸ್ತಾಪಿಸಿದವರನ್ನು ಹಿಂದೂ ವಿರೋಧ, ಪಾಕಿಸ್ತಾನ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ವಿಷಯಗಳನ್ನು ಮಾತನಾಡಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ.

ಇದು ಮನುವಾದಿಗಳ ಪುರಾತನ ಅಜೆಂಡ.  ಹಾಗಾಗಿ ಜನರು ಇವರ ದುಷ್ಟ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಧರ್ಮ, ದೇವರು, ದೇವಸ್ಥಾನ, ಮಸೀದಿ, ಚರ್ಚುಗಳ ವಿಷಯದಲ್ಲಿ ರಾಜಕೀಯ ಮಾಡಿಕೊಂಡು ದೇಶವನ್ನು ಅದಾನಿ, ಅಂಬಾನಿ ಮುಂತಾದ ಬಂಡವಾಳಿಗರಿಗೆ ಒತ್ತೆ ಇಡುತ್ತಿರುವ ಬಿಜೆಪಿಯು ಆರಂಭದಿಂದಲೂ ಸುಳ್ಳುಗಳ ಫ್ಯಾಕ್ಟರಿ ಇಟ್ಟುಕೊಂಡು ಸುಳ್ಳುಗಳನ್ನೆ ಉತ್ಪಾದಿಸಿ ಜನರಿಗೆ ಮಾರಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಅಂಥ ಹಲವು ಸುಳ್ಳುಗಳಲ್ಲಿ, ದೇವಸ್ಥಾನಗಳ ಹಣವನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ ಎಂಬುದೂ ಒಂದು. ಆದರೆ ವಾಸ್ತವವಾಗಿ  ದೇವಸ್ಥಾನಗಳ ಒಂದೇ ಒಂದು ರೂಪಾಯಿ ಹಣವನ್ನೂ ಮಸೀದಿಗಾಗಲಿ, ಚರ್ಚುಗಳಿಗಾಗಲಿ ಬಳಸಿಲ್ಲವೆಂದು ಇಲಾಖೆ ಉತ್ತರ ನೀಡಿದೆ. ಇಲಾಖೆಯ ಉತ್ತರ ಈ ರೀತಿ ಇದೆ, “ಕರ್ನಾಟಕ ಹಿಂದೂ  ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ-1997 ಮತ್ತು ನಿಯಮಗಳು-2002ರಡಿ ಸದರಿ ಅನುದಾನಗಳನ್ನು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಯಾವುದೇ  ದೇವಾಲಯದ ಆದಾಯದಿಂದ / ನಿಧಿಯಿಂದ ಬಿಡುಗಡೆ/ ಮಂಜೂರು ಮಾಡುತ್ತಿರುವುದಿಲ್ಲ” ಎಂದು ಹೇಳಲಾಗಿದೆ. ಆದರೂ ಬಿಜೆಪಿಯ ಕೆಲವು  ಸುಳ್ಳಿನ ಉತ್ಪಾದಕರು ಅಪಪ್ರಚಾರ ಮಾಡುತ್ತಲೆ ಇದ್ದಾರೆ. ದೇವರ ಹೆಸರಿನಲ್ಲಿ ಸುಳ್ಳು ಹೇಳುವ, ಅಪಚಾರ ಎಸಗುವ ಈ ಜನ ಎಷ್ಟು ಕೆಟ್ಟವರು, ಅಮಾನವೀಯ ವ್ಯಕ್ತಿಗಳು ಎಂಬುದಕ್ಕೆ ಇದು ಸಾಕ್ಷಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News