ವ್ಯಕ್ತಿ ಮತ್ತು ಸಮಾಜದ ಮನೋರೋಗಗಳು

Update: 2022-01-09 05:45 GMT

ತಲೆಗೆ, ಕಣ್ಣಿಗೆ, ಹೊಟ್ಟೆಗೆ, ಬೆನ್ನಿಗೆ, ಚರ್ಮಕ್ಕೆ, ಕೈ ಕಾಲಿಗೆ ನೋವೋ, ಬಾವೋ, ತುರಿಕೆಯೋ, ಊತವೋ, ಉರಿಯೋ ಎಂತದ್ದೋ ಬರುತ್ತದೆ. ಯಾವುದೇ ಕಾರಣದಿಂದ ಸಮಸ್ಯೆ ಬಂದು ಅದು ಆ ಹೊತ್ತಿಗೆ, ಒಂದು ಮಟ್ಟಕ್ಕೆ ಕಾಣಿಸಿಕೊಳ್ಳುವುದು. ಅದಕ್ಕೆ ಬೇಕಾದ ಔಷಧವನ್ನು ತೆಗೆದುಕೊಳ್ಳುತ್ತೇವೆ. ನಿವಾರಿಸಿಕೊಳ್ಳುತ್ತೇವೆ. ನೋವು, ಬಾವು, ಊತ, ಉರಿ ಹೋಯಿತೆಂದರೆ ಸಮಸ್ಯೆ ಹೋಯಿತೆಂದರ್ಥ. ಒಂದು ವೇಳೆ ಯಾವುದೇ ಒಂದು ಸಮಸ್ಯೆ ಬಂದು, ಸಣ್ಣ ಪುಟ್ಟ ಮದ್ದುಗಳಿಂದ, ಉಪಚಾರಗಳಿಂದ ಹೋಗದೆ ಒಂದೇ ಸಮನೆ ಕಾಡುತ್ತಿದ್ದರೆ ಅದಕ್ಕೆ ರೋಗ ಎನ್ನಬಹುದೇನೋ. ಅದಕ್ಕೂ ದೀರ್ಘಕಾಲದ ಉಪಚಾರ, ನಿಯಮಿತ ಮದ್ದಿನ ಸೇವನೆ ಇರುತ್ತದೆ. ಒಟ್ಟಾರೆ ದೇಹಕ್ಕೆ ಏನಾದರೂ ಆದರೆ ಕಾಣುವಂತಹ ಲಕ್ಷಣಗಳಿಂದ ಸಮಸ್ಯೆಯನ್ನೋ, ರೋಗವನ್ನೋ ಪತ್ತೆ ಹಚ್ಚಿ ಅದಕ್ಕೆ ಅಗತ್ಯವಿರುವ ಚಿಕಿತ್ಸೆ ಮಾಡುತ್ತೇವೆ ಅಥವಾ ಮಾಡಿಕೊಳ್ಳುತ್ತೇವೆ. ಅದೇ ರೀತಿ ಮನಸ್ಸಿಗೂ ಆಗಾಗ ಸಮಸ್ಯೆ ಬರುತ್ತದೆ. ಆ ಸಮಸ್ಯೆಯನ್ನು, ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅದು ರೋಗವಾಗಿ ಮುಂದುವರಿಯುತ್ತದೆ. ವಿಪರ್ಯಾಸವೆಂದರೆ ತಮಗೆ ತಲೆನೋವು ಇದೆ ಎಂದು ಒಪ್ಪಿಕೊಂಡಂತೆ, ಸಕ್ಕರೆ ಖಾಯಿಲೆ ಅಥವಾ ರಕ್ತದೊತ್ತಡ ಇದೆ ಎಂದು ಒಪ್ಪಿಕೊಂಡಂತೆ ಮನೋರೋಗವಿದೆ ಎಂದು ಒಪ್ಪಿಕೊಳ್ಳಲು ಸಾಮಾನ್ಯವಾಗಿ ತಯಾರಿರುವುದಿಲ್ಲ. ಅದೇ ಸಮಸ್ಯೆ.

