ಭಾರತದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಸಹನೆ: ಸಿಎಸ್‌ಡಿಎಸ್ ಅಧ್ಯಯನ ವರದಿ

Update: 2022-01-12 10:44 GMT

2020ರಲ್ಲಿ ಭಾರತದಲ್ಲಿ ಕೋಮು/ಧಾರ್ಮಿಕ ಗಲಭೆಯ 857 ಪ್ರಕರಣಗಳು ವರದಿಯಾಗಿದ್ದು 2019ರಲ್ಲಿ ದಾಖಲಾಗಿದ್ದ 438 ಪ್ರಕರಣಕ್ಕಿಂತ ಬಹುತೇಕ ದುಪ್ಪಟ್ಟಾಗಿದೆ. ಮುಂದಿನ 5 ವರ್ಷಗಳಲ್ಲಿ ಧಾರ್ಮಿಕ ಸಾಮರಸ್ಯ ಸುಧಾರಿಸಲಿದೆಯೇ ಅಥವಾ ಹದಗೆಡಲಿದೆಯೇ ಎನ್ನುವ ಪ್ರಶ್ನೆಗೆ ಕೇವಲ 19ಶೇ. ಹಿಂದೂಗಳು ಕೋಮು ಸೌಹಾರ್ದ ಹದಗೆಡಲಿದೆ ಎಂದು ಭಾವಿಸುವುದಾಗಿ ತಿಳಿಸಿದ್ದರೆ, ಶೇ.31 ಕ್ರಿಶ್ಚಿಯನ್ನರು, ಶೇ.33 ಸಿಖ್, ಶೇ.33 ಮುಸ್ಲಿಮರು ಧಾರ್ಮಿಕ ಸೌಹಾರ್ದ ಕುಸಿಯಲಿದೆ ಎಂದು ಭಾವಿಸುವುದಾಗಿ ಹೇಳಿದ್ದಾರೆ. ‘ಭಾರತೀಯ ಯುವಜನತೆ: ಆಕಾಂಕ್ಷೆಗಳು ಮತ್ತು ಭವಿಷ್ಯದ ದೃಷ್ಟಿ’ ಎಂಬ ಶೀರ್ಷಿಕೆಯ ವರದಿಯು ಈ ವರ್ಷದ ಜುಲೈ-ಆಗಸ್ಟ್‌ನಲ್ಲಿ 18 ರಾಜ್ಯಗಳಲ್ಲಿನ 18-34 ವಯೋಮಾನದವರನ್ನು ಒಳಗೊಂಡ ಸಮೀಕ್ಷೆಯನ್ನು ಆಧರಿಸಿದೆ. ಜರ್ಮನ್‌ನ ಚಿಂತಕರ ವೇದಿಕೆ ‘ಕೋನ್ರಾಡ್ ಅಡೆನಾರ್ ಸ್ಟಿಫಂಗ್ (ಕೆಎಎಸ್)’ನ ಸಹಯೋಗದಲ್ಲಿ ‘ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್(ಸಿಎಸ್‌ಡಿಎಸ್)ಯು ತನ್ನ ಸಂಶೋಧನಾ ಕಾರ್ಯಕ್ರಮ ‘ಲೋಕನೀತಿ’ಯಡಿ 2021ರಲ್ಲಿ ಈ ಸಮೀಕ್ಷಾ ಕಾರ್ಯ ನಡೆಸಿದೆ.

