ಪಾಕಿಸ್ತಾನ: ಪ್ರಪ್ರಥಮ ರಾಷ್ಟ್ರೀಯ ಭದ್ರತಾ ಕಾರ್ಯನೀತಿಗೆ ಚಾಲನೆ

Update: 2022-01-14 18:11 GMT

ಇಸ್ಲಮಾಬಾದ್, ಜ.14: ನಾಗರಿಕ ಕೇಂದ್ರಿತ ಚೌಕಟ್ಟನ್ನು ಹೊಂದಿರುವ, ಆರ್ಥಿಕ ಭದ್ರತೆಗೆ ಆದ್ಯತೆ ನೀಡುವ ಪಾಕಿಸ್ತಾನದ ಪ್ರಪ್ರಥಮ ರಾಷ್ಟ್ರೀಯ ಭದ್ರತಾ ಕಾರ್ಯನೀತಿಗೆ ಶುಕ್ರವಾರ ಪ್ರಧಾನಿ ಇಮ್ರಾನ್ ಖಾನ್ ಚಾಲನೆ ನೀಡಿದ್ದಾರೆ.

ಈ ಹಿಂದಿನ ಸರಕಾರಗಳು ಪಾಕಿಸ್ತಾನದ ಅರ್ಥವ್ಯವಸ್ಥೆಯನ್ನು ಬಲಪಡಿಸಲು ವಿಫಲವಾಗಿವೆ. ಆದರೆ ಈ ಸರಕಾರ ರೂಪಿಸಿರುವ ಹೊಸ ರಾಷ್ಟ್ರೀಯ ಭದ್ರತಾ ಕಾರ್ಯನೀತಿಯಲ್ಲಿ ಆರ್ಥಿಕ ಭದ್ರತೆಗೆ ಪ್ರಾಧಾನ್ಯ ನೀಡಲಾಗಿದೆ. ಬಲಿಷ್ಟ ಆರ್ಥಿಕತೆಯು ಸೃಷ್ಟಿಸುವ ಹೆಚ್ಚುವರಿ ಸಂಪನ್ಮೂಲವು ಮಿಲಿಟರಿ ಮತ್ತು ನಾಗರಿಕ ಭದ್ರತೆಗೆ ನೆರವಾಗಲಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
 
ಪಾಕಿಸ್ತಾನ ವಿಕಸನಗೊಂಡಂದಿನಿಂದ ಸೇನೆಯನ್ನು ಕೇಂದ್ರೀಕರಿಸಿದ ಏಕ ಆಯಾಮದ ಭದ್ರತಾ ಕಾರ್ಯನೀತಿಯನ್ನು ಹೊಂದಿದೆ. ಆದರೆ ಇದೇ ಮೊದಲ ಬಾರಿಗೆ, ರಾಷ್ಟ್ರೀಯ ಭದ್ರತಾ ವಿಭಾಗವು ರಾಷ್ಟ್ರೀಯ ಭದ್ರತೆಯನ್ನು ಸೂಕ್ತ ರೀತಿಯಲ್ಲಿ ವ್ಯಾಖ್ಯಾನಿಸುವ ಒಮ್ಮತದ ಕಾರ್ಯನೀತಿಯನ್ನು ಅಭಿವೃದ್ಧಿಪಡಿಸಿದೆ ಎಂದವರು ಹೇಳಿದ್ದಾರೆ. ಈ ಕಾರ್ಯನೀತಿಗೆ ಕಳೆದ ತಿಂಗಳು ರಾಷ್ಟೀಯ ಭದ್ರತಾ ಸಮಿತಿ ಮತ್ತು ಸಚಿವ ಸಂಪುಟ ಪ್ರತ್ಯೇಕವಾಗಿ ಅನುಮೋದನೆ ನೀಡಿದೆ.
   
ಜನತೆ ದೇಶದ ಹಿತಾಸಕ್ತಿಗಾಗಿ ಮುಂದೆ ಬರುವುದೇ ನಮ್ಮ ಅತೀ ದೊಡ್ಡ ಭದ್ರತೆಯಾಗಿದೆ ಮತ್ತು ಇದನ್ನು ಅಂತರ್ಗತ ಬೆಳವಣಿಗೆಯ ಮೂಲಕ ಸಾಧಿಸಬಹುದಾಗಿದೆ. ನಾವು ರಾಷ್ಟ್ರವಾಗಿ ಅಭಿವೃದ್ಧಿ ಹೊಂದಬೇಕೇ ಹೊರತು ಪಂಗಡಗಳಾಗಿ ಅಲ್ಲ ಎಂದು ಇಮ್ರಾನ್ ಖಾನ್ ಹೇಳಿದರು. ರಾಷ್ಟ್ರೀಯ ಒಗ್ಗಟ್ಟು, ಆರ್ಥಿಕ ವಿಷಯವನ್ನು ಭದ್ರಪಡಿಸುವುದು, ರಕ್ಷಣೆ ಮತ್ತು ಪ್ರಾದೇಶಿಕ ಸಮಗ್ರತೆ, ಆಂತರಿಕ ಭದ್ರತೆ, ಬದಲಾಗುತ್ತಿರುವ ಜಗತ್ತಿನಲ್ಲಿ ವಿದೇಶಾಂಗ ನೀತಿ ಮತ್ತು ಮಾನವ ಭದ್ರತೆ ರಾಷ್ಟ್ರೀಯ ಭದ್ರತಾ ನೀತಿಯ ಮುಖ್ಯ ವಿಷಯಗಳು ಎಂದು ಇಮ್ರಾನ್ ಖಾನ್ ಮಾಹಿತಿ ನೀಡಿದ್ದಾರೆ.

ಭಾರತದ ಬೆದರಿಕೆ

ಕಾರ್ಯನೀತಿಯ ವಿದೇಶಿ ವಿಭಾಗದಲ್ಲಿ ‘ತಪ್ಪು ಮಾಹಿತಿ, ಹಿಂದುತ್ವ ಮತ್ತು ದೇಶೀಯ ಲಾಭಕ್ಕಾಗಿ ಆಕ್ರಮಣಶೀಲತೆಯ ಬಳಕೆ ಭಾರತದಿಂದ ಎದುರಾಗಲಿರುವ ಪ್ರಮುಖ ಬೆದರಿಕೆಯಾಗಿದೆ’ ಎಂದು ಉಲ್ಲೇಖಿಸಿರುವುದಾಗಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
  
‘ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿ ಜಮ್ಮು-ಕಾಶ್ಮೀರ ಪ್ರಮುಖ ವಿಷಯವಾಗಿದೆ. ಸರಿಯಾದುದನ್ನೇ ಮಾಡಿ ಮತ್ತು ನಮ್ಮ ಜನತೆಯ ಅಭಿವೃದ್ಧಿಗೆ ನೆರವಾಗಲು ಪ್ರಾದೇಶಿಕ ಸಂಪರ್ಕದ ಪ್ರಯೋಜನ ಪಡೆಯಿರಿ. ನೀವು ಸರಿಯಾದ ಕೆಲಸವನ್ನು ಮಾಡಲು ಬಯಸದಿದ್ದರೆ ಅದರಿಂದ ಇಡೀ ವಲಯಕ್ಕೆ ನಷ್ಟವಾಗುತ್ತದೆ’  ಎಂಬ ಸಂದೇಶವನ್ನು ಭಾರತಕ್ಕೆ ಈ ಕಾರ್ಯನೀತಿ ನೀಡುತ್ತದೆ’  ಎಂಬ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಅವರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News