ಕೃಷ್ಣಾ ನದಿ ನೀರು ವಿವಾದ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿಗಳಾದ ಚಂದ್ರಚೂಡ್, ಬೋಪಣ್ಣ

Update: 2022-01-11 07:04 GMT

ಹೊಸದಿಲ್ಲಿ: ಕೃಷ್ಣಾ ನದಿ ನೀರು ವಿವಾದ ಪ್ರಕರಣದ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಪೀಠದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಎ ಎಸ್ ಬೋಪಣ್ಣ ಹಿಂದೆ ಸರಿದಿದ್ದಾರೆ. ಈ ಪ್ರಕರಣ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ನಡುವೆ ನಡೆಯುತ್ತಿದೆ. ಜಸ್ಟಿಸ್ ಚಂದ್ರಚೂಡ್ ಮಹಾರಾಷ್ಟ್ರದವರಾಗಿರುವುದು ಹಾಗೂ ಜಸ್ಟಿಸ್ ಬೋಪಣ್ಣ ಕರ್ನಾಟಕದವರಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.

ತಮ್ಮದೇ ರಾಜ್ಯದ ಕುರಿತಾದ ಪ್ರಕರಣಗಳ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರು ಪಕ್ಷಪಾತ ಧೋರಣೆಯ ಅಪವಾದ ಎದುರಿಸುವುದರಿಂದ ತಪ್ಪಿಸಲು ಈ ರೀತಿ ಮಾಡಿದ್ದಾರೆಂಬುದು ಸ್ಪಷ್ಟ. ಜಸ್ಟಿಸ್ ಬೋಪಣ್ಣ ಅವರ ಜತೆ ಮಾತನಾಡಿದ ನಂತರ ಪ್ರತಿಕ್ರಿಯಿಸಿದ ಜಸ್ಟಿಸ್ ಚಂದ್ರಚೂಡ್ "ಆರೋಪಗಳಿಗೆ ಟಾರ್ಗೆಟ್ ಆಗುವುದು ನಮಗೆ ಬೇಕಿಲ್ಲ,'' ಎಂದಿದ್ದಾರೆ.

ಮೂಲಗಳ ಪ್ರಕಾರ ಇಬ್ಬರು ನ್ಯಾಯಾಧೀಶರಿಗೂ ಹಲವಾರು ಇಮೇಲ್‍ಗಳು ಬಂದಿದ್ದವೆನ್ನಲಾಗಿದ್ದು ಅದರಲ್ಲಿ ಅವರ ವಿರುದ್ಧ ಪಕ್ಷಪಾತದ ಆರೋಪ ಹೊರಿಸಲಾಗಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಈ ಇಬ್ಬರು ನ್ಯಾಯಾಧೀಶರೂ ತಮ್ಮ ರಾಜ್ಯಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳ ವಿಚಾರಣೆ ನಡೆಸಿದ್ದರೂ ನದಿ ನೀರು ವಿವಾದ ಬಹಳಷ್ಟು ಸೂಕ್ಷ್ಮವಾಗಿರುವುದರಿಂದ  ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ತಮ್ಮ ನಿರ್ಧಾರದಿಂದ ವಾಪಸ್ ಸರಿಯುವಂತೆ ಹಲವು ವಕೀಲರು ಮನವಿ ಮಾಡಿದ್ದರೂ ಇಬ್ಬರು ನ್ಯಾಯಾಧೀಶರು ತಮ್ಮ ನಿರ್ಧಾರಕ್ಕೆ ಅಚಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News