ಕುಟಿಲ ಹುನ್ನಾರಗಳಿಂದ ಶ್ರೇಣೀಕೃತ ವ್ಯವಸ್ಥೆ ಜಾರಿ: ಸಿದ್ದರಾಮಯ್ಯ

Update: 2022-01-04 12:04 GMT
ಫೈಲ್ ಚಿತ್ರ (ಸಿದ್ದರಾಮಯ್ಯ) 

ಬೆಂಗಳೂರು, ಜ.4: ಕುಟಿಲ ಹುನ್ನಾರಗಳಿಂದಲೇ ಈ ದೇಶದಲ್ಲಿ ಶ್ರೇಣೀಕೃತ ವ್ಯವಸ್ಥೆ ಜಾರಿಗೆ ಬಂದಿದ್ದು, ಈ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕೆಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜ ಆಯೋಜಿಸಿದ್ದ ಎಂ.ಎಸ್.ಮುತ್ತುರಾಜ್ ಅವರ ‘ನಾನು ಸ್ವಾಭಿಮಾನಿ ಕ್ಷೌರಿಕ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗಜ್ಯೋತಿ ಬಸವಣ್ಣನವರು 12ನೆ ಶತಮಾನದಲ್ಲಿಯೇ ಶ್ರೇಣೀಕೃತ ವ್ಯವಸ್ಥೆಯನ್ನು ವಿರೋಧಿಸಿದ್ದರು. ಜತೆಗೆ ಇಂತಹ ಕುಟಿಲ ಹುನ್ನಾರವನ್ನು ತಡೆಗಟ್ಟಲು ಅನುಭವ ಮಂಟಪವನ್ನು ನಿರ್ಮಾಣ ಮಾಡಿದ್ದರು ಎಂದು ಹೇಳಿದರು.

ಪ್ರತಿಯೊಂದು ವೃತ್ತಿಗೂ ತನ್ನದೆಯಾದ ಗೌರವವಿದೆ. ಬಸವಣ್ಣನವರು ವೃತ್ತಿಗೆ ಕಾಯಕ ಎಂದರು, ಕಾಯಕವೇ ಕೈಲಾಸ ಎಂದು ಕರೆದರು. ಇಂದಿಗೂ ಎಸ್ಸಿ ಜನಾಂಗದಲ್ಲಿ ತಂದೆ ಮಗನ ಕ್ಷೌರವನ್ನು ಮಾಡುತ್ತಾನೆ. ಅವರೂ ಮೇಲ್ಜಾತಿಯವರಂತೆ ಕ್ಷೌರದ ಅಂಗಡಿಗೆ ಬಂದು ಕ್ಷೌರ ಮಾಡಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು. 

ಲೇಖಕ, ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಹಳ್ಳಿಗಳ ಹೊಟೇಲ್‍ಗಳಲ್ಲಿ ದಲಿತರಿಗೆ ಪ್ರತ್ಯೇಕ ತಟ್ಟೆ, ಲೋಟ ಇಟ್ಟಿರುತ್ತಾರೆ, ನಗರ ಪ್ರದೇಶದಲ್ಲಿ ಮನೆ ಬಾಡಿಗೆ ನೀಡುವಾಗ ಜಾತಿಯನ್ನು ಕೇಳುತ್ತಾರೆ. ಈ ಅನಿಷ್ಟ ಪದ್ಧತಿ ಹೋಗಬೇಕಾದರೆ ನಾನು ಸ್ವಾಭಿಮಾನಿ ಕ್ಷೌರಿಕ ಎನ್ನುವಂತಹ ಕಾದಂಬರಿಗಳು ಹೆಚ್ಚೆಚ್ಚು ಬರಬೇಕೆಂದು ಹೇಳಿದರು. 

ಈ ಪ್ರಪಂಚ ಬರೀ ಇಂಜಿನಿಯರ್, ವೈದ್ಯರು, ವಕೀಲರು, ಉಪನ್ಯಾಸಕರಿಂದ ನಡೆಯುವುದಿಲ್ಲ. ಎಲ್ಲ ವೃತ್ತಿಯವರೂ ಇರುವುದರಿಂದಲೇ ಈ ಸಮಾಜ ಮುಂದಕ್ಕೆ ಸಾಗುತ್ತಿದೆ. ಅಭಿವೃದ್ಧಿ ಹೊಂದಿದಂತಹ ದೇಶಗಳಲ್ಲಿ ಅವರ ವೃತ್ತಿಗಳನ್ನು ಗೌರವದಿಂದ ಹೇಳಿಕೊಳ್ಳುತ್ತಾರೆ. ಸಾಕಷ್ಟು ಹಣವನ್ನೂ ಸಂಪಾದಿಸುತ್ತಾರೆ ಎಂದು ಹೇಳಿದರು. 