 ಸಮುದಾಯವು ಇತ್ತೀಚಿನ ವರ್ಷಗಳಲ್ಲಿ ತಾರತಮ್ಯ ಮತ್ತು ಹಿಂಸಾಚಾರದ ಒತ್ತಡಕ್ಕೆ ಒಳಗಾಗಿದೆ ಎಂಬ ಆಧಾರದ ಮೇಲೆ ಮುಸ್ಲಿಂ ಯುವಕರ ಆಳವಾದ ಅನಿಸಿಕೆಗೆ ಸಮೀಕ್ಷೆಯಲ್ಲಿ ಆದ್ಯತೆ ನೀಡಲಾಗಿತ್ತು. ಮುಸ್ಲಿಮ್ ಜನಸಂಖ್ಯೆಯ ರಾಷ್ಟ್ರೀಯ ಸರಾಸರಿ ಪ್ರಮಾಣ ಶೇ.14.23ಕ್ಕಿಂತ ಹೆಚ್ಚಿರುವ ರಾಜ್ಯಗಳಲ್ಲಿ ನೆಲೆಸಿರುವ ಮುಸ್ಲಿಮರಲ್ಲಿ ಧಾರ್ಮಿಕ ಸಹಬಾಳ್ವೆಯ ಬಗ್ಗೆ ಹತಾಶೆ ಹೆಚ್ಚಿದೆ. ಅಲ್ಲದೆ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಸಮುದಾಯಗಳ ಮಧ್ಯೆ ಸಂವಹನಕ್ಕೆ ಅವಕಾಶ ಹೆಚ್ಚಿರುವುದರಿಂದ ಈ ರಾಜ್ಯಗಳ ಮುಸ್ಲಿಮರು ತಾರತಮ್ಯದ ಬಗ್ಗೆ ಉಲ್ಲೇಖಿಸುವ ಸಾಧ್ಯತೆ ಹೆಚ್ಚು. ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಕೇರಳ ರಾಜ್ಯಗಳು ಧಾರ್ಮಿಕ ಸಾಮರಸ್ಯದ ಬಗ್ಗೆ ನಿರಾಶಾವಾದಿಗಳಾಗಿರುವ ಸಾಧ್ಯತೆ ಹೆಚ್ಚು ಎಂದು ವರದಿ ಹೇಳಿದೆ. ಈ ದೇಶಗಳಲ್ಲಿ ಒಟ್ಟು 35ಶೇ. ಮುಸ್ಲಿಮರು ಕೋಮು ಸೌಹಾರ್ದ ಹದಗೆಡಲಿದೆ ಎಂದಿದ್ದರೆ, ಮುಸ್ಲಿಮ್ ಜನಸಂಖ್ಯೆಯ ರಾಷ್ಟ್ರೀಯ ಸರಾಸರಿ ಪ್ರಮಾಣ ಕಡಿಮೆ ಇರುವ ರಾಜ್ಯಗಳಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸುವವರ ಪ್ರಮಾಣ ಶೇ.23 ಆಗಿದೆ.

ಧಾರ್ಮಿಕ ತಾರತಮ್ಯದ ಗ್ರಹಿಕೆ:

2011ರ ಗಣತಿಯ ಪ್ರಕಾರ, ಜನಸಂಖ್ಯೆಯ ಶೇ.80 ಹಿಂದೂಗಳಾಗಿದ್ದರೆ, ಮುಸ್ಲಿಮರು ಶೇ. 14.23, ಕ್ರಿಶ್ಚಿಯನ್ನರು ಶೇ. 2.3, ಸಿಖ್ ಶೇ.1.72 ಇದ್ದಾರೆ. ಸಮೀಕ್ಷೆಗೆ ಒಳಪಟ್ಟ ಅಲ್ಪಸಂಖ್ಯಾತರಲ್ಲಿ ಮುಸ್ಲಿಮರು ತಮ್ಮ ಸ್ನೇಹಿತರಿಂದ ಅಡಿಗಡಿಗೆ ತಾರತಮ್ಯವನ್ನು ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ಸ್ನೇಹಿತರಿಂದ ತಾರತಮ್ಯ ಎದುರಿಸುತ್ತಿರುವುದಾಗಿ ಶೇ.44 ಮುಸ್ಲಿಮರು ಹೇಳಿದರೆ, ಪದೇ ಪದೇ ಎದುರಿಸುತ್ತಿರುವುದಾಗಿ ಶೇ.13 ಮಂದಿ, ಕೆಲವೊಮ್ಮೆ ಮಾತ್ರ ಎಂದು ಶೇ.31 ಮುಸ್ಲಿಮರು ಹೇಳಿದ್ದಾರೆ. ಕೇವಲ ಶೇ.18 ಕ್ರಿಶ್ಚಿಯನ್ನರು(ಪದೇ ಪದೇ ಎಂದು ಶೇ.4, ಕೆಲವೊಮ್ಮೆ ಮಾತ್ರ ಎಂದು ಶೇ.14), ಶೇ.8 ಸಿಖ್(ಪದೇ ಪದೇ ಎಂದು ಶೇ.3, ಕೆಲವೊಮ್ಮೆ ಮಾತ್ರ ಎಂದು ಶೇ.5) ಈ ರೀತಿಯ ತಾರತಮ್ಯದ ಬಗ್ಗೆ ಉಲ್ಲೇಖಿಸಿದ್ದಾರೆ. ಧರ್ಮದ ಆಧಾರದಲ್ಲಿ ತಾರತಮ್ಯವನ್ನು ಯಾವತ್ತೂ ಎದುರಿಸಿಲ್ಲ ಎಂದು ಸರಾಸರಿ 70ಶೇ. ಮಂದಿ ಹೇಳಿದ್ದರೆ, ಹೀಗೆ ಉತ್ತರಿಸಿದ ಮುಸ್ಲಿಮರ ಪ್ರಮಾಣ ಕೇವಲ 49ಶೇ. ಮಾತ್ರ.

