ಕಾರ್ಪೊರೇಟ್ ವಲಯದ ಸಾಮರಸ್ಯದ ಅಭಿವೃದ್ಧಿಗೆ ಉತ್ತಮ ಆಡಳಿತ ಮುಖ್ಯ: ರಾಜ್ಯಪಾಲ ಗೆಹ್ಲೋಟ್

Update: 2022-01-06 15:49 GMT

ಬೆಂಗಳೂರು, ಜ. 6: ‘ಕಾರ್ಪೊರೇಟ್ ವಲಯದ ಸಾಮರಸ್ಯದ ಅಭಿವೃದ್ಧಿಗೆ ಉತ್ತಮ ಆಡಳಿತ ಮತ್ತು ಪಾರದರ್ಶಕತೆ ಬಹಳ ಮುಖ್ಯವಾಗಿದೆ' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು  ಹೇಳಿದ್ದಾರೆ.

ಗುರುವಾರ ನಗರದ ಅರಮನೆ ಮೈದಾನದಲ್ಲಿ ‘ಉತ್ತಮ ಆಡಳಿತ: ಸಾರ್ವತ್ರಿಕ ಧರ್ಮ' ಎಂಬ ವಿಷಯದ ಕುರಿತು ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿಸ್ ಆಫ್ ಇಂಡಿಯಾ ಆಯೋಜಿಸಿದ್ದ 49ನೆ ಕಂಪೆನಿ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಆಡಳಿತದ ಪರಿಕಲ್ಪನೆಯು ನಮ್ಮ ಭಾರತೀಯ ನಾಗರಿಕತೆಯಷ್ಟೇ ಹಳೆಯದು. ವೇದಗಳು, ಉಪನಿಷತ್ತುಗಳು, ಮಹಾಭಾರತ, ರಾಮಾಯಣದಂತಹ ಎಲ್ಲ ಮಹಾನ್ ಮಹಾಕಾವ್ಯಗಳು ಉತ್ತಮ ಆಡಳಿತ ಮತ್ತು ನೈತಿಕತೆಯನ್ನು ಕಲಿಸುತ್ತವೆ ಎಂದರು.

ಭಾರತವು ತನ್ನ ಬಲವಾದ ಕಾನೂನು ವ್ಯವಸ್ಥೆ ಮತ್ತು ಕಾರ್ಪೊರೇಟ್ ಆಡಳಿತದ ಉತ್ತಮ ಮಾನದಂಡಗಳಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ವ್ಯಾಪಾರ ಮಾಡಲು ವಿಶ್ವಾಸಾರ್ಹ ಮತ್ತು ಸಮರ್ಥ ಸ್ಥಳವಾಗುವತ್ತ ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಸಹಭಾಗಿತ್ವ, ಒಮ್ಮತ, ಹೊಣೆಗಾರಿಕೆ, ಪಾರದರ್ಶಕತೆ, ನ್ಯಾಯಯುತ ಮತ್ತು ನೈತಿಕ ಸಾಂಸ್ಥಿಕ ನಡವಳಿಕೆ, ಸಂಪೂರ್ಣ ಹಣಕಾಸು ಮತ್ತು ಕಾರ್ಯಾಚರಣೆಯ ಮಾಹಿತಿ ಬಹಿರಂಗಪಡಿಸುವುದರೊಂದಿಗೆ, ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಣೆ ಮಾಡಿದಾಗ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅವರು ತಿಳಿಸಿದರು.

ಪ್ರಧಾನಿ ಮೋದಿ ಅವರು ಉತ್ತಮ ಆಡಳಿತ-ಕನಿಷ್ಠ ಸರಕಾರ ಮತ್ತು ಗರಿಷ್ಠ ಉತ್ತಮ ಆಡಳಿತ ಎಂಬ ಮಂತ್ರವನ್ನೂ ನೀಡಿದ್ದಾರೆ. 2014ರಿಂದ ಪ್ರತಿವರ್ಷ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಡಿ.25 ರಂದು ಕೇಂದ್ರ ಸರಕಾರ ಉತ್ತಮ ಆಡಳಿತ ದಿನವನ್ನಾಗಿ ಆಚರಿಸುತ್ತದೆ. 20-25 ಡಿಸೆಂಬರ್, 2021ಅನ್ನು ‘ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಗಳ ಭಾಗವಾಗಿ ಉತ್ತಮ ಆಡಳಿತ ವಾರವನ್ನಾಗಿ ಆಚರಿಸಲಾಯಿತು. ಗ್ರಾಮದೆಡೆಗೆ ಆಡಳಿತ ಎಂಬ ವಿಷಯದಡಿ ಉತ್ತಮ ಆಡಳಿತ ಸಪ್ತಾಹದ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು.

ಉತ್ತಮ ಆಡಳಿತವನ್ನು ಉತ್ತೇಜಿಸಲು ಪಾರದರ್ಶಕತೆ, ಹೊಣೆಗಾರಿಕೆ, ಸಹಭಾಗಿತ್ವ ಮತ್ತು ಸ್ಪಂದಿಸುವಿಕೆಯನ್ನು ತರಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರಕಾರ ಯಾವಾಗಲೂ ಮುಂಚೂಣಿಯಲ್ಲಿದೆ. ಇತ್ತೀಚೆಗೆ, ಜನರ ಮನೆ ಬಾಗಿಲಿಗೆ ಸರಕಾರಿ ಸೇವೆಗಳನ್ನು ತಲುಪಿಸುವ ಸಲುವಾಗಿ, ಎರಡು ಹೊಸ ಯೋಜನೆಗಳು ಜನ ಸೇವಕ ಮತ್ತು ಜನಸ್ಪಂದನವನ್ನು ಪ್ರಾರಂಭಿಸಲಾಗಿದ್ದು, ಉತ್ತಮ ಆಡಳಿತಕ್ಕೆ ಸಹಕಾರಿಯಾಗಿದೆ. ಕಾರ್ಯಕ್ರಮದಲ್ಲಿ ಐಸಿಎಸ್‍ಐನ ಅಧ್ಯಕ್ಷ ನಾಗೇಂದ್ರ ಡಿ.ರಾವ್, ಸದಸ್ಯರುಗಳಾದ ರಂಜಿತ್ ಪಾಂಡೆ, ಆಶೀಷ್ ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News