ಕೋವಿಡ್ ಪರೀಕ್ಷೆ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಏರಿಸಿದ ಬಿಬಿಎಂಪಿ

Update: 2022-01-15 18:34 GMT

ಬೆಂಗಳೂರು, ಜ.15: ನಗರದಲ್ಲಿ ಕೋವಿಡ್ ಕಂಟೇನ್ಮೆಂಟ್ ಜೋನ್‍ಗಳ ಸಂಖ್ಯೆ 578ಕ್ಕೆ ಏರಿಕೆಯಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಕೋವಿಡ್ ಪರೀಕ್ಷೆಗಳನ್ನು ಒಂದು ಲಕ್ಷಕ್ಕೆ ಏರಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. 

ನಗರದಲ್ಲಿ ಇದುವರೆಗೂ 2 ಕೋಟಿಗೂ ಅಧಿಕ ಮಂದಿಗೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು, 13 ಲಕ್ಷಕ್ಕಿಂತ ಅಧಿಕ ಪಾಸಿಟೀವ್ ಪ್ರಕರಣಗಳು ಪತೆಯಾಗಿವೆ. 16,383 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದರೆ, 12,47,696 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ನಗರದಲ್ಲಿ ಶೇ.14.04ರಷ್ಟು ಪಾಸಿಟಿವಿಟಿ ದರ ಇದ್ದು, ದೇಶದ ಮಹಾನಗರಗಳ ಪೈಕಿ ಎರಡನೆ ಸ್ಥಾನದಲ್ಲಿದೆ. ದೆಹಲಿ ಮೊದಲ ಸ್ಥಾನದಲ್ಲಿದ್ದು, ಮುಂಬೈ ಮೂರನೆ ಸ್ಥಾನದಲ್ಲಿದೆ ಎಂದು ಬಿಬಿಎಂಪಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. 

ಬಿಬಿಎಂಪಿಯ ವಾರ್ಡ್‍ಗಳ ಪೈಕಿ ಬೆಳ್ಳಂದೂರು, ಬೇಗೂರು, ಎಚ್‍ಎಸ್‍ಆರ್ ಲೇಔಟ್ ಸೇರಿದಂತೆ ನ್ಯೂ ತಿಪ್ಪಸಂದ್ರ ವಾರ್ಡ್‍ಗಳಲ್ಲಿ ಅತೀ ಹೆಚ್ಚು ಕೊರೋನ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು, ಮುನೇಶ್ವರ ನಗರ, ಕುಶಾಲ್ ನಗರ, ದೇವರ ಜೀವನಹಳ್ಳಿ ವಾರ್ಡ್‍ಗಳಲ್ಲಿ ಪ್ರತಿನಿತ್ಯ 5ಕ್ಕಿಂತ ಕಡಿಮೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ಪಾಲಿಕೆ ತಿಳಿಸಿದೆ. 

ಪಾಲಿಕೆಯ ಎಂಟು ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಕಂಟೇನ್‍ಮೆಂಟ್ ಜೋನ್‍ಗಳ ಸಂಖ್ಯೆ 227ಕ್ಕೆ ಏರಿಕೆಯಾಗಿದ್ದು, ಅತಿಹೆಚ್ಚು ಕಂಟೇನ್ಮೆಂಟ್ ಜೋನ್‍ಗಳಿವೆ. ಆರ್‍ಆರ್ ನಗರದಲ್ಲಿ 4 ಕಂಟೇನ್ಮೆಂಟ್ ಜೋನ್‍ಗಳಿದ್ದು, ಅತಿಕಡಿಮೆ ಕಂಟೇನ್ಮೆಂಟ್ ಜೋನ್ ಹೊಂದಿರುವ ವಲಯ ಎಂದು ಪಾಲಿಕೆ ಗುರುತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News