ಕೆಲಸ ಕೊಡಿಸುವುದಾಗಿ ನಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರಿಗೆ ವಂಚನೆ: ಆರೋಪಿಯ ಬಂಧನ
ಬೆಂಗಳೂರು, ಜ.9: ಹಲವು ಜಾತಿಗಳ ಹೆಸರಿನಲ್ಲಿ 50ಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಆರಂಭಿಸಿ ಮದುವೆ ಮಾಡಿಕೊಡಿಸುವುದಾಗಿ ನಂಬಿಸಿ ಯುವತಿಯರಿಗೆ ವಂಚಿಸುತ್ತಿದ್ದ ಆರೋಪದಡಿ ಓರ್ವನನ್ನು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ವಿಠ್ಠಲ ಪರ್ಲಪೇಟೆ(33) ಬಂಧಿತ ಆರೋಪಿ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.
ಆರೋಪಿಯ ತಂದೆಗೆ ಹೆಸ್ಕಾಂನಲ್ಲಿ ಕೆಲಸವಿತ್ತು. ತಂದೆಯ ಅಕಾಲಿಕ ಸಾವಿನ ಬಳಿಕ ಅನುಕಂಪದ ಆಧಾರ ಮೇಲೆ ಲೈನ್‍ಮೆನ್ ಕೆಲಸ ಗಿಟ್ಟಿಸಿಕೊಂಡಿದ್ದ. 2013ರಲ್ಲಿ ಆರೋಪಿ ಸುನಿತಾ ಎಂಬಾಕೆಯನ್ನು ಕೊಲೆ ಮಾಡಿ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ಆರೋಪಿ ಜಾಮೀನಿನ ಮುಖಾಂತರ ಹೊರ ಬಂದಿದ್ದು, ಆತನನ್ನು ಲೈನ್‍ಮೆನ್ ಕೆಲಸದಿಂದ ವಜಾಗೊಳಿಸಲಾಗಿತ್ತು.
ಬಳಿಕ ಜೀವನೋಪಾಯಕ್ಕಾಗಿ ನಕಲಿ ಖಾತೆಗಳನ್ನು ಮಾಡಿಕೊಂಡು ಯುವತಿಯರನ್ನು ಪರಿಚಯ ಮಾಡಿಕೊಂಡು ಸರಕಾರಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸುತ್ತಿದ್ದ. ಆರೋಪಿ ಶಿವಮೊಗ್ಗ, ಹಾವೇರಿ, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದ ಒಟ್ಟು 26 ಯುವತಿಯರಿಗೆ ನಂಬಿಸಿ 21 ಲಕ್ಷ 30 ಸಾವಿರ ರೂ. ಹಣವನ್ನು ವಂಚಿಸಿದ್ದಾನೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಮಡಿವಾಳದಲ್ಲಿ ನಡೆದಿದ್ದ ಯುವತಿಯ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ 5ಲಕ್ಷ ಬೆಲೆಬಾಳುವ ಕಾರು ಮತ್ತು ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷ 66 ಸಾವಿರ ಹಣವನ್ನು ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.