ಅತಿಥಿ ಉಪನ್ಯಾಸಕರ ಹೋರಾಟಕ್ಕೆ ವಿದ್ಯಾರ್ಥಿಗಳ ಬೆಂಬಲ: ಬೇಡಿಕೆಗಳನ್ನು ಈಡೇರಿಸುವಂತೆ ಎಐಡಿಎಸ್‍ಓ ಆಗ್ರಹ

Update: 2022-01-04 13:02 GMT

ಬೆಂಗಳೂರು, ಜ.4: ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿಲ್ಲ. ಆದುದರಿಂದ ಸರಕಾರವು ಶೀಘ್ರವೇ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಲ್ ಇಂಡಿಯಾ ಡೆಮೋಕ್ರಾಟಿಕ್ ಸ್ಟೂಡೆಂಟ್ ಆರ್ಗನೈಜೆಷನ್ (ಎಐಡಿಎಸ್‍ಓ)ನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಆಗ್ರಹಿಸಿದ್ದಾರೆ. 

ಮಂಗಳವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಅತಿಥಿ ಉಪನ್ಯಾಸಕರ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಕೋವಿಡ್ ಲಾಕ್‍ಡೌನ್‍ನಲ್ಲಿಯೂ ಆನ್‍ಲೈನ್ ತರಗತಿಗಳನ್ನು ಮಾಡಿದ್ದಾರೆ. ಆದರೆ ಸರಕಾರವು ಅವರ ಸೇವೆಯನ್ನು ಪರಿಗಣಿಸದೆ, ಸರಿಯಾಗಿ ಸಂಬಳ ನೀಡಲಿಲ್ಲ. ಹಾಗಾಗಿ ಅಂದಿನಿಂದ ಅತಿಥಿ ಉಪನ್ಯಾಸಕರ ಪ್ರತಿಭಟನೆಗಳು ರಾಜ್ಯದಲ್ಲಿ ಪ್ರಾರಂಭವಾಗಿ ಇಂದು ವಿಕೋಪಕ್ಕೆ ತಿರುಗಿವೆ. ಆದರೆ ಸರಕಾರವು ಇದುವರೆಗೂ ಯಾವುದೇ ಕ್ರಮ ವಹಿಸಲು ಮುಂದಾಗುತ್ತಿಲ್ಲ. ಇದರಿಂದ ಕಾಲೇಜುಗಳ ತರಗತಿಗಳು ನಡೆಯದೆ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ ಎಂದರು. 

ದೇಶದಲ್ಲಿ ಜಾಗತೀಕರಣ ಮತ್ತು ಖಾಸಗೀಕರಣ ವ್ಯಾಪಕವಾಗಿ ಹರಡಿದೆ. ಹಾಗಾಗಿ ಗುತ್ತಿಗೆ ಕಾರ್ಮಿಕ ಪದ್ಧತಿ ಜಾರಿಗೆ ಬಂದಿತು. ಈ ಹಿನ್ನಲೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಕಾಯಂ ಹುದ್ದೆಗಳನ್ನು ನೀಡಿದರೆ, ಸರಕಾರಕ್ಕೆ ಹೊರೆಯಾಗಲಿದೆ ಎಂದು ಅತಿಥಿ ಉಪನ್ಯಾಸಕ ಎಂಬ ಪದ್ಧತಿ ಜಾರಿಗೆ ಬಂದಿತು. ಅನೇಕ ವರ್ಷಗಳ ನ್ಯಾಯಾಂಗ ಹೋರಾಟದ ಫಲವಾಗಿ ಕೆಲ ಅತಿಥಿ ಉಪನ್ಯಾಸಕರನ್ನು ಕೆಲವು ರಾಜ್ಯಗಳಲ್ಲಿ ಕಾಯಂಗೊಳಿಸುವ ತೀರ್ಮಾನಕ್ಕೆ ಬಂದಿತು. ಆದರೆ ನಮ್ಮ ರಾಜ್ಯದಲ್ಲಿ ಸರಕಾರವು ಅಂತಹ ಯಾವುದೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.      

ಪ್ರತಿಭಟನೆಯಲ್ಲಿ ಎಐಡಿಎಸ್‍ಓನ ಬೆಂಗಳೂರು ಜಿಲ್ಲಾ ಅಧ್ಯಕ್ಷ ಅಭಯಾ ದಿವಾಕರ್, ಜಿಲ್ಲಾ ಉಪಾಧ್ಯಕ್ಷ ಅಪೂರ್ವ, ಕಲ್ಯಾಣ್, ವಿನಯ್ ಚಂದ್ರ, ಕಿರಣ್, ಶಾಜಿಯ ಹಾಗೂ ಇತರ ಕಾರ್ಯಕರ್ತರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News