ಕೋವಿಡ್ ಏರಿಕೆ: ಸುಪ್ರೀಂಕೋರ್ಟ್ ಭೌತಿಕ ವಿಚಾರಣೆ ರದ್ದು

Update: 2022-01-03 03:19 GMT

ಹೊಸದಿಲ್ಲಿ: ದೇಶದಲ್ಲಿ ಒಮೈಕ್ರಾನ್ ಪ್ರಭೇದ ಸೇರಿದಂತೆ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎರಡು ವಾರಗಳ ಅವಧಿಗೆ ಪ್ರಕರಣಗಳ ಭೌತಿಕ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಬಿಟ್ಟಿದೆ. ಚಳಿಗಾಲದ ರಜೆಯ ಬಳಿಕ ಸೋಮವಾರ ಸುಪ್ರೀಂಕೋರ್ಟ್ ಪುನರಾರಂಭವಾಗಬೇಕಿತ್ತು. ಆದರೆ ಭಾನುವಾರ ಈ ಸಂಬಂಧ ಆದೇಶ ಹೊರಡಿಸಿ, ಎರಡು ವಾರಗಳ ಅವಧಿಗೆ ಭೌತಿಕ ವಿಚಾರಣೆ ರದ್ದುಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

"ಕೋವಿಡ್-19 ಮತ್ತು ಒಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಬ್ರೀಡ್ ವಿಚಾರಣೆ ಸೇರಿದಂತೆ ಭೌತಿಕ ವಿಚಾರಣೆಯನ್ನು ಜನವರಿ 3ರಿಂದ ಅನ್ವಯವಾಗುವಂತೆ ಎರಡು ವಾರಗಳ ಕಾಲ ರದ್ದುಪಡಿಸಿ, ವರ್ಚುವಲ್ ವಿಧಾನದಲ್ಲಿ ಮಾತ್ರ ನಡೆಸಲು ನಿರ್ಧರಿಸಲಾಗಿದೆ" ಎಂದು ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ಸುತ್ತೋಲೆಯಲ್ಲಿ ಹೇಳಿದೆ.

ದೇಶದ 23 ರಾಜ್ಯಗಳಲ್ಲಿ ಒಮೈಕ್ರಾನ್ ಸೋಂಕು ಹರಡಿದ್ದು, ದೆಹಲಿಯಲ್ಲಿ ಒಂದೇ ದಿನ 3000 ಪ್ರಕರಣಗಳು ವರದಿಯಾಗಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶಾದ್ಯಂತ ಭಾನುವಾರ 18 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, 284 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರ್ವಹಿಸುವ ಡ್ಯಾಷ್‌ಬೋರ್ಡ್ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಕಳೆದ ಅಕ್ಟೋಬರ್ 7ರಂದು ಸುಪ್ರೀಂಕೋರ್ಟ್ ಭೌತಿಕ ವಇಚಾರಣೆಯನ್ನು ಆರಂಭಿಸಿತ್ತು. ಡಿಸೆಂಬರ್ 18ರಂದು ಚಳಿಗಾಲದ ರಜೆ ಆರಂಭವಾಗುವವರೆಗೂ ಭೌತಿಕ ವಿಚಾರಣೆ ನಡೆಯುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News