ಭದ್ರತಾ ಲೋಪ: ಯಾರು ಹೊಣೆ?

Update: 2022-01-07 03:41 GMT

 ಪ್ರಧಾನಿಯ ಪಂಜಾಬ್ ಭೇಟಿಯ ಸಂದರ್ಭದಲ್ಲಾದ ಭದ್ರತಾ ಲೋಪ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜಕೀಯ ನಾಯಕರು ಪರಸ್ಪರ ಟೀಕೆ, ಪ್ರತಿ ಟೀಕೆಗಳನ್ನು ಮಾಡುತ್ತಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಫೈ ಓವರ್‌ನಲ್ಲಿ ಪ್ರಧಾನಮಂತ್ರಿಯ ಕಾರು ಸಿಲುಕಿ ಹಾಕಿಕೊಂಡಿದೆ ಎನ್ನುವುದು ಸಣ್ಣ ಮಾತೇನೂ ಅಲ್ಲ. ಪ್ರಧಾನಿಯ ಭದ್ರತೆಯಲ್ಲಿ ತೀವ್ರ ಲೋಪಗಳು ಸಂಭವಿಸಿವೆ ಎನ್ನುವುದನ್ನು ಹಗುರವಾಗಿ ಸ್ವೀಕರಿಸುವಂತಿಲ್ಲ. ಹಾಗೆಂದು ಈ ಭದ್ರತಾ ಲೋಪವನ್ನು ಪ್ರಧಾನಿ ಮೋದಿಯವರು ಪಂಜಾಬ್ ಸರಕಾರದ ತಲೆಗೆ ಕಟ್ಟಿ, ಹುತಾತ್ಮ ಹೇಳಿಕೆ ನೀಡಿರುವುದು, ಸಂದರ್ಭದ ರಾಜಕೀಯ ಲಾಭ ಪಡೆಯುವ ಪ್ರಯತ್ನದ ಭಾಗವಷ್ಟೇ. ‘‘ನಾನು ವಿಮಾನ ನಿಲ್ದಾಣದವರೆಗೆ ಜೀವಂತವಾಗಿ ವಾಪಸಾಗಿರುವುದಕ್ಕಾಗಿ ಸಿಎಂಗೆ ಥ್ಯಾಂಕ್ಸ್ ಹೇಳಿ’’ ಎಂಬ ಮೋದಿಯವರ ಹೇಳಿಕೆ, ಒಬ್ಬ ಪ್ರಧಾನಿಯ ಘನತೆಗೆ ತಕ್ಕುದಲ್ಲ. ಈ ಭದ್ರತಾ ಲೋಪಕ್ಕೆ ಪಂಜಾಬ್ ಸರಕಾರದ ವೈಫಲ್ಯ ಮಾತ್ರವಲ್ಲ, ಕೇಂದ್ರ ಸರಕಾರದ ವೈಫಲ್ಯವೂ ಇದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ರೈತರಿಂದ ಬಿಜೆಪಿಯ ಮುಖಂಡರು ಪದೇ ಪದೇ ಮುಖಭಂಗಕ್ಕೊಳಗಾಗುತ್ತಿದ್ದಾರೆ.

‘ಕೃಷಿ ಕಾಯ್ದೆಗಳ ಒಳಿತುಗಳನ್ನು ಜನರಿಗೆ ವಿವರಿಸಲು ಹೊರಟು’ ಹಲವೆಡೆ ರೈತರಿಂದ ದಾಳಿಗೊಳಗಾಗಿದ್ದಾರೆ. ದೇಶಾದ್ಯಂತ ಹಿಂದುತ್ವದ ಹೆಸರಿನಲ್ಲಿ ಸಂಘಪರಿವಾರದ ಪುಂಡಾಟಿಕೆಗಳೇ ಸುದ್ದಿಯಲ್ಲಿದ್ದಾಗ ಮತ್ತು ಈ ಪುಂಡಾಟಿಕೆಗೆ ಸರಕಾರವೇ ಕುಮ್ಮಕ್ಕು ಕೊಡುತ್ತಿರುವಾಗ ಮೊತ್ತ ಮೊದಲಾಗಿ ರೈತರು ತಮ್ಮ ಹಕ್ಕುಗಳಿಗಾಗಿ ಬಂಡೆದ್ದಿರುವುದು ಭಾರತದ ಪಾಲಿಗೆ ಹೊಸ ವಿಷಯ. ಸರಕಾರಕ್ಕೂ ಈ ಬಂಡಾಯ ನುಂಗಲಾರದ ತುತ್ತು. ಸುಮಾರು ಒಂದು ವರ್ಷದ ರೈತರ ತ್ಯಾಗ ಬಲಿದಾನಗಳ ಬಳಿಕ ಪ್ರಧಾನಿ ಮೋದಿಯವರು, ರೈತ ವಿರೋಧಿ ಕಾಯ್ದೆಗಳನ್ನು ಹಿಂದೆಗೆದುಕೊಂಡರು. ಈ ಸಂದರ್ಭದಲ್ಲಿ, ಮೋದಿಯವರ ಸರ್ವಾಧಿಕಾರಿ ಮನಸ್ಥಿತಿಯಿಂದಾಗಿ ಸುಮಾರು 700 ಮಂದಿ ರೈತರು ಸಾಯುವಂತಾಯಿತು ಮತ್ತು ಈ ಸಾವಿನ ಹೊಣೆಹೊತ್ತು ಕೇಂದ್ರ ಸರಕಾರ ಈವರೆಗೆ ರೈತ ಕುಟುಂಬಗಳಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ. ಪ್ರತಿಭಟನಾನಿರತ ರೈತರಿಗೆ ಕೇಂದ್ರ ಸರಕಾರ ಮಾಡಿರುವ ಗಾಯಗಳು ಇನ್ನೂ ಒಣಗಿಲ್ಲ. ರೈತ ವಿರೋಧಿ ಕಾಯ್ದೆಗಳನ್ನು ಸರಕಾರ ಇನ್ನೊಮ್ಮೆ ಹೊಸ ರೂಪದಲ್ಲಿ ತರುವ ಉದ್ದೇಶವನ್ನು ಹೊಂದಿದೆ ಎನ್ನುವುದು ರೈತರಿಗೆ ಗೊತ್ತಿದೆ. ಈ ಕಾರಣದಿಂದ, ಕೇಂದ್ರ ಸರಕಾರದ ವಿರುದ್ಧ ರೈತರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ.

