ಬೆಂಗಳೂರು: ಕಾರುಗಳನ್ನು ಬಾಡಿಗೆಗೆ ಪಡೆದು ವಂಚನೆ ಆರೋಪ; ಮೂವರ ಬಂಧನ
ಬೆಂಗಳೂರು, ಜ.6: ಟ್ರಾವೆಲ್ಸ್ ಹೆಸರಿನಲ್ಲಿ ಚಾಲಕರಿಂದ ಕಾರುಗಳನ್ನು ಬಾಡಿಗೆಗೆ ಪಡೆದು ವಂಚಿಸಿದ ಆರೋಪದಡಿ ಟ್ರಾವೆಲ್ಸ್ ಮಾಲಕ ಸೇರಿದಂತೆ ಮೂವರನ್ನು ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆಯಲ್ಲಿ ಆರ್‍ಎಸ್ ಟ್ರಾವೆಲ್ಸ್ ಮಾಲಕ ಶಿವಕುಮಾರ್, ಸಹಚರರಾದ ಕೃಷ್ಣಗೌಡ ಹಾಗೂ ಶ್ರೀಕಾಂತ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ಮೂಲತಃ ದಾವಣಗೆರೆಯ ಶಿವಕುಮಾರ್ ಬೆಂಗಳೂರಿಗೆ ಬಂದು ಆರ್ ಎಸ್ ಟ್ರಾವೆಲ್ಸ್ ತೆರೆದಿದ್ದ. ಆನಂತರ, ಲಾಕ್‍ಡೌನ್ ವೇಳೆ ಗ್ರಾಹಕರಿಗೆ ಕಾರುಗಳನ್ನು ತಮ್ಮ ಟ್ರಾವೆಲ್ಸ್ ಗೆ ಸೇರಿಸಿದರೆ ಹಣ ನೀಡುವುದಾಗಿ ಭರವಸೆ ನೀಡಿದ್ದ. ಇದನ್ನು ನಂಬಿ ಗ್ರಾಹಕರು ತಮ್ಮ ಕಾರುಗಳನ್ನು ಬಾಡಿಗೆಗೆ ಬಿಟ್ಟಿದ್ದರು. ಬಳಿಕ ಕಾರುಗಳನ್ನು ಕೇರಳ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.