ಮೂಡುವ ಭಾವನೆಗಳಿಂದಾಗಿ, ಮಾಡುವ ಆಲೋಚನೆಗಳಿಂದಾಗಿ, ತೋರುವ ವರ್ತನೆಗಳಿಂದಾಗಿ, ನೀಡುವ ಪ್ರತಿಕ್ರಿಯೆಗಳಿಂದಾಗಿ, ಸ್ಪಂದಿಸುವ ರೀತಿಗಳಿಂದಾಗಿ ರೋಗಗ್ರಸ್ತ ಮನಸ್ಥಿತಿಯು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಆದರೆ ಅದನ್ನು ಆ ಹೊತ್ತಿನ ಸಂಗತಿ ಅಥವಾ ಸನ್ನಿವೇಶಕ್ಕೆ ತಮ್ಮ ಪ್ರತಿಕ್ರಿಯೆ ಅಥವಾ ತಮ್ಮ ಮೇಲಾಗಿರುವ ಪ್ರಭಾವ ಎಂದುಕೊಂಡು ಸುಮ್ಮನಾಗಿಬಿಡುತ್ತಾರೆ. ಅದು ಮತ್ತೂ ದೊಡ್ಡ ಸಮಸ್ಯೆ. ಹೀಗಾಗಿ ತಾವೇ ತಮ್ಮ ಮನೋರೋಗವನ್ನು ಪತ್ತೆ ಹಚ್ಚಿಕೊಳ್ಳುವುದಿಲ್ಲ. ಒಂದು ವೇಳೆ ಬೇರೆಯವರು ಪತ್ತೆ ಹಚ್ಚಿದರೆ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಸಮಾಜದಲ್ಲಿ ಮನೋರೋಗಿಗಳು ತುಂಬಾ ಸಹಜವಾಗಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಅಂತ ಅವರೂ ಇರ್ತಾರೆ. ಅವರಿರೋದೇ ಹಾಗೆ ಅಂತ ಉಳಿದವರೂ ಇರ್ತಾರೆ. ವ್ಯಕ್ತಿಗತ ಸಂಬಂಧಗಳಲ್ಲಾಗಲಿ ಅಥವಾ ಸಮಾಜದ ಸಂಘ ಜೀವನದಲ್ಲಾಗಲಿ, ಯಾವುದೇ ಒಬ್ಬ ವ್ಯಕ್ತಿಯು ತನ್ನನ್ನು ತಾನು ಮತ್ತು ಇತರರನ್ನು ಅವರವರ ವರ್ತನೆಗಳ, ಭಾವನೆಗಳ, ವಿಚಾರಗಳ, ಕ್ರಿಯೆ-ಪ್ರತಿಕ್ರಿಯೆಗಳ ಮೂಲಕ ಮನೋವೈಜ್ಞಾನಿಕವಾಗಿ ಅರಿಯುತ್ತಾನೋ ಆಗ ಅವನಿಗೆ ಸಮಸ್ಯೆಗಳನ್ನು, ಸಂಘರ್ಷಗಳ ಕಾರಣಗಳನ್ನು, ಸಂಬಂಧಗಳಲ್ಲಿನ ಬಿರುಕುಗಳನ್ನು, ಖಿನ್ನತೆಗೆ ಮೂಲಗಳನ್ನು, ಭಿನ್ನ ಮನಸ್ಥಿತಿಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆಗ್ರಹ ತೋರುವ ಎಡೆಯಲ್ಲಿ ಅನುಕಂಪ ತೋರಲು ಸಾಧ್ಯವಾಗುತ್ತದೆ. ದ್ವೇಷ ಸಾಧಿಸುವ ಬದಲು ಪ್ರೀತಿಸಲು ಸಾಧ್ಯವಾಗುತ್ತದೆ. ದೂರುವ ಬದಲು ತಿದ್ದಲು ಸಾಧ್ಯವಾಗುತ್ತದೆ. ದೂಷಿಸುವ ಬದಲು ಅರಿಯಲು ಸಾಧ್ಯವಾಗುತ್ತದೆ. ವ್ಯಕ್ತಿಯೊಬ್ಬನ ಮಾತಿಗೆ, ಕೃತ್ಯಕ್ಕೆ ಆತನನ್ನೇ ಎತ್ತಿ ಎಸೆಯುವ ಬದಲು, ಅವನ ಯಾವುದೋ ದೋಷಪೂರಿತ ಗುಣದ ಕಣವನ್ನು ಹೆಕ್ಕಿ ಎಸೆಯಲು ಸಾಧ್ಯವಾಗುತ್ತದೆ. ಮೆತ್ತಿಕೊಂಡಿರುವ ಮಲಿನವನ್ನು ತೊಳೆಯಲು ಸಾಧ್ಯವಾಗುತ್ತದೆ. ಕಾಟ ಕೊಡುವ ಅವರ್ಯಾರದೋ ಹಟಕ್ಕೆ, ಮುಂದುವರಿಯಲು ಬಿಡದ ಇವರ್ಯಾರದೋ ಮೌಢ್ಯಕ್ಕೆ, ಎಷ್ಟೇ ತಿಳಿಯಾದ ತಿಳುವಳಿಕೆಯನ್ನು ನೀಡಿದರೂ ತಾವೆಂದಿಗೂ ಬಿಡದ ತಮ್ಮ ವಾದಕ್ಕೆ ಕಾರಣಗಳು ತಿಳಿಯುತ್ತವೆ.

ಹೀಗೆ ಮನೋವಿಜ್ಞಾನವು ವ್ಯಕ್ತಿಯ ಮತ್ತು ಸಮಾಜದ ಹೂರಣವನ್ನು ಅರಿವಿಗೆ ತರುತ್ತಾ ವ್ಯಕ್ತಿಗತವಾದ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯಾವುದೇ ಸಮಾಜದ ಮಟ್ಟಿಗಾದರೂ ರಾಕೆಟ್ ವಿಜ್ಞಾನವು ಮನೋವಿಜ್ಞಾನದ ಅಗತ್ಯದ ಮುಂದೆ ಮೊದಲನೆಯ ಪ್ರಾಧಾನ್ಯತೆ ಆಗಲಾರದು ಎಂಬುದು ನನ್ನ ಗ್ರಹಿಕೆ.

ಮನೋರೋಗಕ್ಕೆ ನಾನಾ ಕಾರಣಗಳಿದ್ದಂತೆ, ನಾನಾ ಆಯಾಮಗಳೂ, ಮುಖಗಳೂ, ರೀತಿಗಳೂ ಇವೆ. ಯಾವುದೇ ಆದರೂ ಗುರುತು ಹಚ್ಚಲು ಸಾಕಷ್ಟು ಸಾಧ್ಯವಿದೆ. ಮಾನಸಿಕ, ಭಾವನಾತ್ಮಕ ಮತ್ತು ಸಾಂದರ್ಭಿಕ ಸಮಸ್ಯೆಗಳು ಮನೋರೋಗವಾಗಿ ಉಲ್ಬಣಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ಮ್ತು ಉಪಚರಿಸಿಕೊಳ್ಳುವ ಅಗತ್ಯವಿದೆ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News