ಪ್ರಧಾನಿಯ 'ನಿಂದನೆಗೈದ' ಹಣ್ಣು ಮಾರಾಟಗಾರನಿಗೆ ಥಳಿಸಿದ ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

Update: 2022-01-14 12:37 GMT

ಚೆನ್ನೈ: ಪ್ರಧಾನಿಯ ಪಂಜಾಬ್ ಭೇಟಿ ವೇಳೆ ಸಂಭವಿಸಿದ ಭದ್ರತಾ ಲೋಪವನ್ನು ಖಂಡಿಸಿ ಬಿಜೆಪಿಯು ಪಲ್ಲದಂ ಎಂಬಲ್ಲಿ ಬುಧವಾರ ಆಯೋಜಿಸಿದ್ದ ಮಾನವ ಸರಪಳಿ ಪ್ರತಿಭಟನೆ ವೇಳೆ ಪ್ರಧಾನಿಯ ವಿರುದ್ಧ ನಿಂದನಾತ್ಮಕ ಮಾತುಗಳನ್ನು ಆಡಿದ್ದಾನೆಂದು ಆರೋಪಿಸಿ ಹಣ್ಣು ಮಾರಾಟಗಾರನೊಬ್ಬನಿಗೆ ಥಳಿಸಿದ ಪ್ರಕರಣದಲ್ಲಿ ಪೊಲೀಸರು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಇತರ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಂಧಿತರನ್ನು ಬಿಜೆಪಿ ಯುವ ಘಟಕದ ಪದಾಧಿಕಾರಿ ರಮೇಶ್ ಹಾಗೂ  ಪಲ್ಲದಂ ಘಟಕದ ಉಸ್ತುವಾರಿ ರಾಜಕುಮಾರ್ ಎಂದು ಗುರುತಿಸಲಾಗಿದೆ. ಅವರು ಇತರ ಆರೋಪಿಗಳೊಂದಿಗೆ ಮುತ್ತುಸ್ವಾಮಿ ಎಂಬ ಹಣ್ಣು ಮಾರಾಟಗಾರನಿಗೆ ಥಳಿಸಿದ್ದಾರೆಂದು ದೂರಲಾಗಿದೆ.

ಘಟನೆಯ ವೀಡಿಯೋ ವೈರಲ್ ಆಗಿದೆ. ಮುತ್ತುಸ್ವಾಮಿಗೆ ಆರೋಪಿಗಳು ಥಳಿಸುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಪೊಲೀಸರು ಆತನನ್ನು ಹತ್ತಿರದ ಮೊಬೈಲ್ ಅಂಗಡಿಗೆ ಕರೆದೊಯ್ದರೂ ಆರೋಪಿಗಳು ಅಲ್ಲಿಗೂ ನುಗ್ಗಿ ಆತನಿಗೆ ಥಳಿಸಿದ್ದಾರೆ.

ತನ್ನಿಂದ ಖರೀದಿಸಿದ ಹಣ್ಣುಗಳಿಗೆ ಹಣ ನೀಡಲು ಆರೋಪಿಗಳು ನಿರಾಕರಿಸಿದ ನಂತರ ಜಗಳ ನಡೆಯಿತು ಎಂದು ಸಂತ್ರಸ್ತ ತಿಳಿಸಿದ್ದಾನೆ.

ಹಣ್ಣು ಮಾರಾಟಗಾರನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಕೆಲ ವರದಿಗಳು ತಿಳಿಸಿವೆಯಾದರೂ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News