 ಇಲ್ಲಿ ಕುತೂಹಲಕಾರಿ ವಿಷಯವೆಂದರೆ, ವಿವಿಧ ಧಾರ್ಮಿಕ ಅಲ್ಪಸಂಖ್ಯಾತ ಯುವಜನರಲ್ಲಿ ಧಾರ್ಮಿಕ ಸೌಹಾರ್ದದ ವಿಷಯದಲ್ಲಿ ಒಂದು ರೀತಿಯ ಏಕಾಭಿಪ್ರಾಯವಿತ್ತು. ಆದರೆ ಮುಸ್ಲಿಮರಲ್ಲಿ ಭಿನ್ನಾಭಿಪ್ರಾಯವಿತ್ತು. ಮುಸ್ಲಿಮರು ಮೊದಲಿಗಿಂತ ಕಡಿಮೆ ಧಾರ್ಮಿಕತೆಯನ್ನು ತೋರುತ್ತಿರುವುದು ಪ್ರತಿ-ಅರ್ಥಗರ್ಭಿತವಾಗಿರುವ ಸಾಧ್ಯತೆಯಿದೆ. ದ್ವೇಷ, ತಾರತಮ್ಯ, ಹಿಂಸೆಯ ಗುರಿಯಾಗಿರುವುದರಿಂದ ಮುಸ್ಲಿಮರು ತಮ್ಮ ಧರ್ಮದ ಕಡೆ ತಿರುಗಲು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಬಹುದು. ತಮ್ಮ ಧಾರ್ಮಿಕ ಆಚರಣೆಗಳನ್ನು ಬಹಿರಂಗಗೊಳಿಸಲು ಸಮೀಕ್ಷೆಯಲ್ಲಿ ಪಾಲ್ಗೊಂಡ ಕೆಲವು ಮುಸ್ಲಿಮರು ಇಚ್ಛಿಸದೆ ಇರುವ ಸಾಧ್ಯತೆಯೂ ಇದೆ ಎಂದು ವರದಿ ಹೇಳಿದೆ.

5 ವರ್ಷದ ಅವಧಿಯಲ್ಲಿ ಗರಿಷ್ಠದಿಂದ ಕನಿಷ್ಠಕ್ಕೆ:

2016ರಲ್ಲಿ ಸಿಎಸ್‌ಡಿಎಸ್ ನಡೆಸಿದ ಅಧ್ಯಯನದಲ್ಲಿ ಇತರ ಯಾವುದೇ ವರ್ಗಗಳಿಗಿಂತ ಮುಸ್ಲಿಮರು ಹೆಚ್ಚು ಧಾರ್ಮಿಕತೆಯನ್ನು ಹೊಂದಿರುವುದಾಗಿ ಸ್ಪಷ್ಟವಾಗಿತ್ತು. ಆ ವರ್ಷ ಶೇ.97 ಮುಸ್ಲಿಮರು ತಾವು ದಿನಾ ಪ್ರಾರ್ಥನೆ ಸಲ್ಲಿಸುತ್ತಿರು ವುದಾಗಿ ಹೇಳಿದ್ದರೆ, ಹಿಂದೂಗಳಲ್ಲಿ ಈ ಪ್ರಮಾಣ ಶೇ.92, ಸಿಖ್‌ರಲ್ಲಿ ಶೇ.92 ಮತ್ತು ಕ್ರಿಶ್ಚಿಯನ್ನರಲ್ಲಿ ಶೇ.91 ಆಗಿತ್ತು. ಆದರೆ 2021ರ ಸಮೀಕ್ಷೆ ಸಂದರ್ಭ ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸುವ ಮುಸ್ಲಿಮ್ ಯುವಜನರ ಪ್ರಮಾಣ ಕೇವಲ 86ಶೇ. ಆಗಿದ್ದು ಇದು ಹಿಂದಿನ 5 ವರ್ಷಕ್ಕಿಂತ 11ಶೇ. ಕಡಿಮೆಯಾಗಿದೆ. ಆದರೆ ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸುವ ಯುವಜನರ ಪ್ರಮಾಣ ಸಿಖ್ ಸಮುದಾಯದಲ್ಲಿ ಶೇ.96 ಮತ್ತು ಕ್ರಿಶ್ಚಿಯನ್ನರಲ್ಲಿ ಶೇ.93ಕ್ಕೆ ಏರಿದ್ದರೆ ಹಿಂದೂಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ(88ಶೇ.)ಯಾಗಿತ್ತು. ಇದೇ ರೀತಿ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮುಸ್ಲಿಮ್ ಯುವಜನರ ಪ್ರಮಾಣದಲ್ಲೂ ತೀವ್ರ ಕುಸಿತ ಕಂಡುಬಂದಿದೆ.