ಈ ಹಿಂದೆ ಸರಕಾರದ ವಿರುದ್ಧ ಅಸ್ಸಾಮಿನಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದಾಗ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ತಮ್ಮ ಭೇಟಿಗಳನ್ನು ಅನಿರೀಕ್ಷಿತವಾಗಿ ರದ್ದುಗೊಳಿಸಿದ್ದರು. ಸರಕಾರದ ವಿರುದ್ಧ ತೀವ್ರ ಜನಾಕ್ರೋಶವಿರುವಾಗ, ಪ್ರಧಾನಿಯವರು ಆ ಸ್ಥಳಕ್ಕೆ ಭೇಟಿ ನೀಡುವ ಮೊದಲು, ಗುಪ್ತಚರ ಇಲಾಖೆಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಕಡ್ಡಾಯವಾಗಿ ಪಡೆದುಕೊಳ್ಳುತ್ತಾರೆ ಕೂಡ. ಪ್ರಧಾನಿ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ರೈತರ ಪ್ರತಿಭಟನೆ ಅನಿರೀಕ್ಷಿತವಾಗಿರಲಿಲ್ಲ. ಪ್ರಧಾನಿ ಭೇಟಿಯ ಸಂದರ್ಭದಲ್ಲಿ 9 ರೈತ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವ ಮಾಹಿತಿ ಕೇಂದ್ರಕ್ಕೂ, ರಾಜ್ಯಕ್ಕೂ ಮೊದಲೇ ದೊರಕಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವ್ಯಾಪಕ ಬಂದೋಬಸ್ತ್ ಮಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಭದ್ರತಾ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಪರಸ್ಪರ ಕೈಜೋಡಿಸಿ, ಪ್ರಧಾನಿಯ ಭೇಟಿಯನ್ನು ಸುಸೂತ್ರ ಮಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಪಂಜಾಬ್‌ನಲ್ಲಿ ನಿರ್ಮಾಣವಾಗಿತ್ತು. ಕೇಂದ್ರ-ರಾಜ್ಯಗಳ ನಡುವಿನ ಸಂವಹನದ ಕೊರತೆ ಈ ಭದ್ರತಾಲೋಪಕ್ಕೆ ಮುಖ್ಯ ಕಾರಣ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇದೇ ಸಂದರ್ಭದಲ್ಲಿ ಪ್ರಧಾನಿಯ ಕಡೆಯಿಂದ ಲೋಪವಾಗಿರುವುದನ್ನೂ ರಾಜ್ಯ ಸರಕಾರ ಬೊಟ್ಟು ಮಾಡಿದೆ. ‘‘ಪ್ರಧಾನಿಯವರ ಪಂಜಾಬ್ ಭೇಟಿಯ ಸಂದರ್ಭ ಯಾವುದೇ ಭದ್ರತಾ ಲೋಪವಾಗಿಲ್ಲ. ಮೋದಿಯವರು ವಾಯುಮಾರ್ಗವಾಗಿ ಪ್ರಯಾಣಿಸುವ ಯೋಜನೆಯನ್ನು ಹೊಂದಿದ್ದರು. ಆದರೆ ನಮಗೆ ತಿಳಿಸದೆಯೇ ಅವರು ರಸ್ತೆ ಮಾರ್ಗವಾಗಿ ಪ್ರಯಾಣಿಸಿದ್ದರು’’ ಎಂದು ಪಂಜಾಬ್ ಮುಖ್ಯಮಂತ್ರಿ ತಿಳಿಸಿದ್ದಾರೆ.

