ಗುರು ರಾಘವೇಂದ್ರ ಬ್ಯಾಂಕ್ ಹಗರಣಕ್ಕೆ ಎರಡು ವರ್ಷ: ಜ.10ರಿಂದ ಪ್ರಧಾನಿಗೆ ಪತ್ರ ಚಳುವಳಿ

Update: 2022-01-09 13:08 GMT
ಫೈಲ್ ಚಿತ್ರ

ಬೆಂಗಳೂರು, ಜ.9: ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಬೆಳಕಿಗೆ ಬಂದು ಎರಡು ವರ್ಷಗಳು ಕಳೆದಿವೆ. ಪ್ರಕರಣ ಇತ್ಯರ್ಥಪಡಿಸಿ, ಠೇವಣಿದಾರರಿಗೆ ನ್ಯಾಯ ಕೊಡಿಸಬೇಕಾದ ಸಂಸದ ತೇಜಸ್ವಿ ಸೂರ್ಯ ಆರೋಪಿಗಳ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗಾಗಿ ವಂಚನೆಗೆ ಒಳಗಾದ ಠೇವಣಿದಾರರು ಜ.10ರಿಂದ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುವ ಚಳುವಳಿಯನ್ನು ಆರಂಭಿಸಲಿದ್ದಾರೆ ಎಂದು ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‍ನ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ವಕ್ತಾರ ಡಾ. ಶಂಕರ್ ಗುಹಾ ದ್ವಾರಕಾನಾಥ್ ಬೆಳ್ಳೂರು ತಿಳಿಸಿದ್ದಾರೆ. 

ರವಿವಾರ ನಗರದ ಬಸವನಗುಡಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಬ್ಯಾಂಕ್ ಠೇವಣಿದಾರರು ತಾವು ಜೀವನಪೂರ್ತಿ ದುಡಿದು ಬ್ಯಾಂಕಿನಲ್ಲಿಟ್ಟಿದ್ದ ಹಣವನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಆದರೆ ಅವರಿಗೆ ನ್ಯಾಯ ಒದಗಿಸಬೇಕಾದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಯಾವುದೇ ಕ್ರಮವನ್ನು ದೊರಕಿಸದ ಕಾರಣ ಆರೋಪಿಗಳ ಪರವಾಗಿದ್ದಾರೆ ಎಂದು ಸ್ಪಷ್ಟವಾಗುತ್ತಿದೆ. ಅಲ್ಲದೆ, ಡಿಐಸಿಜಿಸಿ ವಿಮೆ ಹಣವನ್ನು ಕೊಡಿಸಿರುವುದಾಗಿ ಹೇಳಿಕೊಂಡು ಕಳೆದ ಎರಡು ತಿಂಗಳಿನಿಂದ ವೇದಿಕೆಗಳಲ್ಲಿ ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜನಪರ ಕಾಳಜಿ ಇದ್ದಲ್ಲಿ, ಠೇವಣಿದಾರರಿಗೆಲ್ಲಾ ತಮ್ಮ ಹಣ ಬರುವ ವ್ಯವಸ್ಥೆ ಮಾಡಬೇಕು. ಹಾಗೆಯೇ, ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಕ್ರಮ ವಹಿಸಬೇಕು ಎಂದರು. 

ಬ್ಯಾಂಕ್ ಹಗರಣ ಬೆಳಕಿಗೆ ಬಂದು ಎರಡು ವರ್ಷಗಳ ಕರಾಳ ನೆನಪಿಗಾಗಿ ಸೋಮವಾರ (ಜ.10) ಬ್ಯಾಂಕ್ ಮುಂಭಾಗದಲ್ಲಿರುವ ನೆಟ್ಟಕಲ್ಲಪ್ಪ ವೃತ್ತದಲ್ಲಿ ಪ್ರತಿಭಟನೆ ಮಾಡಲಾಗುವುದು. ವಂಚನೆಗೆ ಒಳಾಗಾದ ಠೇವಣಿದಾರರಿಗೆ ಹಣ ವಾಪಸ್ಸು ಬರುವವರೆಗೂ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News