ಪೌರತ್ವ ತಿದ್ದುಪಡಿ ಕಾಯ್ದೆ ಅಡಿ ನಿಯಮ ರೂಪಿಸಲು ಇನ್ನಷ್ಟು ಸಮಯ ಕೋರಿದ ಕೇಂದ್ರ ಗೃಹ ಸಚಿವಾಲಯ

Update: 2022-01-11 13:53 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅಡಿಯಲ್ಲಿ ನಿಯಮಗಳನ್ನು ರೂಪಿಸಲು ಹೆಚ್ಚಿನ ಸಮಯ ಕೋರಿ ಕೇಂದ್ರ ಗೃಹ ಸಚಿವಾಲಯ ಸಂಸದೀಯ ಸಮಿತಿಗಳನ್ನು ಸಂಪರ್ಕಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ  ಎಂದು ವರದಿಯಾಗಿದೆ.

ಸಿಎಎ ಮೂಲಕ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ  ಅಫ್ಘಾನಿಸ್ತಾನದಿಂದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು ಕೇಂದ್ರ ಸರಕಾರ ಬಯಸುತ್ತಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಡಿಸೆಂಬರ್ 11, 2019 ರಂದು ಸಂಸತ್ತು ಅಂಗೀಕರಿಸಿತ್ತು ಹಾಗೂ ಮರುದಿನ ರಾಷ್ಟ್ರಪತಿಗಳ ಅನುಮೋದನೆಯನ್ನು ಸ್ವೀಕರಿಸಲಾಯಿತು. ನಂತರ, ಗೃಹ ಸಚಿವಾಲಯದಿಂದ ಅಧಿಸೂಚನೆ ನೀಡಲಾಯಿತು. ಆದಾಗ್ಯೂ, ಸಿಎಎ ಅಡಿಯಲ್ಲಿ ನಿಯಮಗಳನ್ನು ಇನ್ನಷ್ಟೇ ರೂಪಿಸಬೇಕಾಗಿರುವುದರಿಂದ ಕಾನೂನನ್ನು ಇನ್ನೂ ಜಾರಿಗೆ ತರಲಾಗಿಲ್ಲ.

ಸಂಸದೀಯ ಕಾರ್ಯದ ಕೈಪಿಡಿಯ ಪ್ರಕಾರ, ರಾಷ್ಟ್ರಪತಿಗಳ ಒಪ್ಪಿಗೆಯ ಆರು ತಿಂಗಳೊಳಗೆ ಯಾವುದೇ ಶಾಸನದ ನಿಯಮಗಳನ್ನು ರೂಪಿಸಿರಬೇಕು ಅಥವಾ ಅಧೀನ ಶಾಸನ, ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿಗಳಿಂದ ವಿಸ್ತರಣೆಯನ್ನು ಕೋರಬೇಕು.

ಸಿಎಎ ಜಾರಿಗೊಳಿಸಿದ ಆರು ತಿಂಗಳೊಳಗೆ ಗೃಹ ಸಚಿವಾಲಯವು ನಿಯಮಗಳನ್ನು ರೂಪಿಸಲು ಸಾಧ್ಯವಾಗದ ಕಾರಣ ಅದು ಸಮಿತಿಗಳಿಗೆ ಸಮಯವನ್ನು ಕೋರಿತು. ಮೊದಲು ಜೂನ್ 2020 ರಲ್ಲಿ ಸಮಯ ಕೋರಿತ್ತು. ಆ ನಂತರ ನಾಲ್ಕು ಬಾರಿ ಇದೇ ರೀತಿ ಮಾಡಿತ್ತು. ಇದೀಗ ಐದನೇ ವಿಸ್ತರಣೆ ಸೋಮವಾರ ಅಂತ್ಯಗೊಂಡಿದೆ.

"ನಾವು ಹೆಚ್ಚು ಸಮಯ ಕೋರಿ ಸಂಸದೀಯ ಸಮಿತಿಗಳನ್ನು ಸಂಪರ್ಕಿಸಿದ್ದೇವೆ. ನಾವು ವಿಸ್ತರಣೆಯನ್ನು ಪಡೆಯುತ್ತೇವೆಂಬ ವಿಶ್ವಾಸವಿದೆ" ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News