ಕೋವಿಡ್ ಅಪಾಯ ಭತ್ತೆ, ಪ್ರೋತ್ಸಾಹ ಧನ ನೀಡುವಂತೆ ಪಟ್ಟು: ಕಪ್ಪು ಪಟ್ಟಿ ಧರಿಸಿ ರಾಜ್ಯಾದ್ಯಂತ ಶುಶ್ರೂಷಕರ ಧರಣಿ

Update: 2022-01-17 15:34 GMT

ಬೆಂಗಳೂರು, ಜ.17: ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ಕೋವಿಡ್ ವೇಳೆ ಕೆಲಸ ಮಾಡಿದ ಅಪಾಯ ಭತ್ತೆಯನ್ನು ರಾಜ್ಯ ಸರಕಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕೈಗೆ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು.

ಸೋಮವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಜಿಲ್ಲೆ ಕೇಂದ್ರದ ಆಸ್ಪತ್ರೆಗಳಲ್ಲಿನ ಶುಶ್ರೂಷಕರು, ಕಪ್ಪು ಪಟ್ಟಿ ಧರಿಸಿ, ಇಡೀ ದಿನ ಕಾರ್ಯನಿರ್ವಹಿಸಿದರು.

ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳು ತಮ್ಮ ಜೀವದ ಹಂಗನ್ನು ತೊರೆದು ಹಗಲಿರುಳು ಕೋವಿಡ್ ರೋಗಿಗಳ ಆರೈಕೆಯನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರಕಾರವು ಕೊರೋನ ಸೇನಾನಿಗಳಿಗೆ ಕೋವಿಡ್ ಅಪಾಯ ಭತ್ತೆ, ಪ್ರೋತ್ಸಾಹ ಭತ್ತೆ ನೀಡುವುದಾಗಿ ಆದೇಶಿಸಿತ್ತು.

ಆದರೆ ಅದು ಕಡತಗಳಲ್ಲೆ ಉಳಿದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ಕೋವಿಡ್ ಅಪಾಯ ಭತ್ತೆ ನೀಡಿ ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ನೀಡದೆ ಇರುವುದು ಬೇಸರ ತಂದಿದೆ ಎಂದು ಶೂಶ್ರೂಷಕರು ಬೇಸರ ವ್ಯಕ್ತಪಡಿಸಿದರು.

ಸರಕಾರದ ತಾರತಮ್ಯ ಧೋರಣೆಯನ್ನು ಖಂಡಿಸಿ ಇಂದಿನಿಂದ ಏಳು ದಿನಗಳ ಕಾಲ ರಾಜ್ಯದಾದ್ಯಂತ ಎಲ್ಲ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಪ್ಪು ಪಟ್ಟಿ ಧರಿಸಿ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಿದ್ದೇವೆ. ಹಾಗಾಗಿ, ಸರಕಾರ ಕೂಡಲೇ ಕೋವಿಡ್ ಅಪಾಯ ಭತ್ತೆಯನ್ನು ಮಂಜೂರು ಮಾಡಲು ಮುಂದಾಗಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News