ರಾಜ್ಯದಲ್ಲಿ ಕೇಂದ್ರ ಶಿಫಾರಸು ಮಾಡಿರುವ ಎರಡು ಕೋವಿಡ್ ಔಷಧಗಳ ತೀವ್ರ ಅಭಾವ

Update: 2022-01-16 03:44 GMT
ಸಾಂದರ್ಭಿಕ ಚಿತ್ರ (Photo credit: PTI)

ಬೆಂಗಳೂರು, ಜ.16: ಕೇಂದ್ರ ಸರ್ಕಾರ ಕೋವಿಡ್-19 ಸೋಂಕಿತರಿಗೆ ಶಿಫಾರಸು ಮಾಡಿರುವ ವಿವಿಧ ಗುಣಮಟ್ಟದ ಒಟ್ಟು ಆರು ಔಷಧಿಗಳ ಪೈಕಿ ಡೆಕ್ಸಾಮೆಥಸೋನ್ ಮತ್ತು ಪೊಸಕೊನಝೋಲ್ ಚುಚ್ಚುಮದ್ದಿನ ಅಭಾವ ರಾಜ್ಯದಲ್ಲಿ ತೀವ್ರವಾಗಿ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಕನಿಷ್ಠ 11 ಲಕ್ಷ ಡೆಕ್ಸಾಮೆಥಸೋನ್ ದಾಸ್ತಾನು ಇಡುವಂತೆ ಕೇಂದ್ರ ಸರ್ಕಾರ ಕಡ್ಡಾಯಪಡಿಸಿದ್ದರೆ, ರಾಜ್ಯದಲ್ಲಿ ಸದ್ಯ ಕೇವಲ 50 ಸಾವಿರ ಡೆಕ್ಸಾಮೆಥಸೋನ್ ಸ್ಟಿರಾಯ್ಡ್ ಚುಚ್ಚುಮದ್ದು ಮಾತ್ರವೇ ಸಂಗ್ರಹವಿದೆ. ಅಂತೆಯೇ 10 ಸಾವಿರ ಪೊಸಕೊನಝೋಲ್ ಚುಚ್ಚುಮದ್ದು ದಾಸ್ತಾನಿಗೆ ಶಿಫಾರಸು ಮಾಡಿದ್ದರೆ, ರಾಜ್ಯದಲ್ಲಿ ಕೇವಲ 1,200 ಚುಚ್ಚುಮದ್ದು ಇದೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್ಎಂಎಸ್ಸಿಎಲ್) ಈಗಾಗಲೇ ಖರೀದಿ ಆದೇಶವನ್ನು ಮಾಡಿದ್ದು, ಒಂದು ವಾರದ ಒಳಗಾಗಿ ಸಾಕಷ್ಟು ಪ್ರಮಾಣದ ಡೆಕ್ಸಾಮೆಥಸೋನ್ ದಾಸ್ತಾನು ಆಗಲಿದೆ ಎಂದು ರಾಜ್ಯ ಆರೋಗ್ಯ ಆಯುಕ್ತ ಡಿ. ರಣದೀಪ್ ಹೇಳಿದ್ದಾರೆ. ಈ ಚುಚ್ಚುಮದ್ದನ್ನು ತೀವ್ರತರ ಶ್ವಾಸಕೋಶದ ರೋಗ ಇರುವವರಿಗಾಗಿ ಬಳಸಲಾಗುತ್ತದೆ. ಆದರೆ ಈ ಬಾರಿ ಇಂಥ ರೋಗಲಕ್ಷಣ ಕಡಿಮೆ ಇರುವ ಕಾರಣದಿಂದ ತಕ್ಷಣಕ್ಕೆ ಯಾವುದೇ ಕೊರತೆಯಾಗದು ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಅವರು ವಿವರಿಸಿದರು.

ಅಂತೆಯೇ ಶಿಲೀಂಧ್ರ ನಾಶಕ ಪೊಸಕೊನಝೋಲ್ ಚುಚ್ಚುಮದ್ದನ್ನು, ಚಿಕಿತ್ಸೆಗೆ ಮೊದಲ ಆದ್ಯತೆಯಾಗಿರುವ ಲಿಂಪೊಸೊಮಲ್ ಅಂಪೊಥೆರಿಸನ್ ಬಿಗೆ ಪ್ರತಿರೋಧವಿದ್ದ ಪಕ್ಷದಲ್ಲಿ ಮ್ಯುಕ್ರೊಮೈಕೋಸಿಸ್ ಸಮಸ್ಯೆ ಇರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಪೊಸಕೊನಝೋಲ್ ಲಭ್ಯತೆ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಡೆಕ್ಸಾಮೆಥಸೋನ್, ತೀವ್ರ ಕೋವಿಡ್ ನಿರ್ವಹಣೆಗೆ ಪ್ರಮುಖ ಚುಚ್ಚುಮದ್ದು ಆಗಿದ್ದು, ಇದಕ್ಕೆ ಪರ್ಯಾಯ ಔಷಧಿಯಾದ ಮಿಥೈಲ್ಪ್ರೆಡ್ನಿಸೊಲೋನ್ 2.22 ಲಕ್ಷದಷ್ಟು ದಾಸ್ತಾನು ಇದೆ ಎಂದು ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್ ನ ರೋಗಶಾಸ್ತ್ರ ವಿಭಾಗದ ನಿರ್ದೇಶಕ ಡಾ.ವಿವೇಕ್ ಪಡೇಗಲ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News