×
Ad

ಮಂಗಳೂರು : ಪೊಲೀಸ್ ಆಯುಕ್ತರಿಂದ ಶಹಬ್ಬಾಶ್, ತಂಡಕ್ಕೆ ಬಹುಮಾನ

Update: 2022-01-13 21:17 IST

ಮಂಗಳೂರು, ಜ.13: ನಗರದ ಪೊಲೀಸ್ ಕಮಿಷನರೇಟ್ ಕಚೇರಿಯ ಅಧಿಕಾರಿ ಹಾಗೂ ಅವರ ತಂಡ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಕಳವು ಆರೋಪಿಯನ್ನು ಹಿಡಿದ ಘಟನೆಯೊಂದು ಮಂಗಳೂರಿನಲ್ಲಿ ಬುಧವಾರ ನಡೆದಿದೆ.

ಮಂಗಳೂರು ನಗರದ ಹೃದಯ ಭಾಗದ ಸ್ಟೇಟ್‌ಬ್ಯಾಂಕ್ ಬಳಿ ಬುಧವಾರ ಈ ಘಟನೆ ನಡೆದಿದ್ದು, ಈ ಮೂಲಕ ನಗರದ ಪ್ರಮುಖ ಸ್ಥಳಗಳಲ್ಲಿ ಪಿಕ್ ಪಾಕೆಟ್, ಮೊಬೈಲ್ ಕಳ್ಳತನ ನಡೆಸುತ್ತಿದ್ದ ತಂಡವೊಂದನ್ನು ಬೇಧಿಸಿದಂತಾಗಿದೆ.

ಬಂಧಿತರನ್ನು ಮಂಗಳೂರು ಹೊರವಲಯದ ನಿರುಮಾರ್ಗ ನಿವಾಸಿ ಹರೀಶ್ ಪೂಜಾರಿ ಹಾಗೂ ಅತ್ತಾವರ ನಿವಾಸಿ ಶಮಂತ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ತಪ್ಪಿಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ದಾರಿ ಮಧ್ಯೆ ಕಾರ್ಯಾಚರಣೆ ನಡೆಸಿ ಬೆನ್ನಟ್ಟಿ ಓರ್ವನನ್ನು ಹಿಡಿಯುವಲ್ಲಿ ಸಮಯ ಹಾಗೂ ಕರ್ತವ್ಯ ಪ್ರಜ್ಞೆ ಮೆರೆದ ಎಎಸ್‌ಐ ವರುಣ್ ಹಾಗೂ ಅವರ ತಂಡವನ್ನು ಅಭಿನಂದಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ತಂಡಕ್ಕೆ 10,000 ರೂ. ನಗದು ಬಹುಮಾನ ಘೋಷಿಸಿದ್ದಾರೆ.

ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಂಡವೊಂದು ನೆಹರೂ ಮೈದಾನ ಹಾಗೂ ಸುತ್ತಮುತ್ತ ಜನ ಮಲಗಿರುವ ಸಂದರ್ಭದಲ್ಲಿ ಹಾಗೂ ನಿರ್ಜನ ಪ್ರದೇಶದಲ್ಲಿ ಪಿಕ್ ಪಾಕೆಟ್, ಮೊಬೈಲ್ ಕಳ್ಳತನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಬಳಿಕ ಕಾರ್ಯಾಚರಣೆ ಮೂಲಕ ಇನ್ನೊಬ್ಬ ಆರೋಪಿಯನ್ನು 10 ನಿಮಿಷಗಳ ಅವಧಿಯಲ್ಲೇ ಬಂಧಿಸುವಲ್ಲಿ ಎಎಸ್‌ಐ ಸಮಯ ಪ್ರಜ್ಞೆ ಮೆರೆದಿದ್ದಾರೆ. ಅವರ ಜತೆ ಅಲ್ಲಿದ್ದ ಆಟೋ ಡ್ರೈವರ್ ಕೂಡಾ ಸಹಕಾರ ನೀಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News