ಗೌಸಿಯಾ ಪಾಲಿಟೆಕ್ನಿಕ್‍ ನ 70 ಜನ ನೌಕರರಿಗೆ ವಂಚನೆ ಆರೋಪ: ಎಫ್‍ಐಆರ್ ದಾಖಲು

Update: 2022-01-12 14:30 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.12:  ಗೌಸಿಯಾ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಗೌಸಿಯಾ ಪಾಲಿಟೆಕ್ನಿಕ್ ಫಾರ್ ವುಮೆನ್ ಕಾಲೇಜಿನಲ್ಲಿ ನೌಕರರಿಗೆ 78 ಲಕ್ಷ ರೂ.ವಂಚಿಸಿರುವ ಆರೋಪದ ಕುರಿತು ಬೆಂಗಳೂರು ನಗರ ಆರನೇ ಎಸಿಎಂಎಂ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಾಗಿದೆ. 

ಗೌಸಿಯಾ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಟ್ರಸ್ಟ್ ಚೇರ್ಮನ್ ಡಾ.ಅಹ್ಮದ್ ಶರೀಫ್ ಸಿರಾಜ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸುದ್ದುಗುಂಟೆ ಪಾಳ್ಯ ಠಾಣಾ ಪೊಲೀಸರು, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಭಾನ್ ಶರೀಫ್ ವಿರುದ್ಧ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲು ಮಾಡಿದ್ದಾರೆ.

ಗೌಸಿಯಾ ಪಾಲಿಟೆಕ್ನಿಕ್ ಫಾರ್ ವುಮೆನ್ ಕಾಲೇಜಿನಲ್ಲಿ ಈ ಹಿಂದೆ 2013 ರಿಂದ 2018ರವರೆಗೆ ಗೌವರ್ನಿಂಗ್ ಕೌನ್ಸಿಲ್ ಚೇರ್ಮನ್ ಆದ ಸುಭಾನ್ ಶರೀಫ್ ಕಾಲೇಜನ್ನು ಸರಕಾರದ ಅನುದಾನಿತ ಕಾಲೇಜ್ ಆಗಿ ಸರಕಾರದಿಂದ ಅನುಮೋದನೆ ಪಡೆದು, ಇಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸರಕಾರದಿಂದ ಸಂಬಳ ಬರುತ್ತದೆ ಎಂದು ಸುಳ್ಳು ಹೇಳಿ, 2013 ರಿಂದ 2016ರವರೆಗೆ ನೌಕರರಿಗೆ ಸಂಬಳ ಕೊಟಿಲ್ಲ ಎಂದು ಅಹ್ಮದ್ ಶರೀಫ್ ಸಿರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಸಂಸ್ಥೆಯು ಅನುದಾನಿತ ಸಂಸ್ಥೆಯಾಗುತ್ತಿದ್ದು, ಇದರಿಂದ ನಿಮಗೆ ಸರಕಾರದಿಂದ ಸಂಬಳ ಕೊಡಿಸುತ್ತೇನೆ ಎಂದು ನಂಬಿಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 70 ಜನ ನೌಕರರ ಬಳಿ ಸುಮಾರು 78 ಲಕ್ಷ ರೂ.ಅಕ್ರಮವಾಗಿ ಹಣ ಸಂಗ್ರಹಿಸಿರುವ ಸುಭಾನ್ ಶರೀಫ್ ಅದನ್ನು ಸ್ವಂತಕ್ಕೆ ಉಪಯೋಗಿಸಿಕೊಂಡು ನೌಕರರಿಗೆ ಮೋಸ ಮಾಡಿ, ಸಂಸ್ಥೆಗೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ನೌಕರರು ಹಣ ವಾಪಸ್ ಕೊಡುವಂತೆ ಕೇಳಲು ಹೋದರೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಆದುದರಿಂದ, ಆತನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಅಹ್ಮದ್ ಶರೀಫ್ ಸಿರಾಜ್ ದೂರಿನಲ್ಲಿ ಕೋರಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸುದ್ದುಗುಂಟೆ ಪಾಳ್ಯ ಠಾಣಾ ಪೊಲೀಸರು, ಬೆಂಗಳೂರು ನಗರದ ಆರನೆ ಎಸಿಎಂಎಂ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.
 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News