ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಅಗ್ನಿ ಅವಘಡ

Update: 2022-01-08 16:08 GMT

ಬೆಂಗಳೂರು, ಜ.8: ನಗರದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ದಿಢೀರ್ ದಟ್ಟವಾದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವಾಪ್ತಿಯಲ್ಲಿ ಶನಿವಾರ ನಡೆದಿದೆ.

ಇಲ್ಲಿನ ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ ಬಳಿ ಪ್ರೆಸ್ಟೀಜ್ ಫಾಲ್ಕನ್ ಸಿಟಿಗೆ ಹೊಂದಿಕೊಂಡಂತೆ ಪ್ರೆಸ್ಟೀಜ್ ಕಂಪೆನಿಯಿಂದ ನಿರ್ಮಿಸುತ್ತಿರುವ ಮಾಲ್‍ನ ಮೂರನೇ ಮಹಡಿಯಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಅವಘಡದಲ್ಲಿ ಕೆಲ ವಸ್ತುಗಳು ಹಾನಿಯಾಗಿವೆ. 

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಸ್ಥಳೀಯರಲ್ಲಿ ಆತಂಕ ಎದುರಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೂರನೇ ಮಹಡಿಯಲ್ಲಿ ಚಿತ್ರಮಂದಿರ ನಿರ್ಮಿಸಲಾಗುತ್ತಿದೆ. ಧ್ವನಿ ವ್ಯವಸ್ಥೆಗಾಗಿ ಗೋಡೆಗಳಿಗೆ ಥರ್ಮಕೋಲ್ ಅಳವಡಿಸಲಾಗಿದೆ. ಇದಕ್ಕೆ ಬೆಂಕಿ ತಾಕಿ ದಟ್ಟ ಹೊಗೆ ಆವರಿಸಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರ್ಮಿಕರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. 

ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News