ಬುಲ್ಲಿ ಬಾಯ್ ಪ್ರಕರಣ: ದೂರುದಾರ ಮಹಿಳೆಗೆ ಬೆದರಿಕೆ ಕರೆ

Update: 2022-01-11 01:54 GMT
Photo - Twitter 

ಮುಂಬೈ: ಬುಲ್ಲಿ ಬಾಯ್ ಆ್ಯಪ್ ಬಗ್ಗೆ ದೂರು ನೀಡಿದ ಮಹಿಳೆಯ ಫೋನ್‌ಗೆ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಮ್ಮ ಹೆಸರನ್ನು ಏಕೆ ಬಹಿರಂಗಪಡಿಸಲಾಗಿದೆ ಹಾಗೂ ಏಕೆ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಶ್ನಿಸಿ ಕರೆ ಮಾಡಿದ ವ್ಯಕ್ತಿ ಬೆದರಿಕೆ ಒಡ್ಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸೈಬರ್ ಪೊಲೀಸ್ ಠಾಣೆ ಅಧಿಕಾರಿಗಳು ಹೇಳಿದ್ದಾರೆ.

ದೂರುದಾರ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಆರೋಪಿಗಳು ಹೇಗೆ ಪಡೆದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ತನಿಖೆ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಂ ಮಹಿಳೆಯರ ಭಾವಚಿತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿ "ಹರಾಜು" ಮಾಡುವ ’ಬುಲ್ಲಿ ಬಾಯ್’ ಎಂಬ ಆ್ಯಪ್ ಸೃಷ್ಟಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಈ ಸಂಬಂಧ ಮುಂಬೈ ಸೈಬರ್ ಪೊಲೀಸರು ಈಗಾಗಲೇ ಉತ್ತರಾಖಂಡದ ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವಲ್ ಮತ್ತು ಬೆಂಗಳೂರಿನ ವಿಶಾಲ್ ಕುಮಾರ್ ಝಾ ಎಂಬುವವರನ್ನು ಬಂಧಿಸಲಾಗಿದೆ. ಈ ಸಂಬಂಧ ದೆಹಲಿ ಪೊಲೀಸರು ಕೂಡಾ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಅಸ್ಸಾಂನ ನೀರಜ್ ಬಿಷ್ಣೋಯಿ ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಿಷ್ಣೋಯಿ ಆ್ಯಪ್ ಸೃಷ್ಟಿಕರ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News