ಕಳವು ಪ್ರಕರಣ; 9 ಲಕ್ಷ ಮೌಲ್ಯದ ಮಾಲು ಜಪ್ತಿ ಮಾಡಿದ ರಾಜರಾಜೇಶ್ವರಿ ನಗರ ಪೊಲೀಸರು

Update: 2022-01-12 13:22 GMT

ಬೆಂಗಳೂರು, ಜ.12: ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿರುವ ರಾಜರಾಜೇಶ್ವರಿ ನಗರ ಪೊಲೀಸರು 9 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.

ಜೆಪಿ ನಗರದ ಹೇಮಂತ್ ಕುಮಾರ್ ಹಾಗೂ ಮಂಜುನಾಥ್ ಬಂಧಿತ ಆರೋಪಿಗಳಾಗಿದ್ದು, ಅವರಿಂದ 9 ಲಕ್ಷ ಮೌಲ್ಯದ 48 ಗ್ರಾಂ ಚಿನ್ನ, 5 ದ್ವಿಚಕ್ರ ವಾಹನಗಳು, ಕಾರು, ಆಟೊವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳನ್ನು ಕಳವು ಮಾಡಿ ಅವುಗಳಲ್ಲಿ ಸಂಚರಿಸುತ್ತ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ರಾಜರಾಜೇಶ್ವರಿ ನಗರದ ಬೀಗ ಹಾಕಿದ ಮನೆಯೊಂದಕ್ಕೆ ನುಗ್ಗಿ ನಗದು, ಚಿನ್ನಾಭರಣ ಕಳ್ಳತನ ಮಾಡಿದ ಕೃತ್ಯವನ್ನು ದಾಖಲಿಸಿ ಕಾರ್ಯಾಚರಣೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳ ಬಂಧನದಿಂದ ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಕೆಜಿ ನಗರ, ಸುಬ್ರಮಣ್ಯಪುರ ಹಾಗೂ ಕೋರಮಂಗಲ ಠಾಣಾ ವ್ಯಾಪ್ತಿಯ ಕನ್ನಗಳವು, ದ್ವಿ ಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News