ವಿಧಾನ ಪರಿಷತ್ತಿನ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು, ಜ. 6: ಇತ್ತೀಚಿಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 25 ಸದಸ್ಯರ ಪೈಕಿ 20 ಮಂದಿ ನೂತನ ಸದಸ್ಯರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕಾರ ಮಾಡಿದರು.
ನೂತನ ಸದಸ್ಯರುಗಳಾದ ಬಿ.ಜಿ.ಪಾಟೀಲ್, ಲಖನ್ ಜಾರಕಿಹೊಳಿ, ಗಣಪತಿ ಉಳ್ವೇಕರ್, ಸಲೀಂ ಅಹ್ಮದ್ ಹಾಗೂ ಎಂ.ಕೆ.ಪ್ರಾಣೇಶ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರದೀಪ ಶೆಟ್ಟರ್, ಕೆ.ಎಸ್.ನವೀನ್, ಅರುಣ್ ಡಿ.ಎಸ್, ದಿನೇಶ್ ಗೂಳಿಗೌಡ, ಎಚ್.ಎಸ್.ಗೋಪಿನಾಥ್ ಹಾಗೂ ಡಾ.ಡಿ.ತಿಮ್ಮಯ್ಯ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಚನ್ನರಾಜ ಹಟ್ಟಿಹೊಳಿ ವೀರಭದ್ರೇಶ್ವರ ಮತ್ತು ಬಸವೇಶ್ವರ, ಶರಣಗೌಡ ಪಾಟೀಲ ಬಯ್ಯಾಪುರ ಭಗವಂತ ಮತ್ತು ತಂದೆ-ತಾಯಿ, ಕೋಟ ಶ್ರೀನಿವಾಸ ಪೂಜಾರಿ ಭಗವಂತ ಮತ್ತು ವಿ.ಎಸ್.ಆಚಾರ್ಯ, ರಾಘವೇಂದ್ರ ರಾಜಣ್ಣ ಅವರು ಭಗವಂತ ಮತ್ತು ರೈತರು ಹಾಗೂ ಸಿ.ಎನ್.ಮಂಜೇಗೌಡ ತಾಯಿ ಚಾಮುಂಡೇಶ್ವರಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಕಾರಣಗಳಿಂದಾಗಿ ಐದು ಮಂದಿ ಸದಸ್ಯರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅನೇಕ ಸಚಿವರು ಹಾಗೂ ಶಾಸಕರು ಸೇರಿದಂತೆ ನೂತನ ಸದಸ್ಯರ ಕುಟುಂಬದ ಆಪ್ತರು, ಅಭಿಮಾನಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಾರ್ಗಸೂಚಿ ಉಲ್ಲಂಘನೆ: ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಎದ್ದು ಕಾಣುತ್ತಿತ್ತು. ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಿದ್ದರೂ ಅಂತರ ಮರೆತು, ಮಾಸ್ಕ್ ಇಲ್ಲದೆ ನೂತನ ಸದಸ್ಯರಿಗೆ ಶುಭ ಕೋರಲು ಅವರ ಅಭಿಮಾನಿಗಳು ನೂಕುನುಗ್ಗಲು ಉಂಟು ಮಾಡಿದರು.
ಮುಖ್ಯಮಂತ್ರಿ, ಸಭಾಪತಿಯವರ ಜೊತೆ ಫೊಟೋ ತೆಗೆಸಿಕೊಳ್ಳಲು ನೂತನ ಸದಸ್ಯರು ಹಾಗೂ ಅವರ ಕುಟುಂಬದವರು ಅಕ್ಷರಶಃ ಮುಗಿಬಿದ್ದ ದೃಶ್ಯ ಕಂಡು ಬಂತು. ವಿಧಾನಸೌಧ, ವಿಕಾಸಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರೂ ಸಚಿವರ ಕಚೇರಿಗಳ ಮುಂದೆ ಹಾಗೂ ವಿಧಾನಸೌಧದ ಕಾರಿಡಾರ್‍ನಲ್ಲಿ ಜನರ ದಂಡು ಹೆಚ್ಚಾಗಿತ್ತು.