ರಾಜ್ಯ ಸರಕಾರಕ್ಕೆ ಮಾಹಿತಿ ನೀಡದೆಯೇ ಪ್ರಧಾನಿ ಮೋದಿಯವರು ಅನಿರೀಕ್ಷಿತವಾಗಿ ರಸ್ತೆ ಮಾರ್ಗವಾಗಿ ಸಂಚರಿಸಲು ಸಾಧ್ಯವೇ ಎನ್ನುವುದು ಮುಖ್ಯ ಪ್ರಶ್ನೆ. ಈ ಸಂದರ್ಭದಲ್ಲಿ, ಅಂಗರಕ್ಷಕರು ರಾಜ್ಯ ಪೊಲೀಸ್ ಇಲಾಖೆಗೆ ಪೂರ್ವಭಾವಿ ಮಾಹಿತಿ ನೀಡಿದ್ದರೇ ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕು ಅಥವಾ, ರಾಜ್ಯ ಸರಕಾರದ ಮೇಲೆ ನಂಬಿಕೆಯಿಲ್ಲದೆ, ಏಕಾಏಕಿ ಸ್ವಯಂ ತೀರ್ಮಾನವನ್ನು ತೆಗೆದುಕೊಳ್ಳಲಾಯಿತೇ? ರಾಜ್ಯದ ರೈತ ಸಂಘಟನೆಗಳ ಬೆನ್ನ ಹಿಂದೆ ರಾಜ್ಯ ಸರಕಾರವಿರುವುದರಿಂದ, ಅವರಿಗೂ ಮುಚ್ಚಿಟ್ಟು ರಸ್ತೆ ಪ್ರಯಾಣ ನಡೆಸಲು ಪ್ರಯತ್ನಿಸಿದರೇ? ಕೊನೆಯ ಕ್ಷಣದಲ್ಲಿ ವಾಯುಮಾರ್ಗದಿಂದ ಹಿಂದೆ ಸರಿದಿರುವುದಕ್ಕೆ ನಿಜವಾದ ಕಾರಣವೇನು ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ.

 ಈ ಎಲ್ಲ ಘಟನೆಗಳನ್ನು ರಾಜಕೀಯ ನೆಲೆಯಲ್ಲೂ ನೋಡಬೇಕಾಗಿದೆ. ಪ್ರಧಾನಿ ಭೇಟಿಗೆ ನಿರೀಕ್ಷಿತ ಪ್ರತಿಕ್ರಿಯೆ ಜನರಿಂದ ಸಿಕ್ಕಿರಲಿಲ್ಲ. ಗುಪ್ತಚರ ಮಾಹಿತಿಗಳ ಪ್ರಕಾರ, ಪ್ರಧಾನಿಯ ಸಭೆಯಲ್ಲಿ 700ಕ್ಕಿಂತ ಅಧಿಕ ಜನರು ಭಾಗವಹಿಸುವ ಸಾಧ್ಯತೆಗಳಿರಲಿಲ್ಲ. ಆದುದರಿಂದ ಅನಿರೀಕ್ಷಿತವಾಗಿ ಭೇಟಿಯನ್ನು ಹಿಂದೆಗೆಯಲಾಯಿತು ಎನ್ನುವ ವಾದಗಳಿವೆ. ಒಂದೆಡೆ ರೈತರ ಪ್ರತಿಭಟನೆ, ಇನ್ನೊಂದೆಡೆ ಕೊರೋನ ಇವೆರಡರ ನಡುವೆ ಆತುರಾತುರವಾಗಿ ಮೋದಿಯವರು ಪಂಜಾಬ್‌ನಲ್ಲಿ ರ್ಯಾಲಿ ಹಮ್ಮಿಕೊಳ್ಳುವ ಅಗತ್ಯವಿದ್ದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರಧಾನಿಯವರ ನಿರ್ಧಾರಗಳಲ್ಲಿ ಸಮಚಿತ್ತತೆಯಿಲ್ಲ ಎನ್ನುವುದನ್ನು ಪಕ್ಷದೊಳಗಿರುವ ನಾಯಕರೇ ಆಡಿಕೊಳ್ಳುತ್ತಿದ್ದಾರೆ. ಪಂಜಾಬ್‌ನ ಪ್ರಕರಣದಲ್ಲೂ ಪ್ರಧಾನಿಯ ಆಪ್ತರ ಸಮಚಿತ್ತತೆಯ ಕೊರತೆ ಎದ್ದು ಕಾಣುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News