ದ್ವೇಷ ಸೃಷ್ಟಿಸಲು ಖಾತೆಗಳಲ್ಲಿ ʼಸಿಖ್‌ ಹೆಸರುʼ ಬಳಸಿದ ಬುಲ್ಲಿ ಬಾಯಿ ಪ್ರಕರಣದ ಆರೋಪಿಗಳು: ಪೊಲೀಸರಿಂದ ಮಾಹಿತಿ

Update: 2022-01-17 14:30 GMT
Photo: Twitter
 

ಮುಂಬೈ: ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸೃಷ್ಟಿಸಲಾಗಿದ್ದ 'ಬುಲ್ಲಿ ಬಾಯಿ' ಆ್ಯಪ್‌ಗೆ ಸಂಬಂಧಿಸಿದ ಪ್ರಕರಣದ ಕುರಿತು ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಇವರು ಸಮಾಜದ ಶಾಂತಿ ಕದಡುವ ಉದ್ದೇಶದಿಂದ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಸಿಖ್ ಸಮುದಾಯದ ಹೆಸರುಗಳನ್ನು ಬಳಸುತ್ತಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಕರಣದ ಮೂವರು ಆರೋಪಿಗಳಾದ ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿರೋಧಿಸಿ ನಗರ ಪೊಲೀಸ್ ಸೈಬರ್ ಸೆಲ್ ಉಪನಗರ ಬಾಂದ್ರಾದಲ್ಲಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಅಫಿಡವಿಟ್ ಸಲ್ಲಿಸಿತು.

ಆರೋಪಿಗಳ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ಮುಂದಿನ ವಿಚಾರಣೆಗೆ ಮಂಗಳವಾರ ಮುಂದೂಡಿತು. ಆರೋಪಿಗಳು ಪರಾರಿಯಾಗಬಹುದು ಅಥವಾ ಪ್ರಕರಣದಲ್ಲಿ ಸಾಕ್ಷ್ಯವನ್ನು ಹಾಳುಮಾಡಬಹುದು ಎಂದು ವಾದಿಸಿ, ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸುವಂತೆ ಪೊಲೀಸರು ಸೋಮವಾರ ನ್ಯಾಯಾಲಯವನ್ನು ಕೋರಿದರು.

ಪೊಲೀಸರ ಅಫಿಡವಿಟ್ ಪ್ರಕಾರ, ಝಾ, ಸಿಂಗ್ ಮತ್ತು ರಾವತ್ ಅವರು ʼನಿರ್ದಿಷ್ಟ ಮನಸ್ಥಿತಿಯೊಂದಿಗೆʼ ಕಾರ್ಯನಿರ್ವಹಿಸುವ ಹಲವಾರು ಸಾಮಾಜಿಕ ಮಾಧ್ಯಮ ಗುಂಪುಗಳ ಭಾಗವಾಗಿದ್ದರು. ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದರು ಮತ್ತು ಸಮಾಜದಲ್ಲಿ ಶಾಂತಿ ಕದಡುವಂತಹ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಅದು ಉಲ್ಲೇಖಿಸಿದೆ.

ಈ ಆರೋಪಿಗಳು ಎರಡು ಧರ್ಮಗಳ ನಡುವೆ ದ್ವೇಷ ಸೃಷ್ಟಿಸುವ ಉದ್ದೇಶದಿಂದ ತಮ್ಮ ಟ್ವಿಟರ್‌ ಖಾತೆಯಲ್ಲಿ ಸಿಖ್‌ ಸಮುದಾಯದ ಹೆಸರುಗಳನ್ನು ಬಳಸುತ್ತಿದ್ದರು. ಇವಿಗಳಿಂದಲೇ ಸಾಮಾಜಿಕ ತಾಣದಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಪೋಸ್ಟ್‌ ಮಾಡುತ್ತಿದ್ದರು. ಆರೋಪಿಗಳನ್ನು ಸಮಯಕ್ಕೆ ಸರಿಯಾಗಿ ಬಂಧಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗಿದೆ. ಇದರ ಹಿಂದಿರುವ ಇನ್ನಿತರ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಸಿಖ್ ಗುಂಪಿನ ಅನುಯಾಯಿಗಳಂತೆ ಬಿಂಬಿಸಿಕೊಳ್ಳುವ ಮೂಲಕ ಬುಲ್ಲಿ ಬಾಯಿ ಅಪ್ಲಿಕೇಶನ್ ಅನ್ನು ರಚಿಸಿದ್ದಾರೆ ಮತ್ತು ಇದರ ಹಿಂದಿನ ಉದ್ದೇಶವನ್ನು ಹೆಚ್ಚಿನ ತನಿಖೆಯ ಮೂಲಕ ಕಂಡುಹಿಡಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳು ಬುಲ್ಲಿ ಬಾಯಿ ಆ್ಯಪ್ ಹೊರತುಪಡಿಸಿ ಜುಲೈ 2021 ರ ‘ಸುಲ್ಲಿ’ ಡೀಲ್ಸ್ ಆ್ಯಪ್‌ನಲ್ಲಿ ಸಕ್ರಿಯರಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಇದುವರೆಗೆ ನಡೆಸಲಾದ ತನಿಖೆಯ ಪ್ರಕಾರ, ಮೂವರು ತಮ್ಮ ಕಸ್ಟಡಿ ವಿಚಾರಣೆಯ ಸಮಯದಲ್ಲಿ ಬುಲ್ಲಿ ಬಾಯಿ ಅಪ್ಲಿಕೇಶನ್ ಅನ್ನು @giyu84, @giyu44 ಮತ್ತು @giyu94 ಟ್ವಿಟರ್ ಖಾತೆಗಳಿಂದ ರಚಿಸಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಮೂರು ಖಾತೆಗಳು ಆ್ಯಪ್ ಅನ್ನು ಹೊಂದಿಸಲು ಗಿಟ್‌ಹಬ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೂರು ಖಾತೆಗಳನ್ನು ಬಿಷ್ಣೋಯ್ ನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳು ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಜಿಮೇಲ್‌ನಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News