×
Ad

ಯುಪಿಯ ಕೋತಿ ಆಡಿಸುವವನ ಕಾನೂನು ಇಲ್ಲಿಗೇಕೆ?: ಸಿ.ಎಸ್.ದ್ವಾರಕಾನಾಥ್

Update: 2022-01-03 19:54 IST

ಬೆಂಗಳೂರು, ಜ.3: ಉತ್ತರಪ್ರದೇಶದಲ್ಲಿ ಕೋತಿ ಆಡಿಸುವವನು ಜಾರಿಗೆ ತಂದ ಮತಾಂತರ ಮಸೂದೆಯನ್ನು ಇಲ್ಲಿ ಜಾರಿಗೊಳಿಸುವ ಅವಶ್ಯಕತೆ ಏನು ಎಂದು ಚಿಂತಕ ಡಾ.ಸಿ.ಎಸ್.ದ್ವಾರಕಾನಾಥ್ ಪ್ರಶ್ನೆ ಮಾಡಿದರು.

ದೇಶ ಹಾಗೂ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಸೋಮವಾರ ನಗರದ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಆವರಣದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಉತ್ತರಪ್ರದೇಶದಲ್ಲಿ ಚುನಾವಣೆ ಇರುವ ಕಾರಣಕ್ಕಾಗಿ ದೇಶಾದ್ಯಂತ ಮತೀಯ ವಾದವನ್ನು ಹೆಚ್ಚು ಬಿಂಬಿಸಲಾಗುತ್ತಿದೆ. ಮತ್ತೊಂದೆಡೆ ಉತ್ತರಪ್ರದೇಶದಲ್ಲಿನ ಮತಾಂತರ ಕಾಯ್ದೆಯನ್ನೆ ಮಕ್ಕಿಕಾಮಕ್ಕಿ ಕರ್ನಾಟಕದಲ್ಲೂ ರೂಪಿಸಲಾಗಿದೆ. ನಾನು ಎರಡೂ ಮಸೂದೆಗಳ ಪ್ರತಿ ಓದಿದ್ದೇನೆ. ಇದು ನಾಗಪುರದ ಆರೆಸ್ಸೆಸ್ ಕಚೇರಿಯಿಂದಲೇ ತಯಾರಿಸಿದಂತಿದೆ ಎಂದು ಟೀಕಿಸಿದರು. 

ಮತಾಂತರ ಕಾಯ್ದೆ ದಲಿತ ಸಮುದಾಯಗಳ ಮೇಲೆ ಪರಿಣಾಮ ಬೀರಲಿದೆ. ದಲಿತರ ಸ್ವಾತಂತ್ರ್ಯವನ್ನು ಕಿತ್ತುಕೊಳ್ತಿದ್ದಾರೆ ಎಂದ ಅವರು, ನಮ್ಮದು ಬುದ್ದ, ಬಸವಣ್ಣನವರು ಹಾಕಿಕೊಟ್ಟ ಪರಂಪರೆ. ಮತಾಂತರ ನಿಷೇಧ ಕಾಯ್ದೆಯಿಂದ ಲಿಂಗಾಯತ, ದಲಿತ ಸಮುದಾಯಗಳ ಮೇಲೆ ಪರಿಣಾಮ ಬೀರಲಿದೆ. ದಲಿತರ ಸ್ವಾತಂತ್ರವನ್ನು ಕಸಿದುಕೊಳ್ಳಲಾಗುತ್ತಿದೆ. ಬಸವ ಧರ್ಮದಿಂದ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಸೂದೆಗೆ ಹೇಗೆ ಸಹಿ ಮಾಡಿದರು ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ, ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗುತ್ತಿದೆ. ಇತ್ತೀಚಿಗೆ ಪಾಂಡವಪುರದ ನಿರ್ಮಲಾ ಶಾಲೆ ಮೇಲೆ ದಾಳಿ ನಡೆಸಿ ಅಲ್ಲಿನ ಶಿಕ್ಷಕರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅದೇರೀತಿ, ಗೋಕಾಕ್ ಚರ್ಚ್ ಮೇಲೆ ದಾಳಿ ಆಗಿದ್ದು, ಸರಣಿ ಪ್ರಕರಣಗಳು ಬೆಳಕಿಗೆ ಬಂದಿವೆ. ಇದಕ್ಕೆ ರಾಜ್ಯ ಸರಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯ ಮಾಡಿದರು.

ಹಿರಿಯ ಸಿನೆಮಾ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಈ ದೇಶದಲ್ಲಿ ದಿನೆ ದಿನೆ ಅರಾಜಕತೆ ಹೆಚ್ಚಾಗುತ್ತಿದೆ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಮತಾಂತರ ಎನ್ನುವುದು ಎರಡು ಸಾವಿರ ವರ್ಷಗಳಿಂದ ಇದೆ. ನಾಥ ಪಂಥದ ಒಕ್ಕಲಿಗರು ಮತಾಂತರವಾದವರೇ. ಶ್ರೇಷ್ಠ, ಕನಿಷ್ಠ ಕಲ್ಪನೆಯಲ್ಲಿ ಮತಾಂತರವಾದವರು 

-  ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ

ಈ ಸಂದರ್ಭದಲ್ಲಿ ಶಾಸಕ ಎನ್.ಎ.ಹಾರೀಸ್, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಸಾಹಿತಿಗಳಾದ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ವಸುಂಧರಾ ಭೂಪತಿ, ಪ್ರೊ.ಕೆ.ಇ.ರಾಧಾಕೃಷ್ಣ, ಮುಖಂಡರಾದ ಮುಹಮ್ಮದ್ ಉಬೇದುಲ್ಲಾ ಶರೀಫ್, ಮುದಬ್ಬೀರ್ ಅಹ್ಮದ್‍ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News