ಆರೋಪಿಗಳಾದ ಪ್ರಸಾದ್, ಚೇತನ್ ಕೊಟ್ಟಾರಿ ಬಂಧನಕ್ಕೆ ಆಕ್ಷೇಪ; ಪೊಲೀಸರ ವರ್ತನೆ ಬಗ್ಗೆ ತನಿಖೆಗೆ ಕುಟುಂಬಸ್ಥರ ಒತ್ತಾಯ

Update: 2022-01-17 14:46 GMT

ಮಂಗಳೂರು, ಜ.17: ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಂದ ಆರೋಪಿಗಳಾದ ಪ್ರಸಾದ್ ಮತ್ತು ಚೇತನ್ ಕೊಟ್ಟಾರಿ ಬಂಧನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕುಟುಂಬಸ್ಥರು, ಈ ಬಗ್ಗೆ ಪೊಲೀಸರ ವರ್ತನೆಯ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿಂದು ಈ ಆರೋಪ ಮಾಡಿದ ಬಂಧಿತ ಆರೋಪಿಗಳಾದ ಚೇತನ್ ಕೊಟ್ಟಾರಿ ಹಾಗೂ ಪ್ರಸಾದ್‌ರವರ ಪತ್ನಿಯರು ಹಾಗೂ ಕುಟುಂಬಸ್ಥರು, ಇಬ್ಬರೂ ಪ್ರಕರಣದ ಪ್ರಮುಖ ಆರೋಪಿಯಾದ ಆಕಾಶಭವನ ಶರಣ್ ಬಗ್ಗೆ ಪರಿಚಯವನ್ನೂ ಹೊಂದಿಲ್ಲ ಎಂದರು.

ಬಂಧಿತ ಆರೋಪಿ ಚೇತನ್ ಕೊಟ್ಟಾರಿ ಪತ್ನಿ ಭಾಗ್ಯಶ್ರೀ ಮಾತನಾಡಿ, ಜ. 13ರಂದು ಸಿಸಿಬಿ ಪೊಲೀಸರು ತಮ್ಮ ಗಂಡನನ್ನು ವಶಕ್ಕೆ ಪಡೆದು 2021ರ ಡಿಸೆಂಬರ್ 9ರಂದು ದಾಖಲಾದ ಅಪರಾಧ ಪ್ರಕರಣದ ಐದನೆ ಆರೋಪಿಯನ್ನಾಗಿಸಿದ್ದಾರೆ ಎಂದರು.
ಆದರೆ ಅವರು ಕ್ರಿಮನಲ್ ಅಪರಾಧದಲ್ಲಿ ಭಾಗಿಯಾಗಿಲ್ಲ. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದು ಅಸಂವಿಧಾನಿಕ. ಈ ಹಿಂದೆ ಅವರ ಮೇಲಿದ್ದ ರೌಡಿ ಶೀಟರ್ ಕೂಡಾ ಅವರ ಗುಣನಡತೆಯ ಹಿನ್ನೆಲೆಯಲ್ಲಿ ತೆರವಾಗಿತ್ತು. ಇದೀಗ ಮತ್ತೆ ಅವರನ್ನು ಆರೋಪಿಯನ್ನಾಗಿಸಿ ಕುಟುಂಬಕ್ಕೆ ಕಳಂಕ ತರಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಫರಂಗಿಪೇಟೆಯ ನಿಕ್ಷೀತ ಮಾತನಾಡಿ, ನನ್ನ ಪತಿ ಪ್ರಸಾದ್ ವಿರುದ್ಧ ಈ ಹಿಂದೆಯೂ ಯಾವುದೇ ರೀತಿಯ ಅಪರಾಧ ಪ್ರಕರಣಗಳಿಲ್ಲ. ಅವರು ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳೊಂದಿಗೆ ಪರೋಪಕಾರಿಯಾಗಿದ್ದಾರೆ. ಇದೀಗ ಸುಳ್ಳು ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿಸಿರುವುದು ಕುಟುಂಬಕ್ಕೆ ನೋವು ತಂದಿದೆ ಎಂದರು.

‘‘ನಮ್ಮ ಅಣ್ಣ ಸಮಾಜದಲ್ಲಿ ಸಂಕಷ್ಟದಲ್ಲಿದ್ದವರಿಗೆ ವೆಯಕ್ತಿಕವಾಗಿಯೂ ನೆರವು ಮಾಡುತ್ತಾನೆ. ಪೊಲೀಸರು ಹೇಳಿರುವಂತೆ ಆತನಿಗೆ ಆ ಪ್ರಕರಣದ ಮುಖ್ಯ ಆರೋಪಿಯ ಪರಿಚಯ ಕೂಡಾ ಇಲ್ಲ. ಸಂಘಟನೆಗಳ ಪರವಾಗಿ ಕೆಲಸ ಮಾಡುತ್ತಿದ್ದ ಆತನ ಬಗ್ಗೆ ಎಲ್ಲರಿಗೂ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಘಟನೆಗಳವರು ಯಾಕೆ ಮೌನವಾಗಿದ್ದಾರೆ ಎಂದು ತಿಳಿಯುತ್ತಿಲ್ಲ. ನಮಗೆ ನ್ಯಾಯ ದೊರೆಯಬೇಕು. ಪೊಲೀಸರ ಈ ನಡೆಯ ಬಗ್ಗೆ ಸಂಸದರು, ಶಾಸಕರಿಗೆ ಮನವಿ ನೀಡಲು ನಿರ್ಧರಿಸಿದ್ದೇವೆ’’ ಎಂದು ಬಂಧಿತ ಆರೋಪಿ ಪ್ರಸಾದ್ ಸಹೋದರಿ ಗಾಯತ್ರಿ ಹೇಳಿದರು.
ಗೋಷ್ಠಿಯಲ್ಲಿ ರಾಜೇಶ್, ಮಾಧುರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News