ದುಬೈಯಿಂದ ಭಾರತಕ್ಕೆ ಹೊರಟಿದ್ದ ಎರಡು ವಿಮಾನಗಳು ಒಂದೇ ರನ್‌-ವೇನಲ್ಲಿ: ಕೂದಲೆಳೆ ಅಂತರದಿಂದ ತಪ್ಪಿದ ದುರಂತ

Update: 2022-01-14 11:17 GMT
Photo: Twitter

ಹೊಸದಿಲ್ಲಿ: ದುಬೈ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಹೊರಟಿದ್ದ ಎರಡು ವಿಮಾನಗಳು ಒಂದೇ ರನ್-ವೇಯಲ್ಲಿದ್ದುದರಿಂದ ಟೇಕ್-ಆಫ್ ವೇಳೆ ಯಾವುದೇ ದೊಡ್ಡ ಅವಘಡ ನಡೆಯದೆ ನೂರಾರು ಜೀವಗಳು ಉಳಿದಿವೆ ಎಂದು ತಿಳಿದು ಬಂದಿದೆ.

ದುಬೈಯಿಂದ ಹೈದರಾಬಾದ್‌ಗೆ ಒಂದು ಎಮಿರೇಟ್ಸ್ ವಿಮಾನ ರವಿವಾರ ರಾತ್ರಿ 9.45ಕ್ಕೆ ನಿರ್ಗಮಿಸಲಿದ್ದರೆ, ಬೆಂಗಳೂರಿಗೆ ಹೊರಟಿದ್ದ ಒಂದು ವಿಮಾನ ಕೂಡ ಸರಿಸುಮಾರು ಅದೇ ಸಮಯಕ್ಕೆ ಹಾರಾಟ ನಡೆಸಲು ಸಿದ್ಧವಾಗಿತ್ತು. ಐದು ನಿಮಿಷಗಳ ಅಂತರದಲ್ಲಿ ಈ ಎರಡೂ ವಿಮಾನಗಳು ಹಾರಾಟ ನಡೆಸಬೇಕಿತ್ತು.

ಆದರೆ ಎರಡೂ ವಿಮಾನಗಳು ಒಂದೇ ರನ್-ವೇ (30ಆರ್) ನಲ್ಲಿದ್ದವು. ಹೈದರಾಬಾದ್‌ಗೆ ಹೊರಟಿದ್ದ ವಿಮಾನವು ಟೇಕ್-ಆಫ್‌ಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ಅದೇ ದಿಕ್ಕಿನಲ್ಲಿ ಭಾರೀ ವೇಗದಲ್ಲಿ ಇನ್ನೊಂದು ವಿಮಾನ ಬರುತ್ತಿರುವುದನ್ನು ಸಿಬ್ಬಂದಿ ಗಮನಿಸಿದ್ದರು. ಕೂಡಲೇ ಎಟಿಸಿಯಿಂದ ಟೇಕ್-ಆಫ್ ಮಾಡದಂತೆ ಹೈದರಾಬಾದ್‌ಗೆ ಹೊರಟಿದ್ದ ವಿಮಾನಕ್ಕೆ ಸೂಚನೆ ಲಭಿಸಿತು. ತಕ್ಷಣ ವಿಮಾನದ ವೇಗ ಕಡಿಮೆಗೊಳಿಸಲಾಯಿತು ಹಾಗೂ ವಿಮಾನವು ಟ್ಯಾಕ್ಸಿವೇ ಎನ್4 ಮೂಲಕ ದೂರ ಸರಿಯಿತು.

ಬೆಂಗಳೂರಿಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ನಂತರ ಮೊದಲು ಟೇಕ್ ಆಫ್ ಮಾಡಿದರೆ ಹೈದರಾಬಾದ್‌ಗೆ ಹೊರಟ ವಿಮಾನ ಐದು ನಿಮಿಷದ ನಂತರ ನಿರ್ಗಮಿಸಿದೆ.

ಈ ನಿರ್ವಹಣಾ ಲೋಪ ಸಾಕಷ್ಟು ಚರ್ಚೆಗೀಡಾಗಿದ್ದು ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಲಗಳಿಂದ ತಿಳಿದು ಬಂದಂತೆ ಹೈದರಾಬಾದ್‌ಗೆ ಹೊರಟಿದ್ದ ವಿಮಾನವು ಎಟಿಸಿ ಕ್ಲಿಯರೆನ್ಸ್ ಇಲ್ಲದೆ ಟೇಕ್ ಆಫ್‌ಗೆ ಸಿದ್ಧಗೊಂಡಿತ್ತು ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News