×
Ad

ಕೋವಿಡ್-19 ಮಾರ್ಗಸೂಚಿ: ಮಸೀದಿಗಳಲ್ಲಿ ಶೇ.50ರಷ್ಟು ಮಂದಿಗಷ್ಟೇ ನಮಾಝ್ ನಿರ್ವಹಿಸಲು ಅವಕಾಶ

Update: 2022-01-07 12:07 IST

ಬೆಂಗಳೂರು, ಜ.7: ರಾಜ್ಯ ಸರಕಾರವು ಕೋವಿಡ್-19 ಸೋಂಕು ಹಾಗೂ ಒಮೈಕ್ರಾನ್ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಹೊರಡಿಸಿರುವ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಮಂಡಳಿ ತನ್ನ ಅಧೀನದಲ್ಲಿರುವ ಮಸೀದಿಗಳಲ್ಲಿ ಪ್ರಾರ್ಥನೆ(ನಮಾರ್) ನಿರ್ವಹಿಸಲು ಆಯಾ ಮಸೀದಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50ರಷ್ಟು ಮುಸಲ್ಲಿಗಳನ್ನು(ನಮಾಝ್ ನಿರ್ವಹಿಸುವವರು) ಮೀರದಂತೆ ಅವಕಾಶ ಕಲ್ಪಿಸುವಂತೆ ಸೂಚಿಸಿದೆ.

ಈ ಸಂಬಂಧ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಕಾರ್ಯದರ್ಶಿಯವರು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದು, ಮಸೀದಿಗಳಲ್ಲಿ ಪ್ರಾರ್ಥನೆಯನ್ನು ನಿರ್ವಹಿಸಲು ಆಯಾ ಮಸೀದಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50ರಷ್ಟು ಮುಸಲ್ಲಿಗಳನ್ನು ಮೀರಬಾರದು. ಮಸೀದಿಗೆ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡಬೇಕು, ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್ ನಿಂದ ಶುಚಿಗೊಳಿಸುವಂತೆ ಸೂಚಿಸಿದ್ದಾರೆ.

ಮಸೀದಿಗಳಲ್ಲಿ ಕಡ್ಡಾಯವಾಗಿ ಮಾಸ್ಕನ್ನು ಧರಿಸಬೇಕು, ಮಸೀದಿಗೆ ಆಗಮಿಸುವ ಪ್ರತಿಯೊಬ್ಬ ವ್ಯಕ್ತಿಯು ಕಡ್ಡಾಯವಾಗಿ ಎರಡು ಡೋಸ್‌ ಕೋವಿಡ್  ಲಸಿಕೆಯನ್ನು ಪಡೆದಿರಬೇಕು, ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವವರ ಮಧ್ಯ ಕನಿಷ್ಠ 6 ಅಡಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೆ ಪ್ರಾರ್ಥನೆ ಮಾಡಬೇಕು. ಅಲ್ಲದೆ, ಮನೆಗಳಿಂದಲೇ ಮುಸಲ್ಲಾ(ಜಾಯಿನಮಾರ್) ಕಡ್ಡಾಯವಾಗಿ ಮಸೀದಿಗೆ ತರಬೇಕು ಹಾಗೂ ಹಸ್ತಲಾಘವ ಮತ್ತು ಆಲಿಂಗನ ಮಾಡದಂತೆ ಮುಸಲ್ಲಿಗಳಿಗೆ ಸೂಚಿಸಬೇಕು. ಅಲ್ಲದೆ, ಕಾಲಕಾಲಕ್ಕೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಜಿಲ್ಲಾಡಳಿತ ಹೊರಡಿಸುವ ಎಸ್‌ಓಪಿ, ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಎಲ್ಲ ಜಿಲ್ಲೆಯ ವಕ್ಫ್ ಅಧಿಕಾರಿಗಳಿಗೆ ಸೂಚನೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News