2016ರಲ್ಲಿ ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇ.85 ಮುಸ್ಲಿಮರು ಪ್ರಾರ್ಥನಾ ಕೇಂದ್ರಗಳಿಗೆ ಭೇಟಿ ನೀಡುವುದಾಗಿ(ವಿವಿಧ ಆವರ್ತನಗಳಲ್ಲಿ) ಹೇಳಿದ್ದರೆ, 2021ರಲ್ಲಿ ಕೇವಲ ಶೇ.79 ಮಾತ್ರ ಈ ಉತ್ತರ ನೀಡಿದ್ದಾರೆ. ಇತರ ಧರ್ಮಗಳಲ್ಲೂ ಇಳಿಕೆ ದಾಖಲಾಗಿದ್ದರೂ ಮುಸ್ಲಿಮರಲ್ಲಿ ಗರಿಷ್ಠವಾಗಿದೆ. ಪ್ರಾರ್ಥನಾ ಕೇಂದ್ರಗಳಿಗೆ ಭೇಟಿ ನೀಡುವ ಪ್ರಮಾಣ ಮುಸ್ಲಿಮರಲ್ಲಿ ಶೇ.6 ಇಳಿಕೆಯಾಗಿದ್ದರೆ ಹಿಂದೂಗಳಲ್ಲಿ ಶೇ.4 (ಶೇ.92 ಇದ್ದುದು ಶೇ.88ಕ್ಕೆ), ಕ್ರಿಶ್ಚಿಯನ್ನರಲ್ಲಿ ಶೇ.2 (ಶೇ.91ರಿಂದ ಶೇ.89), ಸಿಖ್ಖರಲ್ಲಿ ಶೇ.1 (ಶೇ.97ರಿಂದ ಶೇ.96) ಇಳಿಕೆಯಾಗಿದೆ.

ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಿಕೆಯ ಸ್ವಯಂ ಅರಿವು:

ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಒಟ್ಟು ಶೇ.19 ಮಂದಿ ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಿಕೆ ಹೆಚ್ಚಳವಾಗಿದೆ ಎಂದರೆ, ಶೇ.17 ಮಂದಿ ಇಳಿಕೆಯಾಗಿದೆ ಎಂದಿದ್ದಾರೆ. ಶೇ.57 ಮಂದಿ ಯಾವುದೇ ಬದಲಾವಣೆ ಇಲ್ಲ ಎಂದರೆ, ಶೇ.7 ಮಂದಿ ಯಾವುದೇ ಪ್ರತ್ರಿಕ್ರಿಯೆ ನೀಡಿಲ್ಲ. ಇಲ್ಲಿ ಕೂಡಾ, ಇತರ ಧರ್ಮೀಯರಿಗಿಂತ ಮುಸ್ಲಿಮರಲ್ಲಿ ಧಾರ್ಮಿಕ ಚಟುವಟಿಕೆಯ ಬಗ್ಗೆ ಅರಿವಿನ ಪ್ರಮಾಣ ತೀವ್ರ ಕುಸಿತಗೊಂಡಿದೆ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ಶೇ.18, ಕಡಿಮೆಯಾಗಿದೆ ಎಂದು ಶೇ.20 ಮುಸ್ಲಿಮ್ ಯುವಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಅನುಪಾತ ಸಿಖ್ ಮತ್ತು ಕ್ರಿಶ್ಚಿಯನ್‌ರಲ್ಲಿ ಕ್ರಮವಾಗಿ ಶೇ.25 ಮತ್ತು ಶೇ.13 ಆಗಿದೆ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿರುವ ಹಿಂದೂಗಳ ಸಂಖ್ಯೆ ಸುಮಾರು ಶೇ.20 ಆಗಿದ್ದರೆ, ಕಡಿಮೆಯಾಗಿರುವ ಹಿಂದೂಗಳ ಸಂಖ್ಯೆ ಶೇ.16 ಆಗಿದೆ.

ಕೃಪೆ: theprint.in

Writer - ನಿಖಿಲ್ ರಾಂಪಾಲ್

contributor

Editor - ನಿಖಿಲ್ ರಾಂಪಾಲ್

contributor

Similar News