ನಟನೆ, ಸಂಘಟನೆ ಮತ್ತು ರಾಜಕಾರಣದ ನಡುವೆಯೂ ಮುತ್ತುರಾಜ್ ತಮ್ಮ ವೃತ್ತಿಯನ್ನು ಮರೆಯದೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಂದು ಬಿಡುಗಡೆಯಾದ ಕಾದಂಬರಿಗೆ ಮೊದಲು ವಿಶ್ವಮಾನವ ಎಂಬ ಹೆಸರನ್ನು ಇಡಲಾಗಿತ್ತು. ನಾನೇ `ನಾನು ಸ್ವಾಭಿಮಾನಿ ಕ್ಷೌರಿಕ’ ಎಂದು ಬದಲಿಸಲು ಹೇಳಿದ್ದರಿಂದ ಬದಲಿಸಿದ್ದಾರೆ ಎಂದು ಹೇಳಿದರು. 

2023ಕ್ಕೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿದ್ದಾರೆ: ಎಂ.ಎಸ್.ಮುತ್ತುರಾಜ್

ನಟ, ಸವಿತಾ ಸಮಾಜದ ಮುಖಂಡ ಎಂ.ಎಸ್.ಮುತ್ತುರಾಜ್ ಅವರು ಮಾತನಾಡಿ, ಅನ್ನಭಾಗ್ಯದಿಂದ ಕೋಟ್ಯಂತರ ಜನರು ಬದುಕುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು 2023ಕ್ಕೆ ಮತ್ತೆ ಸಿಎಂ ಆಗುವ ಮೂಲಕ ರಾಜ್ಯದಲ್ಲಿ ಸುವರ್ಣಯುಗ ಪ್ರಾರಂಭವಾಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಸಿಎಂ ಆದರೇ ನಮ್ಮಂತಹ ಹಿಂದುಳಿದ ವರ್ಗಗಳಿಗೆ ಅನುಕೂಲವಾಗುತ್ತದೆ. ಅಲ್ಲದೆ, ಸಿದ್ದರಾಮಯ್ಯ ಅವರು ನನಗೆ ರಾಜಕೀಯ ಗುರುಗಳಾದರೆ, ನಾಗತಿಹಳ್ಳಿ ಚಂದ್ರಶೇಖರ್ ಅವರು ನನಗೆ ಸಾಹಿತ್ಯದ ಗುರುಗಳಾಗಿದ್ದಾರೆ ಎಂದು ಹೇಳಿದರು.   

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಎನ್.ಸಂಪತ್‍ರಾಜ್, ಪತ್ರಕರ್ತ ರವೀಂದ್ರ ಭಟ್ ಉಪಸ್ಥಿತರಿದ್ದರು.              
 
ನಮಗಲ್ಲ, ಮೊದಲು ಅವರಿಗೆ ಹೇಳಲಿ

ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆಸುವ ಪಾದಯಾತ್ರೆಗೆ ಸುರಕ್ಷಿತ ಅಂತರ, ಮಾಸ್ಕ್ ಕಡ್ಡಾಯ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಪಾದಯಾತ್ರೆ ಮುಂದೂಡುವುದು ಸೂಕ್ತ ಎಂದು ಸಚಿವ ಡಾ.ಸುಧಾಕರ್ ನಮಗೆ ಹೇಳುವ ಅವಶ್ಯಕತೆ ಇಲ್ಲ. ಕೊರೋನ ಹೆಚ್ಚಾಗಲು ಈ ಸರಕಾರವೇ ಕಾರಣವಾಗಿದೆ. ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಇನ್ನೂ ಸಭೆಗಳನ್ನು ಮಾಡಿಕೊಂಡು ಓಡಾಡುತ್ತಿದ್ದಾರೆ, ಅವರಿಗೆ ಮೊದಲು ಹೇಳಲಿ.

-ಸಿದ್ದರಾಮಯ್ಯ, ವಿಧಾನಸಭೆ ವಿರೋಧಪಕ್ಷದ ನಾಯಕ   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News