ಪೊಲೀಸರ ಸೋಗಿನಲ್ಲಿ ಮಗುವಿನ ಅಪಹರಣ ಪ್ರಕರಣ: ಐವರು ಆರೋಪಿಗಳ ಬಂಧನ

Update: 2022-01-15 18:33 GMT

ಬೆಂಗಳೂರು, ಜ.15: ಪೊಲೀಸರ ಸೋಗಿನಲ್ಲಿ ಬಂದು ಮಗುವೊಂದನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಪ್ರಕರಣ ಸಂಬಂಧ ಇಬ್ಬರು ರೌಡಿಗಳು ಸೇರಿ ಐವರನ್ನು ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಾಗಲಗುಂಟೆಯ ರೌಡಿ ಬಾಲಕೃಷ್ಣ(23), ಯಲಹಂಕದ ರೌಡಿ ಚೇತನ್ ಕುಮಾರ್(27), ಮಲ್ಲಸಂದ್ರದ ಪುನೀತ್(24), ಶಿವಮೊಗ್ಗದ ಪೃಥ್ವಿ(23), ಸಿಂಗಾಪುರ ಲೇಔಟ್‍ನ ರೋಹನ್(24) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ವಸಂತರಾವ್ ಪಾಟೀಲ್ ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಡಿ.31ರಂದು ಭೋವಿಪಾಳ್ಯದ ಖಾಸಗಿ ಕಂಪೆನಿಯ ಉದ್ಯೋಗಿ ಸಮಯ ನಾಯ್ಕ್ ಅವರ ಮನೆಗೆ ಪೊಲೀಸರ ನೆಪದಲ್ಲಿ ಮನೆಯೊಳಗೆ ಬಂದು ಮನೆಯಲ್ಲಿದ್ದ ನಗದು ಚಿನ್ನಾಭರಣವನ್ನು ತೆಗೆದುಕೊಂಡು ಅವರ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಸುತ್ತಾಡಿಸಿ, ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿ, ನಂತರ ಬಿಟ್ಟು ಹೋಗಿದ್ದರು.

ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದರೋಡೆ, ಅಪಹರಣ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಿ, ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಹೇಳಿದ್ದಾರೆ.

ಬಂಧಿತರಿಂದ 16 ಲಕ್ಷ ಮೌಲ್ಯದ 318 ಗ್ರಾಂ ಚಿನ್ನಾಭರಣ ಮತ್ತು 10.3 ಲಕ್ಷ ರೂ. ನಗದು ಹಣ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರವಾಹನಗಳು ಮತ್ತು 1 ಚಾಕುವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News